ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಗಂಡ, ಪ್ರೇಯಸಿ, ಆಕೆಯ ಕುಟುಂಬ ಸೇರಿ ಗರ್ಭಿಣಿಯನ್ನ ಕೊಂದು ಗೋಣಿಚೀಲದಲ್ಲಿ ತುಂಬಿ ಎಸೆದ್ರು

Public TV
2 Min Read

ಹೈದರಾಬಾದ್: ಗರ್ಭಿಣಿಯನ್ನ ಕೊಲೆ ಮಾಡಿ ಮೃತದೇಹವನ್ನ ಗೋಣಿಚೀಲದಲ್ಲಿ ತುಂಬಿ ಎಸೆದಿದ್ದ ಘಟನೆ ಹೈದರಾಬಾದ್‍ನಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನ ಮಂಗಳವಾರದಂದು ಮಾಧ್ಯಮಗಳ ಮುಂದೆ ಹಾಜರುಪಡಿಸಿದ್ರು.

ಆರೋಪಿಗಳೆಲ್ಲರೂ ಬಿಹಾರ ಮೂಲದವರಾಗಿದ್ದು, ಗರ್ಭಿಣಿಯನ್ನ ಕೊಲೆ ಮಾಡಿದ ನಂತರ ಶವವನ್ನ ಭಾಗಗಳಾಗಿ ಮಾಡಿ ಗೋಣಿಚೀಲದಲ್ಲಿ ತುಂಬಿ ಕೊಂಡಾಪುರ ಬೊಟಾನಿಕಲ್ ಗಾರ್ಡನ್ ಬಳಿ ಎಸೆದಿದ್ದರು. ಆರೋಪಿಗಳನ್ನ ಮಮತಾ ಜಾ, ಅನಿಲ್ ಜಾ, ಅಮರ್‍ಕಾಂತ್ ಜಾ ಹಾಗೂ ವಿಕಾಸ್ ಎಂದು ಗುರುತಿಸಲಾಗಿದೆ. ಪ್ರಮುಖ ಆರೋಪಿಗಳಾದ ವಿಕಾಸ್ ಹಾಗೂ ಅಮರ್‍ಕಾಂತ್ ತಲೆಮರೆಸಿಕೊಂಡಿದ್ದಾರೆ. ಉಳಿದ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು, ವಿಕಾಸ್‍ನ ಮಗ ಎನ್ನಲಾದ 7 ವರ್ಷದ ಬಾಲಕನನ್ನು ಕೂಡ ವಶಕ್ಕೆ ಪಡೆದಿದ್ದಾರೆಂದು ವರದಿಯಾಗಿದೆ.

ಜನವರಿ 31ರಂದು ಗೋಣಿಚೀಲದಲ್ಲಿ ತುಂಬಿದ್ದ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಆರೋಪಿಗಳು ಯಾವುದೇ ಸುಳಿವು ಉಳಿಸದ ಕಾರಣ ಈ ಪ್ರಕರಣ ಪೊಲೀಸರಿಗೆ ಸವಾಲಾಗಿತ್ತು. ಆರೋಪಿಗಳು ಶವವನ್ನ ಎಸೆದಿದ್ದ ಸ್ಥಳದಲ್ಲಿ ಪೊಲೀಸರು 150 ಸಿಸಿಟಿವಿಗಳ ಪರಿಶೀಲನೆ ನಡೆಸಿದ್ದರು. ಆಗ ಇಬ್ಬರು ಬೈಕ್‍ನಲ್ಲಿ ಭಾರವಾದ ಬ್ಯಾಗ್ ಹೊತ್ತೊಯ್ಯುತ್ತಿದ್ದುದು ಕಂಡುಬಂದಿತ್ತು. ಮಹಿಳೆ ಬ್ಯಾಗ್ ಹಿಡಿದುಕೊಂಡಿದ್ದು, ಮತ್ತೊಬ್ಬ ಬೈಕ್ ಓಡಿಸುತ್ತಿದ್ದ. ಶವ ಪತ್ತೆಯಾದ ಸ್ಥಳದಲ್ಲಿ ಈ ಇಬ್ಬರೂ ಕೆಲ ಕಾಲ ಬೈಕ್ ನಿಲ್ಲಿಸಿ ಮುಂದೆ ಸಾಗಿದ್ದರಿಂದ ಶಂಕೆ ಮೂಡಿ ಪೊಲೀಸರು ಆ ಬೈಕ್ ಟ್ರೇಸ್ ಮಾಡಿ ಇದೀಗ ಆರೋಪಿಗಳನ್ನ ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಮೃತ ಮಹಿಳೆಯನ್ನ ಪಿಂಕಿ ಎಂದು ಗುರುತಿಸಲಾಗಿದೆ. ಇವರು ಬಿಹಾರ ಮೂಲದವರಾಗಿದ್ದು, 15 ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದ್ರೆ ತನ್ನ ಗಂಡನಿಂದ ದೂರವಾಗಿ ಬಳಿಕ ವಿಕಾಸ್ ಜೊತೆ ಜೀವನ ನಡೆಸುತ್ತಿದ್ದರು. ವಿಕಾಸ್ ಕೂಡ ಬಿಹಾರ ಮೂಲದವನಾಗಿದ್ದು, ಮಮತಾ ಎಂಬ ಮತ್ತೊಬ್ಬ ಮಹಿಳೆಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಮಮತಾ, ಆಕೆಯ ಗಂಡ ಅನಿಲ್ ಜಾ ಹಾಗೂ ಮಗ ಅಮರ್‍ಕಾಂತ್ ಜಾ ಕೆಲವು ವರ್ಷಗಳ ಹಿಂದೆ ಹೈದರಾಬಾದ್‍ಗೆ ವಲಸೆ ಬಂದಿದ್ದರು. ವಿಕಾಸ್ ಕೂಡ ಹೈದರಾಬಾದ್‍ಗೆ ಬಂದು ಮಮತಾ ಕುಟುಂಬದ ಜೊತೆ ನೆಲೆಸಿದ್ದ. ವಿಕಾಸ್ ಎಲ್ಲಿದ್ದಾನೆಂಬ ಮಾಹಿತಿ ತಿಳಿದ ಪಿಂಕಿ ಕೂಡ ಹೈದರಾಬಾದ್‍ಗೆ ಶಿಫ್ಟ್ ಆಗಿದ್ದರು. ವಿಕಾಸ್ ಮಾಧಪುರ ಬಳಿಯ ಸಿದ್ದೀಕ್‍ನಗರದಲ್ಲಿ ಮಮತಾ ಜೊತೆ ವಾಸವಿರುವುದು ಪಿಂಕಿಗೆ ಗೊತ್ತಾಗಿತ್ತು. ವಿಕಾಸ್ ಮತ್ತು ಮಮತಾ ಸಂಬಂಧದ ಬಗ್ಗೆ ಪಿಂಕಿ ಪ್ರಶ್ನೆ ಮಾಡಿದ್ದಳು ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಜನವರಿ 28 ಹಾಗೂ 29ರ ಮಧ್ಯರಾತ್ರಿ ಮಮತಾ, ಆಕೆಯ ಪ್ರಿಯಕರ ವಿಕಾಸ್, ಗಂಡ ಅನಿಲ್, ಮಗ ಅಮರ್‍ಕಾಂತ್ ಸೇರಿ ಸಿದ್ದೀಕ್‍ನಗರದ ಮನೆಯಲ್ಲಿ ಪಿಂಕಿ ಮೇಲೆ ದಾಳಿ ಮಾಡಿ ಕೊಂದಿದ್ದರು. ಬಳಿಕ ಸ್ಟೋನ್ ಕಟ್ಟರ್ ಬಳಸಿ ದೇಹವನ್ನ ಪೀಸ್ ಪೀಸ್ ಮಾಡಿ ಗೋಣಿಚೀಲದಲ್ಲಿ ತುಂಬಿದ್ದರು.

ಮಹಿಳೆ 8 ತಿಂಗಳ ಗರ್ಭಿಣಿಯಾಗಿದ್ದು, ಕೊಲೆಗೂ ಮುನ್ನ ಆಕೆಯ ಮೇಲೆ ಹಲ್ಲೆ ನಡೆದಿದೆ. ಪಕ್ಕೆಲುಬು, ಸೊಂಟದ ಭಾಗ ಹಾಗೂ ಗರ್ಭಕೋಶಕ್ಕೆ ಹಾನಿಯಾಗಿರುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ.

ಈ ಮೊದಲು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *