ಹಳ್ಳ ಹಿಡೀತಾ ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆ ಕೇಸ್? – A1 ಆರೋಪಿಯನ್ನೇ ಬಂಧಿಸದ ಪೊಲೀಸರು

Public TV
3 Min Read

– ಕೊಡಗಿನಲ್ಲಿ ತೆನ್ನೀರ್ ಮೈನಾ ಡಾನ್ಸ್‌ ಮಾಡುತ್ತಿದ್ದ ದೃಶ್ಯ ವೈರಲ್‌

ಮಡಿಕೇರಿ: ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ (Vinay somaiah Suicide Case) ಸಂಬಂಧಿಸಿದಂತೆ ರಾಜಕೀಯ ಕೆಸರೆರಚಾಟ ನಡೆಯುತ್ತಿದೆ. ಈ ನಡುವೆ ಪ್ರಕರಣ ಎ-1 ಆರೋಪಿ ಕೊಡಗಿನಲ್ಲಿ ರಾಜಾರೋಷವಾಗಿ ಓಡಾಟ ನಡೆಸುತ್ತಿದ್ದರೂ ಬೆಂಗಳೂರಿನ ಪೊಲೀಸರು (Bengaluru Police) ಯಾವುದೇ ಕ್ರಮ ಜರುಗಿಸದೇ ಇರುವುದು ಪ್ರಕರಣದ ತನಿಖೆ ಹಳ್ಳ ಹಿಡೀತಾ ಅನ್ನೋ ಅನುಮಾನ ಹುಟ್ಟುಹಾಕಿದೆ.

ಹೌದು. ಕೊಡಗಿನ ಬಿಜೆಪಿ ಕಾರ್ಯಕರ್ತ (BJP Worker) ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡಿತ್ತು. ಪ್ರಕರಣದ ಮೊದಲ ಆರೋಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತ ತೆನ್ನೀರ್ ಮೈನಾ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೂ, ಪೊಲೀಸರು ಬಂಧಿಸಿಲ್ಲ. ಕನಿಷ್ಠ ಪಕ್ಷ ವಿಚಾರಣೆ ಕೂಡ ನಡೆಸದಿರೋದು ತೀವ್ರ ಟೀಕೆಗೆ ಗುರಿಯಾಗಿದೆ. ಇದನ್ನೂ ಓದಿ: ವಿನಯ್ ಸೋಮಯ್ಯ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ – ಪತ್ನಿಗೆ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್

Madikeri party member vinay somaiah commits suicide at BJP office in Nagawara Bengaluru

ಈ ನಡುವೆ ಕಳೆದ 2 ದಿನಗಳ ಹಿಂದೆ ಮಡಿಕೇರಿ ತಾಲೂಕಿನ ಅರವತ್ತೋಕ್ಲು ಗ್ರಾಮದಲ್ಲಿ ನಡೆದ ಊರ ಜಾತ್ರೆಯಲ್ಲಿ ತೆನ್ನೀರ್ ಮೈನಾ ಕಾಣಿಸಿಕೊಂಡಿದ್ದಾನೆ. ಪೊಲೀಸರ ಭಯವೇ ಇಲ್ಲದೇ ಗ್ರಾಮದ ದೇವಾಲಯದ ವಾರ್ಷಿಕೋತ್ಸವದಲ್ಲಿ ಕುಣಿದು ಕುಪ್ಪಳಿಸಿದ್ದಾನೆ. ತನ್ನೀರ್‌ ಮೈನಾ ನೃತ್ಯ ಮಾಡುವ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದೆ. ಇನ್ನೂ ಮೈನಾ ಕೊಡಗಿನಲ್ಲೇ ಓಡಾಟ ನಡೆಸುತ್ತಿರುವುದರಿಂದ ಬಿಜೆಪಿ ನಾಯಕರು ಸರ್ಕಾರ ಹಾಗೂ ಪೊಲೀಸ್‌ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: ವಿನಯ್‌ ಸೋಮಯ್ಯ ಯಾರು ಅನ್ನೋದೆ ಗೊತ್ತಿಲ್ಲ: ಶಾಸಕ ಪೊನ್ನಣ್ಣ

ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ʻಪಬ್ಲಿಕ್ ಟಿವಿʼಯೊಂದಿಗೆ ಮಾತನಾಡಿ, ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೇತ್ ನೋಟ್‌ನಲ್ಲಿ ತನ್ನ ಸಾವಿಗೆ ಯಾರೆಲ್ಲ ಕಾರಣ ಎಂದು ಉಲ್ಲೇಖ ಮಾಡಿದ್ದಾರೆ. ಆದರೆ ತನ್ನಿರ್‌ ಮೈನಾ ರಕ್ಷಣೆಗೆ ಸ್ಥಳೀಯ ಶಾಸಕರು ಹಾಗೂ ಪ್ರಭಾವಿ ಸಚಿವರು ಅಲ್ಲಿರುವ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಯುಡಿಆರ್‌ ಮಾಡಬೇಕು, ಅಸ್ವಾಭಾವಿಕ ಸಾವು ಎಂಬ ಪ್ರಕರಣ ದಾಖಲು ಮಾಡಬೇಕು ಎಂದು ತಿಳಿಸಿದ್ದಾರೆ. ತನ್ನೀರ್‌ ಮೈನಾ ಮೇಲೆ ಪ್ರಕರಣ ದಾಖಲು ಮಾಡಿದಕ್ಕೆ ಒಂದೇ ದಿನದಲ್ಲಿ ಹೆಣ್ಣೂರು ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್‌ ಅವರನ್ನ ವರ್ಗ ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ವರ್ಗ ಮಾಡಿದ ಠಾಣೆಗೆ ಇವರು ಹೇಳಿದ ಹಾಗೆ ಕುಣಿಯುವ ಒಬ್ಬ ಅಧಿಕಾರಿಯನ್ನ ನೇಮಕ ಮಾಡಿದ್ದಾರೆ, ಇದರಲ್ಲೇ ಅರ್ಥವಾಗುತ್ತೆ, ಈ ಪ್ರಕರಣವನ್ನ ಮುಚ್ಚಿ ಹಾಕೋದಕ್ಕೆ ಏನೆಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಅಂತ. ಅಷ್ಟೇ ಅಲ್ಲದೇ ಈಗ ವಿನಯ್ ಸಂಪರ್ಕದಲ್ಲಿ ಇರುವ ಕುಟುಂಬಸ್ಥರಿಗೆ ಹಾಗೂ ಸ್ನೇಹಿತರಿಗೆ ಪೊಲೀಸರಿಂದ ನೋಟಿಸ್ ಕೋಡಿಸಲು ತಯಾರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ರಾಜಕೀಯ ಕಿರುಕುಳಕ್ಕೆ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ – ಡೆತ್‌ನೋಟ್‌ನಲ್ಲಿ ಸೀಕ್ರೆಟ್ ಬಯಲು

ಈ ನಡುವೆ ತಮ್ಮ ಪಕ್ಷದ ಕಾರ್ಯಕರ್ತ ತನ್ನೀರ್‌ ಮೈನಾ ಯಾವುದೇ ತಪ್ಪು ಮಾಡಿಲ್ಲ ಪೊಲೀಸರು ವಿಚಾರಣೆಗೆ ಕರೆದಾಗ ಅವರು ಹೋಗುತ್ತಾರೆ. ಅರೆಸ್ಟ್‌ ಮಾಡಬೇಕಾ ಬೇಡವಾ ಅನ್ನೋ ನಿರ್ಧಾರ ಪೊಲೀಸರು ತೆಗೆದುಕೊಳ್ತಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸಮರ್ಥನೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಪೊನ್ನಣ್ಣ ನೀನು ಕಾಂಪ್ಲಿಮೆಂಟರಿ ಎಂಎಲ್‌ಎ, ನಮ್ಮ ಸಿಟ್ಟು ಜಾಸ್ತಿ ಮಾಡಬೇಡ: ಪ್ರತಾಪ್ ಸಿಂಹ ವಾಗ್ದಾಳಿ

ವಿನಯ್ ಸೋಮಯ್ಯ ಆತ್ಮಹತ್ಯೆ ಕೇಸಲ್ಲಿ ಎ-1 ಆಗಿರೋ ತೆನ್ನೀರ್ ಮೈನಾ ವಿರುದ್ಧ ಈಗಾಗಲೇ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಿಚಾರಣೆಗೆ ಬರುವಂತೆ ನೋಟಿಸ್ ಕೂಡ ಪೊಲೀಸರು ಕೊಟ್ಟಿದ್ದಾರೆ. ಆದ್ರೆ, ರಾಜಾರೋಷವಾಗಿ ಮೈನಾ ಓಡಾಡುತ್ತಿದ್ದರೂ ಪೊಲೀಸರ ಕಣ್ಣು ಕುರುಡಾಗಿದ್ದು, ಈ ಪ್ರಕರಣವನ್ನು ಮುಚ್ಚಿ ಹಾಕಲು ರಾಜ್ಯ ಸರ್ಕಾರದ ಪ್ರಭಾವಿ ಸಚಿವರೇ ಮುಂದಾದ್ರಾ ಅನ್ನೋ ಅನುಮಾನ ಹುಟ್ಟುಹಾಕಿದೆ.

Share This Article