7 ಮಂದಿ ದರೋಡೆಕೋರರ ಬಂಧನ – 2.89 ಕೋಟಿ ನಗದು, ಚಿನ್ನ ವಶ

Public TV
1 Min Read

ಹೈದರಾಬಾದ್: ಅಂತರರಾಜ್ಯ ಹೆದ್ದಾರಿಯಲ್ಲಿ ದರೋಡೆ ಮಾಡುತ್ತಿದ್ದ ಗ್ಯಾಂಗ್ ಸದಸ್ಯರನ್ನು ಬಂಧಿಸುವಲ್ಲಿ ಹೈದರಾಬಾದ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ 2.89 ಕೋಟಿ ರೂ. ನಗದು ಮತ್ತು 350 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ನಕಲಿ ಪಿಸ್ತೂಲ್ ಬಳಸಿ 3.6 ಕೋಟಿ ದರೋಡೆ ಮಾಡಿರುವ ಆರೋಪ ಈ ಗ್ಯಾಂಗ್ ಮೇಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೈದರಾಬಾದ್ ಪೊಲೀಸ್ ಆಯುಕ್ತರ ವಿಶೇಷ ಕಾರ್ಯಾಚರಣೆ ತಂಡ ಮತ್ತು ಶಾಡ್ ನಗರ ವಿಭಾಗ ಪೊಲೀಸರ ಜೊತೆಯಾಗಿ ಸೇರಿ ಕಾರ್ಯಾಚರಣೆ ಮಾಡಿದ್ದು, 2019 ರ ಜೂನ್ 28 ರಂದು ಹೆದ್ದಾರಿಯಲ್ಲಿ ದರೋಡೆ ಮಾಡಿದ್ದ ಏಳು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಶಾಡ್‍ನಗರ ಪ್ರದೇಶದಲ್ಲಿ ಆಟಿಕೆ ಪಿಸ್ತೂಲ್ ಇಟ್ಟುಕೊಂಡು ಬರೋಬ್ಬರಿ 3.6 ಕೋಟಿ ಹಣವನ್ನು ದೋಚಿದ್ದಾರೆ. ಈ ಪ್ರಕರಣದಲ್ಲಿ ಚಿನ್ನದ ವ್ಯಾಪಾರಿಯ ಮಾಜಿ ಚಾಲಕ ಕೂಡ ಇದ್ದಾನೆ ಎಂದು ಪೊಲೀಸ್ ಆಯುಕ್ತ ವಿ.ಸಿ.ಸಜ್ಜನಾರ್ ಹೇಳಿದ್ದಾರೆ.

ಮೂರು ತಿಂಗಳ ಹಿಂದೆಯೇ ಆರೋಪಿ ಮಾಜಿ ಚಾಲಕ ಮಯೂರೇಶ್ ದರೋಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದು, ತನ್ನ ಗ್ರಾಮಕ್ಕೆ ಹೋಗಿದ್ದನು. ಅಲ್ಲಿ ಚಾಲಕ ಇತರ ಇಬ್ಬರು ಆರೋಪಿಗಳನ್ನು ಭೇಟಿಯಾಗಿ ದರೋಡೆಯ ಬಗ್ಗೆ ಪ್ಲ್ಯಾನ್ ಮಾಡಿದ್ದನು. ಅದರಂತೆಯೇ ದರೋಡೆ ಮಾಡಲು ಆರೋಪಿಗಳು ಒಂದು ಸಿಗರೇಟ್ ಲೈಟರ್ ಮತ್ತು ಆಟಿಕೆಯ ಪಿಸ್ತೂಲನ್ನು ಖರೀದಿಸಿದ್ದಾರೆ.

ದರೋಡೆ:
ಹೆದ್ದಾರಿಯಲ್ಲಿ ಚಿನ್ನದ ವ್ಯಾಪಾರಿ ರಾಜು ನಂಗ್ರೆ ಬರುವುದನ್ನೇ ಕಾದು ಕುಳಿತ್ತಿದ್ದ ಗ್ಯಾಂಗ್, ವಾಹನ ಬರುತ್ತಿದ್ದಂತೆ ಕಾರನ್ನು ತಡೆದು ಚಾಲಕ ಕಾರಿನಲ್ಲಿದ್ದ ಇತರರಿಗೆ ನಕಲಿ ಪಿಸ್ತೂಲಿನಿಂದ ಬೆದರಿಕೆ ಹಾಕಿದ್ದಾನೆ. ನಂತರ ವಾಹನ ಸಮೇತ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ದರೋಡೆಕೋರರು ಕಾರಿನಲ್ಲಿದ್ದವರನ್ನು ಹೊರಗೆ ತಳ್ಳಿ ಹಣದೊಂದಿಗೆ ಕಾರಿನೊಂದಿಗೆ ಪರಾರಿಯಾಗಿದ್ದಾರೆ.

ಚಿನ್ನದ ವ್ಯಾಪಾರಿ ತಕ್ಷಣ ಪೊಲೀಸ್ ಠಾಣೆಗೆ ಬಂದು ದರೋಡೆ ಮತ್ತು ಕಳ್ಳತನದ ಪ್ರಕರಣವನ್ನು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲು ಹೈದರಾಬಾದ್ ಪೊಲೀಸರು ವಿವಿಧ ತಂಡಗಳನ್ನು ರಚಿಸಿಕೊಂಡು ಕಾರ್ಯಾಚರಣೆಯ ಶುರು ಮಾಡಿದ್ದರು. ನಿರಂತರ ಕಾರ್ಯಾಚರಣೆ ನಂತರ ದರೋಡೆಕೋರರನ್ನು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *