ಪೋಕ್ಸೋ ಕೇಸ್‌ – ಯಡಿಯೂರಪ್ಪ ಬಂಧನಕ್ಕೆ ಸಿಐಡಿ ಸಿದ್ಧತೆ!

By
2 Min Read

ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ (Yediyurappa) ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲು ಸಿಐಡಿ (CID) ಮುಂದಾಗಿದ್ಯಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ.

ಹೌದು. ಪೋಕ್ಸೋ ಪ್ರಕರಣಕ್ಕೆ (Pocso Case) ಸಂಬಂಧಿಸಿದಂತೆ ಸಿಐಡಿ (CID) ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದೆ. ಅಷ್ಟೇ ಅಲ್ಲದೇ ಸಂತ್ರಸ್ತೆಯ ಪುತ್ರ ಯಡಿಯೂರಪ್ಪ ಅವರನ್ನು ಬಂಧಿಸುವಂತೆ ಆದೇಶಿಸಿ ಎಂದು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನಡೆಯುತ್ತಿರುವ ಈ ಎಲ್ಲಾ ಬೆಳವಣಿಗೆ ನೋಡಿ ಬಿಎಸ್‌ವೈ ಬಂಧನವಾಗುತ್ತಾ ಎಂಬ ಪ್ರಶ್ನೆ ಈಗ ಮೂಡಿದೆ.

ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿ ಬಿಎಸ್‌ವೈ ವಿರುದ್ಧ ಸಂತ್ರಸ್ತೆಯ ತಾಯಿ ದೂರು ನೀಡಿದ್ದು, ಮಾರ್ಚ್ 14ರಂದು ಸದಾಶಿವನಗರ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ನಂತರ ಸರ್ಕಾರ ಇದನ್ನು ಸಿಐಡಿಗೆ ವರ್ಗಾಯಿಸಿತ್ತು. ಏಪ್ರಿಲ್‌ 12 ರಂದು ತನಿಖಾಧಿಕಾರಿಯ ಮುಂದೆ ಯಡಿಯೂರಪ್ಪ ಹಾಜರಾಗಿ ವಿಚಾರಣೆಗೆ ಸಹಕರಿಸಿದ್ದರು.

ಈ ಪ್ರಕರಣ ದಾಖಲಾದ ನಂತರ ಸಂತ್ರಸ್ತೆ ಮೃತಪಟ್ಟಿದ್ದಾರೆ. ಈಗ ಸಂತ್ರಸ್ತೆಯ ಪುತ್ರ ಹೈಕೋರ್ಟ್‌ ಮೆಟ್ಟಿಲೇರಿ ಪ್ರಕರಣದ ದಾಖಲಾಗಿ ಮೂರು ತಿಂಗಳಾದರೂ ಯಾವುದೇ ಬೆಳವಣಿಗೆ ನಡೆದಿಲ್ಲ. ಇಷ್ಟು ದಿನವಾದರೂ ಯಡಿಯೂರಪ್ಪ ಅವರನ್ನು ಬಂಧಿಸಿಲ್ಲ ಎಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯ ಬೆನ್ನಲ್ಲೇ ಬುಧವಾರ ಯಡಿಯೂರಪ್ಪನವರಿಗೆ ಇಂದೇ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್‌ ಜಾರಿ ಮಾಡಿತ್ತು. ಆದರೆ ಬುಧವಾರ ಯಡಿಯೂರಪ್ಪ ದೆಹಲಿಯಲ್ಲಿದ್ದರು. ವಿಚಾರಣೆಗೆ ಹಾಜರಾಗದ ಕಾರಣ ಜಾಮೀನು ರಹಿತ ವಾರೆಂಟ್‌ಗೆ (Non Bailable Warrant) ಸಿಐಡಿ ಈಗ 42ನೇ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಈ ಅರ್ಜಿಯನ್ನು ಕೋರ್ಟ್‌ ಪುರಸ್ಕರಿಸಿದರೆ ಅರೆಸ್ಟ್ ವಾರೆಂಟ್ ಪಡೆದು ಯಡಿಯೂರಪ್ಪ ಅವರನ್ನು ಸಿಐಡಿ ಬಂಧಿಸುವ ಸಾಧ್ಯತೆಯಿದೆ. ಸದ್ಯ ಈಗ ಯಡಿಯೂರಪ್ಪ ದೆಹಲಿಯಲ್ಲಿದ್ದು ಜೂನ್‌ 17ಕ್ಕೆ ಬೆಂಗಳೂರಿಗೆ ಬರುವ ಸಾಧ್ಯತೆಯಿದೆ.

ಪ್ರಕರಣ ಸಂಬಂಧ ಸಿಐಡಿ ಒಂದಷ್ಟು ಸಾಕ್ಷ್ಯ ಕಲೆ ಹಾಕಿದೆ. ದೂರುದಾರೆ ನೀಡಿದ್ದ ವಿಡಿಯೋ ಪಡೆದು ಪರಿಶೀಲನೆ ಜೊತೆಗೆ ಬಾಲಕಿ, ಬಿಎಸ್‌ವೈ ಧ್ವನಿ ಸಂಗ್ರಹ ಮಾಡಿ ವಿಧಿ ವಿಜ್ಞಾನ ಪ್ರಯೋಗಾಲಯ (FSL) ರವಾನೆ ಮಾಡಿದೆ. ಈ ಸಾಕ್ಷ್ಯಗಳ ಆಧಾರದ ಮೇಲೆ ಯಡಿಯೂರಪ್ಪ ಅವರನ್ನು ಬಂಧನ ಮಾಡುವ ಸಾಧ್ಯತೆಯಿದೆ.  ಇದನ್ನೂ ಓದಿ: ನಟ ದರ್ಶನ್ ಮನೆ ಬಳಿ ಪೊಲೀಸ್ ಬಿಗಿ ಬಂದೋಬಸ್ತ್

ಸರ್ಕಾರಕ್ಕೆ ಹಲವು ಪ್ರಶ್ನೆಗಳು
1. ಮೂರು ತಿಂಗಳ ಹಿಂದೆ ಕೇಸ್‌ ದಾಖಲಾಗಿದ್ದರೂ ಆಗ ಬಂಧನ ಮಾಡದ ಸಿಐಡಿ ಈಗ ಬಂಧನಕ್ಕೆ ಹೊರಟಿದ್ದು ಯಾಕೆ?
2. ಸರಿಯಾದ ಸ್ಯಾಕ್ಷ್ಯಗಳು ಇಲ್ಲದ ಕಾರಣ ಹೆಚ್ಚು ಕಡಿಮೆ ಬಿ ರಿಪೋರ್ಟ್‌ ಸಲ್ಲಿಸಬಹುದು ಎನ್ನಲಾಗುತ್ತಿದ್ದ ಪ್ರಕರಣ ಈಗ ದಿಢೀರ್‌ ಬೆಳವಣಿಗೆಯಾಗಿದ್ದು ಹೇಗೆ?
3. ಸಂತ್ರಸ್ತೆಯ ತಾಯಿ 53 ಮಂದಿ ಗಣ್ಯರ ವಿರುದ್ಧ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಆರೋಪಿಗಳನ್ನು ಬಂಧನ ಮಾಡಲಾಗಿದ್ಯಾ? ಆ ಪ್ರಕರಣಗಳು ಏನಾಗಿವೆ?

ಪರಮೇಶ್ವರ್‌ ಹೇಳಿದ್ದೇನು?
ಈ ಪ್ರಕರಣದ ಬಗ್ಗೆ ಹಿಂದೆ ಪ್ರತಿಕ್ರಿಯೆ ನೀಡಿದ್ದ ಪರಮೇಶ್ವರ್‌ ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ವಿರುದ್ಧ ಕೊಟ್ಟ ಮಹಿಳೆ ಮಾನಸಿಕ ಅಸ್ವಸ್ಥೆ ಅಂತಾ ಹೇಳುತ್ತಿದ್ದಾರೆ. ಇದು ಒಬ್ಬ ಮಾಜಿ ಸಿಎಂ ವಿಷಯಕ್ಕೆ ಸಂಬಂಧಿಸಿದ್ದು, ಇದು ಬಹಳ ಸೂಕ್ಷ್ಮ ವಿಷಯ ಎಂದಿದ್ದರು.

 

Share This Article