ಆ್ಯಸಿಡ್ ನಾಗನನ್ನು ಹಿಡಿಯಲು ಸ್ವತಃ ಖಾವಿ ಧರಿಸಿದ್ದ ಪೊಲೀಸರು

Public TV
2 Min Read

ಬೆಂಗಳೂರು: ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿ ತಮಿಳುನಾಡಿನಲ್ಲಿ ಸ್ವಾಮೀಜಿ ವೇಷಧರಿಸಿ ತಲೆಮರೆಸಿಕೊಂಡಿದ್ದ ಚಾಲಾಕಿ ನಾಗನನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಆ್ಯಸಿಡ್ ನಾಗ ಎಲ್ಲಿ ತಲೆಮರೆಸಿಕೊಂಡಿದ್ದ? ಪೊಲೀಸರಿಗೆ ಆತನ ಸುಳಿವು ಸಿಕ್ಕಿದ್ದು ಹೇಗೆ? ನಾಗನನ್ನು ಹಿಡಿಯಲು ಪೊಲೀಸರು ಹಾಕಿದ್ದ ಪ್ಲ್ಯಾನ್ ನಿಜಕ್ಕೂ ರೋಚಕವಾಗಿದೆ.

ಏಪ್ರಿಲ್ 28 ರಂದು ಯುವತಿಯ ಮೇಲೆ ಆಸಿಡ್ ಎರಚಿ ನಾಗೇಶ್ ಪರಾರಿಯಾಗಿದ್ದ. ದಾಳಿ ವೇಳೆ ನಾಗನ ಬಲಗೈ ಮೇಲೂ ಆ್ಯಸಿಡ್ ಬಿದ್ದು ಗಾಯವಾಗಿತ್ತು. ಆ ಗಾಯಗಳನ್ನೇ ತೋರಿಸಿ ನ್ಯಾಯಾಲಯದ ಬಳಿ ವಕೀಲರನ್ನು ನಾಗೇಶ್ ಭೇಟಿಯಾಗಿದ್ದ. ಯಾರೂ ಕೇಸ್ ತೆಗೆದುಕೊಳ್ಳಲು ಒಪ್ಪದಿದ್ದಾಗ ಅಲ್ಲಿಂದ ಕಾಲ್ಕಿತ್ತಿದ್ದ. ನಂತರ ತಮಿಳುನಾಡು ಗಡಿಭಾಗದ ಕ್ಲಿನಿಕ್‌ನಲ್ಲಿ ಗಾಯಗಳಿಗೆ ಚಿಕಿತ್ಸೆ ತೆಗೆದುಕೊಂಡು ಪ್ರಯಾಣ ಮುಂದುವರಿಸಿದ್ದ. ಇದನ್ನೂ ಓದಿ: ಸ್ವಾಮೀಜಿ ವೇಷಧರಿಸಿ ತಲೆಮರೆಸಿಕೊಂಡಿದ್ದ ಆ್ಯಸಿಡ್ ನಾಗ ಅರೆಸ್ಟ್

ಸ್ವಾಮೀಜಿ ವೇಷಧರಿಸಿದ್ದ ನಾಗ
ನಾನೊಬ್ಬ ಭಕ್ತನೆಂದು ಹೇಳಿಕೊಂಡು ತಮಿಳುನಾಡಿನ ತಿರುವಣ್ಣಮಲ್ಲೈ ಆಶ್ರಮದಲ್ಲಿ ನಾಗ ಆಶ್ರಯ ಪಡೆದುಕೊಂಡಿದ್ದ. ಕಾವಿ ತೊಟ್ಟು ರಮಣಾ ಆಶ್ರಮದಲ್ಲಿ ನಾಗೇಶ ಅವಿತಿದ್ದ. ಭಿತ್ತಿ ಪತ್ರಗಳನ್ನು ಹೊರಡಿಸಿ ಆರೋಪಿಯ ಸುಳಿವು ಪತ್ತೆಗೆ ಪೊಲೀಸರು ಮುಂದಾಗಿದ್ದರು. ನೆರೆ ರಾಜ್ಯದ ಪೊಲೀಸರು ಕಾಮಾಕ್ಷಿಪಾಳ್ಯ ಪೊಲೀಸರ ನೆರವಿಗೆ ಬಂದಿದ್ದರು. ಶುಕ್ರವಾರ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆತನ ಚಹರೆ ಹಾಗೂ ಕೈ ಮೇಲಾಗಿದ್ದ ಗಾಯಗಳನ್ನು ಕಂಡು ಪೊಲೀಸರು ಶಂಕೆಗೊಂಡಿದ್ದಾರೆ. ಹತ್ತಿರ ಹೋಗುತ್ತಿದ್ದಂತೆ ಭೀತಿಯಿಂದ ಪರಾರಿಯಾಗಲು ನಾಗೇಶ ಯತ್ನಿಸಿದ್ದ. ಕೂಡಲೇ ನಾಗನನ್ನು ಹಿಡಿದು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಶಟರ್ ಮುರಿದು ಕಳ್ಳತನ – ಸಿಸಿಟಿವಿಯಲ್ಲಿ ದೃಶ್ಯ ಸೆರೆ 

