– ಯುವಕರ ಬಳಿ ಪೊಲೀಸರು ಹಣ ಕೇಳಿರುವ ಆರೋಪ
– ಹೋಟೆಲ್ ಮಾಲೀಕರ ವಿರುದ್ಧ ಎಫ್‌ಐಆರ್
ಬೆಂಗಳೂರು: ವೀಕೆಂಡ್‌ನಲ್ಲಿ ಸ್ನೇಹಿತರೊಂದಿಗೆ ಹೋಟೆಲ್‌ನಲ್ಲಿ ಪಾರ್ಟಿ (Party) ಮಾಡುತ್ತಿದ್ದ ವೇಳೆ ಪೊಲೀಸರು (Police) ಧಿಡೀರ್ ಎಂಟ್ರಿ ಕೊಟ್ಟ ಪರಿಣಾಮ ಭಯಗೊಂಡ ಯುವತಿ ಹೋಟೆಲ್ ಬಾಲ್ಕನಿಯಿಂದ (Hotel Balcony) ಕೆಳಗೆ ಹಾರಿ ಗಂಭೀರ ಗಾಯಗೊಂಡಿರುವ ಘಟನೆ ಹೆಚ್‌ಎಎಲ್‌ನ (HAL) ಎಇಸಿಎಸ್ ಲೇಔಟ್ ನ ಹೊಟೇಲ್‌ನಲ್ಲಿ ನಡೆದಿದೆ.
ಘಟನೆಯಲ್ಲಿ ಯುವತಿಯ ತಲೆ, ಮೈಕೈಗೆ ಗಂಭೀರ ಗಾಯಗಳಾಗಿವೆ. ಸದ್ಯ ಗಂಭೀರ ಗಾಯಗೊಂಡಿರುವ ಯುವತಿಯನ್ನು ಕುಂದಲಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಇದನ್ನೂ ಓದಿ: ವಿರಾಜಪೇಟೆ ಬಳಿ ಹೊತ್ತಿ ಉರಿದ ಪ್ರವಾಸಿ ಬಸ್ – ತಪ್ಪಿದ ಭಾರೀ ದುರಂತ
ಘಟನೆ ಏನು?
ಶನಿವಾರ ರಾತ್ರಿ ಯುವತಿ ಸೇರಿದಂತೆ ಎಂಟು ಜನ ಸ್ನೇಹಿತರು ಸೇರಿ ಪಾರ್ಟಿ ಆಯೋಜಿಸಿದ್ದರು. ಪಾರ್ಟಿಗಾಗಿ ಮೂರು ರೂಂಗಳನ್ನು ಬುಕ್ ಮಾಡಿದ್ದರು. ಬಳಿಕ ಯುವಕರು ಹಾಗೂ ಯುವತಿಯರು ಹಾಡುಗಳನ್ನ ಹಾಕಿಕೊಂಡು ಡ್ಯಾನ್ಸ್ ಮಾಡುತ್ತಿದ್ದರು. ಯುವಕರ ಪಾರ್ಟಿ, ಡ್ಯಾನ್ಸ್ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೆಲ ನಿಮಿಷಗಳ ಬಳಿಕ ಹೊಟೇಲ್‌ಗೆ ಹೊಯ್ಸಳ ಪೊಲೀಸರು ಆಗಮಿಸಿದ್ದರು. ಪೊಲೀಸರು ಬಂದ ವಿಚಾರ ತಿಳಿದು ಬಾಲ್ಕನಿಗೆ ತೆರಳಿದ ಯುವತಿ ಭಯದಿಂದ ಬಾಲ್ಕನಿಯಿಂದ ಹಾರಿದ್ದಾಳೆ. ಕಬ್ಬಿಣದ ಗ್ರಿಲ್ಸ್ ಮೇಲೆ ಬಿದ್ದು ಯುವತಿಗೆ ಗಂಭೀರ ಗಾಯಗಳಾಗಿವೆ. ಬಳಿಕ ಯುವತಿಯನ್ನ ಆಕೆಯ ಸ್ನೇಹಿತರು ಆಸ್ಪತ್ರೆಗೆ ಸೇರಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಮಂಜು, ಹೊಗೆ – ಇಂಡಿಗೋ ವಿಮಾನದಲ್ಲಿ ರಾಜ್ಯದ 21 ಶಾಸಕರು ಲಾಕ್!
ಪಾರ್ಟಿ ವಿಚಾರ ತಿಳಿದು ಹೊಯ್ಸಳ ಸಿಬ್ಬಂದಿ ಹೊಟೇಲ್‌ಗೆ ಎಂಟ್ರಿ ಕೊಟ್ಟ ವೇಳೆ ಪಾರ್ಟಿ ವೀಡಿಯೋ ತೋರಿಸಿ ದೂರು ಬಂದಿದೆ ಎಂದಿದ್ದರು. ನಂತರ ಯುವಕರ ಬಳಿ ಹಣ ಕೇಳಿದ್ದಾರೆ ಎಂದು ಯುವಕನೊಬ್ಬ ಆರೋಪಿಸಿದ್ದಾನೆ. ಫೋನ್ ಪೇ ಮಾಡುತ್ತೇವೆ ಎಂದು ಯುವಕರು ಹೇಳಿದಾಗ ಫೋನ್ ಪೇ ಬೇಡ, ಕ್ಯಾಶ್ ಕೊಡಿ ಎಂದು ಪೊಲೀಸರು ಕೇಳಿದ್ದಾರೆ. ಸರಿ ಎಂದು ಎಟಿಎಂನಲ್ಲಿ ಹಣ ತರುತ್ತೇನೆ ಎಂದು ಯುವಕ ಹೋಟೆಲ್‌ನಿಂದ ಹೊರಗೆ ಬಂದ ವೇಳೆ ಯುವತಿ ಹೋಟೆಲ್ ಬಾಲ್ಕನಿಯಿಂದ ಹಾರಿದ್ದಾಳೆ. ಸದ್ಯ ಘಟನೆ ಬಗ್ಗೆ ಹೆಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿ, ಘಟನೆ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಶಾಮನೂರು ಕುಟುಂಬಸ್ಥರಿಗೆ ಮುರುಘಾ ಶ್ರೀ ಸಾಂತ್ವನ
ಇನ್ನು ಘಟನೆಗೆ ಸಂಬಂಧಿಸಿದಂತೆ ಹೋಟೆಲ್ ಮಾಲೀಕರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಯುವತಿ ತಂದೆ ಕೊಟ್ಟ ದೂರಿನ ಮೇರೆಗೆ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹೋಟೆಲ್ ಲಾಡ್ಜ್‌ನ ಬಾಲ್ಕನಿಯಲ್ಲಿ ಸುರಕ್ಷತೆ ವಹಿಸದೆ ನಿರ್ಲಕ್ಷ್ಯ ಎಂದು ದೂರು ದಾಖಲಿಸಲಾಗಿದೆ. ಪೊಲೀಸರ ತಪ್ಪು ಮುಚ್ಚಿಡಲು ಹೋಟೆಲ್ ಮಾಲೀಕರ ಮೇಲೆ ಎಫ್‌ಐಆರ್ ಮಾಡಿರುವ ಕುರಿತು ಅನುಮಾನ ವ್ಯಕ್ತವಾಗಿದೆ. ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಉಗ್ರರ ದಾಳಿ – ಪಾಕ್ ಮೂಲದ ತಂದೆ, ಮಗನ ಹುಚ್ಚಾಟಕ್ಕೆ 16 ಬಲಿ

