ಹೆಂಡತಿಗಾಗಿ ಕಳ್ಳ ಪೊಲೀಸ್ ಆದ, ಕಾನ್‌ಸ್ಟೇಬಲ್ ಸಸ್ಪೆಂಡ್‌ ಆದ!

Public TV
2 Min Read

ಬೆಂಗಳೂರು: ಕಳ್ಳತನ ಆರೋಪದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದವನು ಹೆಂಡತಿಗೆ ಖುಷಿ ಪಡಿಸೋಕೆ ಪೊಲೀಸರ ಸಮವಸ್ತ್ರ ಧರಿಸಿ ವಿಡಿಯೋ ಕಾಲ್‌ನಲ್ಲಿ ಪೋಸ್ ಕೊಟ್ಟ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಇದು ಕರ್ತವ್ಯ ನಿರ್ಲಕ್ಷ್ಯ ಎಂದು ಪರಿಗಣಿಸಿ ಪೊಲೀಸ್ ಕಾನ್‌ಸ್ಟೇಬಲ್‌ನನ್ನ ಅಮಾನತ್ತುಗೊಳಿಸಲಾಗಿದೆ.

ಗೋವಿಂದಪುರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಸೋನಾರೆ ಹೆಚ್.ಆರ್ ಅಮಾನತ್ತುಗೊಂಡ ಕಾನ್‌ಸ್ಟೇಬಲ್. ತನಿಖೆಯ ವೇಳೆ ಕಾನ್‌ಸ್ಟೇಬಲ್ ಸೋನಾರೆ ಸಮವಸ್ತ್ರವನ್ನು ಕಳ್ಳ ಧರಿಸಿದ್ದ ಸ್ಕ್ರೀನ್‌ಶಾಟ್ ಬಹಿರಂಗಗೊಂಡಿದೆ. ತದನಂತರವೇ ಕಾನ್‌ಸ್ಟೇಬಲ್‌ನನ್ನ ಅಮಾನತುಗೊಳಿಸಲಾಗಿದೆ. ಇದನ್ನೂ ಓದಿ: ಕಳ್ಳನ ಜೊತೆಗೆ ಪೊಲೀಸಪ್ಪ ರೂಮ್ ಶೇರ್ – ಕರ್ತವ್ಯ ಲೋಪ; ಪೇದೆ ಸಸ್ಪೆಂಡ್

ಸಲೀಂ ಶೇಖ್ ಅಲಿಯಾಸ್ ಬಾಂಬೆ ಸಲೀಂ ಅನ್ನೋ ಆರೋಪಿ 50ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಜೂನ್ 23 ರಂದು ಒಂದು ಕಳ್ಳತನ ಪ್ರಕರಣ ವರದಿಯಾಗುತ್ತೆ. ಆ ಪ್ರಕರಣದ ತನಿಖೆಯನ್ನ ಇಂದಿರಾನಗರ ಪೊಲೀಸರು ನಡೆಸುತ್ತಿರುತ್ತಾರೆ. ಈ ಸಂದರ್ಭದಲ್ಲಿ ಈ ಸಮವಸ್ತ್ರ ಬಳಕೆಯ ಘಟನೆ ಬೆಳಕಿಗೆ ಬಂದಿದೆ.

ಪೊಲೀಸರು ಕಳ್ಳತನದ ಪ್ರಕರಣದಲ್ಲಿ ಟೆಕ್ನಿಕಲ್ ಎವಿಡೆನ್ಸ್‌ಗಳ ವಿಶ್ಲೇಷಣೆ ಮಾಡುವಾಗ ಕಳ್ಳ ಸಲೀಂ ಪುಣೆಯಲ್ಲಿ ಇರುವುದರ ಬಗ್ಗೆ ಮಾಹಿತಿ ಸಿಗುತ್ತೆ. ಮಹಾರಾಷ್ಟ್ರದಲ್ಲಿರುವ ತಮ್ಮ ಸಹವರ್ತಿಗಳಿಗೆ ಬೆಂಗಳೂರು ಪೊಲೀಸರು ಮಾಹಿತಿ ನೀಡಿ ಕಳ್ಳ ಸಲೀಂನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಬಂಧನದ ಸಮಯದಲ್ಲಿ, ಸಲೀಂ ದುಬಾರಿ ಒಡವೆಗಳು, ಸೀರೆಗಳು ಮತ್ತು ಇತರೆ ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಾನೆ ಎಂದು ತಿಳಿದುಬರುತ್ತೆ. ಇದನ್ನೂ ಓದಿ: ಒಂದು ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ 9 ಕೋಟಿ ಹಣ ಕಳೆದುಕೊಂಡ 80ರ ವೃದ್ಧ

ಕಳ್ಳ ಸಲೀಂನ ಮೊಬೈಲ್ ಫೋನ್ ಡೇಟಾವನ್ನು ಪರಿಶೀಲಿಸುವಾಗ, ಇಂದಿರಾನಗರ ಪೊಲೀಸರಿಗೆ ವಾಟ್ಸಾಪ್ ವೀಡಿಯೊ ಕರೆಯ ಸ್ಕ್ರೀನ್‌ಶಾಟ್‌ ಒಂದು ಸಿಗುತ್ತೆ. ಅದರಲ್ಲಿ ಸಲೀಂ ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ಇದು ಪೊಲೀಸರಿಗೆ ಮತ್ತೊಂದು ಶಾಕಿಂಗ್ ಸಂಗತಿಯಾಗಿತ್ತು.

ತದನಂತರ ತೀವ್ರ ವಿಚಾರಣೆಯ ಬಳಿಕ ತಿಳಿದುಬಂದಿದ್ದೇನೆಂದರೆ, ಈ ಹಿಂದೆ ಗೋವಿಂದಪುರ ಪೊಲೀಸರು ಮತ್ತೊಂದು ಕಳ್ಳತನ ಪ್ರಕರಣದಲ್ಲಿ ಕಳ್ಳ ಸಲೀಂನನ್ನ ಬಂಧಿಸಿದ್ದರು. ಕದ್ದ ವಸ್ತುಗಳನ್ನು ವಶಪಡಿಸಿಕೊಳ್ಳುವಾಗ, ಪೊಲೀಸರು ಅವನನ್ನು ನಗರದ ಹೊರಗೆ ಕರೆದುಕೊಂಡು ಹೋಗಿ ಒಂದು ಹೋಟೆಲ್‌ನಲ್ಲಿ ಇರಿಸಿದ್ದರು.

ಪೊಲೀಸರು ಅವನನ್ನು ರೂಮಿನಲ್ಲಿ ಕೂಡಿ ಹಾಕಿ ಹೊರಗೆ ಹೋಗಿದ್ದಾಗ. ಈ ವೇಳೆ ಅಲ್ಲೆ ಇದ್ದ ಪೊಲೀಸರ ಸಮವಸ್ತ್ರವನ್ನು ಕಂಡ ಕಳ್ಳ ಸಲೀಂ, ಕಾನ್‌ಸ್ಟೇಬಲ್ ಸೋನಾರೆ ಅವರ ಸಮವಸ್ತ್ರ ಧರಿಸಿ ತನ್ನ ಹೆಂಡತಿಗೆ ವಿಡಿಯೋ ಕರೆ ಮಾಡಿ ಮಾತನಾಡಿದ್ದಾನೆ. ಇದರ ಸ್ಕ್ರೀನ್‌ಶಾಟ್‌ ಕೂಡ ಮೊಬೈಲ್‌ನಲ್ಲಿ ಇಟ್ಟುಕೊಂಡಿದ್ದಾನೆ. ಇದು ತನಿಖೆಯ ವೇಳೆ ಪತ್ತೆ ಆಗಿದೆ. ಇದು ಸ್ಪಷ್ಟವಾದ ನಿರ್ಲಕ್ಷ್ಯದ ಪ್ರಕರಣ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕಾರಣಕ್ಕಾಗಿ, ಕಾನ್‌ಸ್ಟೇಬಲ್ ಸೋನಾರೆಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಇದನ್ನೂ ಓದಿ: ಹಾವೇರಿ| ಶೀಲ ಶಂಕಿಸಿ ಪತ್ನಿ ಬರ್ಬರ ಹತ್ಯೆ – ಕೆರೆಗೆ ಹಾರಿ ಪತಿ ಆತ್ಮಹತ್ಯೆ

Share This Article