ನಾಗನನ್ನು ಹಿಡಿಯಲು ಖಾವಿ ತೊಟ್ಟಿದ್ದ ಪೊಲೀಸರು
ಆ್ಯಸಿಡ್ ನಾಗ ಅಪ್ಪಟ ದೈವಭಕ್ತನಾಗಿದ್ದ. ವಾರದಲ್ಲಿ ಸೋಮವಾರ, ಶುಕ್ರವಾರ ತಪ್ಪದೇ ದೇವಸ್ಥಾನಕ್ಕೆ ಹೋಗುತ್ತಿದ್ದ. ಈ ಬಗ್ಗೆ ನಾಗೇಶ್ ಪೋಷಕರ ವಿಚಾರಣೆ ವೇಳೆ ಪೊಲೀಸರು ಮಾಹಿತಿ ಕಲೆಹಾಕಿದ್ದರು. ಈ ಹಿನ್ನಲೆಯಲ್ಲಿ ಕಳೆದ ಒಂದು ವಾರದಿಂದ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಉತ್ತರ ಭಾರತದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಶೋಧ ನಡೆಸಿದ್ದರು. ಪೊಲೀಸರು ಬೆನ್ನು ಬಿದ್ದಿರುವ ಮಾಹಿತಿ ತಿಳಿದ ನಾಗೇಶ್, ಮಠದಲ್ಲಿ ಸ್ವಾಮಿ ವೇಷದಲ್ಲಿ ವಾಸವಾಗಿದ್ದ. ಪೊಲೀಸರು ಕೂಡ ಭಕ್ತರ ವೇಷದಲ್ಲಿ ಕಾರ್ಯಾಚರಣೆ ನಡೆಸಿದ್ದರು. ನಾಗನನ್ನು ಹಿಡಿಯಲು ಸ್ವತಃ ಪೊಲೀಸರು ಸಹ ಖಾವಿ ಧರಿಸಿ ಹೊಂಚುಹಾಕಿದ್ದರು.

ಪೊಲೀಸರು ತನ್ನನ್ನು ಹುಡುಕುತ್ತಿರುವ ಮಾಹಿತಿ ತಿಳಿದು ನಾಗ ಖಾವಿ ಧರಿಸಿ ದೇವಸ್ಥಾನದಲ್ಲಿ ಕುಳಿತಿದ್ದ. ಯಾರಿಗೂ ಅನುಮಾನ ಬರಬಾರದು ಎಂದು ಖಾವಿ ಧರಿಸಿದ್ದ. ಆರೋಪಿಯನ್ನು ಪತ್ತೆ ಮಾಡಿದ ಪೊಲೀಸರಿಗೆ ಕೆಲಕಾಲ ಗೊಂದಲ ಮೂಡಿತ್ತು. ಖಾವಿಧಾರಿ ನಾಗೇಶ್‌ನನ್ನು ನೋಡಿ ಅನುಮಾನಗೊಂಡ ಪೊಲೀಸರಿಗೆ ನಂತರ ಗುರುತು ಪತ್ತೆಯಾಗಿದೆ. ತಕ್ಷಣ ಕಾರ್ಯಪ್ರವೃತ್ತರಾಗಿ ನಾಗನನ್ನು ಬಂಧಿಸಿದ್ದಾರೆ. ನಂತರ ರಾತ್ರಿ 11 ಗಂಟೆ ವೇಳೆಗೆ ಬೆಂಗಳೂರಿಗೆ ಕರೆತರಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *