ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆಯ ವಿಶೇಷತೆ

Public TV
2 Min Read

ಬೆಂಗಳೂರು: ದಿಟ್ಟ ನಿರ್ಧಾರಗಳಿಂದ ಉಕ್ಕಿನ ಮನುಷ್ಯ ಎಂದೇ ಜನಪ್ರಿಯರಾಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆಯನ್ನು ಪ್ರಧಾನಿ ಮೋದಿ ಇಂದು ಲೋಕಾರ್ಪಣೆ ಮಾಡಲಿದ್ದಾರೆ. ವಿಶ್ವದಲ್ಲಿಯೇ ಅತೀ ಎತ್ತರದ ಪ್ರತಿಮೆ ಎಂಬ ಹಿರಿಮೆಗೂ ಇದು ಪಾತ್ರವಾಗಲಿದೆ.

ಇಂದು ಸರ್ದಾರ್ ವಲ್ಲಭ್‍ಭಾಯ್ ಪಟೇಲ್ ಅವರ 142ನೇ ಜನ್ಮದಿನ. ದೇಶದ ಮೊದಲ ಉಪಪ್ರಧಾನಿ, ಏಕೀಕೃತ ಭಾರತದ ಶಿಲ್ಪಿ, ಉಕ್ಕಿನ ