ರಾತ್ರೋರಾತ್ರಿ ತೆಲಂಗಾಣದಿಂದ ರಾಯಚೂರಿಗೆ ಬಂದ 95 ಜನ

Public TV
1 Min Read

ರಾಯಚೂರು: ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಕೋವಿಡ್-19 ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ. ಇದಕ್ಕೆ ಜಿಲ್ಲಾಡಳಿತದ ಜೊತೆ ಪೊಲೀಸ್ ಇಲಾಖೆಯ ಕಾರ್ಯವನ್ನೂ ಶ್ಲಾಘಿಸಬೇಕು. ಆದರೆ ಜಿಲ್ಲೆಯ ಅಂತರರಾಜ್ಯ ಗಡಿಗಳಲ್ಲಿ ಮಾತ್ರ ಗಂಭೀರ ಪರಿಸ್ಥಿತಿಯಿದ್ದು, ಪೊಲೀಸರು ಸಿಕ್ಕ ಸಿಕ್ಕವರನ್ನ ಜಿಲ್ಲೆಯೊಳಗೆ ಬಿಡುತ್ತಿದ್ದಾರೆ ಎನ್ನುವ ದೂರು ಕೇಳಿಬಂದಿದೆ.

ಕೊರೊನಾ ಗಂಭೀರತೆಯನ್ನ ಮರೆತ ಕೆಲ ಪೊಲೀಸರು ರಾಯಚೂರಿನ ಶಕ್ತಿನಗರದ ಅಂತರರಾಜ್ಯ ಚೆಕ್‌ ಪೊಸ್ಟ್‌ನಲ್ಲಿ ಶಿಲ್ಪಾ ಮೆಡಿಕೇರ್, ಕೆಪಿಸಿ ಕಂಪನಿ ಸಿಬ್ಬಂದಿಗೆ ವಿನಾಯಿತಿ ಕೊಟ್ಟಿದ್ದಾರೆ. ಜಿಲ್ಲಾಡಳಿತ ನಿರ್ಬಧ ಹೇರಿದ್ದರೂ ತೆಲಂಗಾಣದಿಂದ ಕಂಪನಿಗೆ ಬರುವ ಸುಮಾರು ಕಾರ್ಮಿಕರನ್ನ ಜಿಲ್ಲೆಯ ಒಳಗೆ ಬಿಡುತ್ತಿದ್ದಾರೆ.

ಈಗಾಗಲೇ ಫಾರ್ಮಾ ಕಂಪನಿಗೆ ಹೊರರಾಜ್ಯದಿಂದ ಬರುವ ಕೆಲಸಗಾರರಿಗೆ ಜಿಲ್ಲೆಯಲ್ಲಿ ಊಟ, ವಸತಿ ಸೌಲಭ್ಯ ನೀಡಲು ಮೊದಲೇ ಸೂಚಿಸಲಾಗಿದೆ. ಆದರೂ ಕಂಪನಿ ತನ್ನ ಕೆಲಸಗಾರರಿಗೆ ಯಾವುದೇ ಸೌಕರ್ಯ ಒದಗಿಸಿಲ್ಲ. ಹೀಗಾಗಿ ತೆಲಂಗಾಣದ ಗಡಿಯಲ್ಲಿನ ಕಾರ್ಮಿಕರು ಪ್ರತಿ ನಿತ್ಯ ಬರುತ್ತಿದ್ದಾರೆ. ಇದನ್ನ ಪ್ರಶ್ನಿಸಿದ್ದಕ್ಕೆ ಮಾಧ್ಯಮದವರು ಹೇಳಿದರೆ ಅಂತರರಾಜ್ಯ ಗಡಿ ಬಂದ್ ಮಾಡುತ್ತೇವೆ ಅಂತ ಚೆಕ್‌ ಪೊಸ್ಟ್‌ನಲ್ಲಿನ ಪೊಲೀಸ್ ಸಿಬ್ಬಂದಿ ಬೇಜವಾಬ್ದಾರಿ ಉತ್ತರ ಕೊಡುತ್ತಾರೆ.

ತೆಲಂಗಾಣದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಆತಂಕ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಖಡಕ್ ಎಚ್ಚರಿಕೆ ನೀಡಿದ್ದರೂ ಚೆಕ್ ಪೋಸ್ಟ್‌ಗಳಲ್ಲಿ ನಿರ್ಲಕ್ಷ್ಯವಹಿಸಲಾಗುತ್ತಿದೆ. ಈಗಾಗಲೇ ರಾತ್ರೋರಾತ್ರಿ ಅಂತರರಾಜ್ಯ ಗಡಿಗಳಿಂದ 95 ಜನ ಜಿಲ್ಲೆಗೆ ಬಂದಿದ್ದಾರೆ. ಆದ್ದರಿಂದ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಗಡಿ ಗ್ರಾಮಗಳ ಕಚ್ಚಾ ರಸ್ತೆಗಳ ಮೂಲಕ ಜನ ಎಗ್ಗಿಲ್ಲದೆ ಓಡಾಡುತ್ತಿರುವುದು ಜಿಲ್ಲೆಯಲ್ಲಿ ಆತಂಕ ಹೆಚ್ಚಿಸಿದೆ.

Share This Article
Leave a Comment

Leave a Reply

Your email address will not be published. Required fields are marked *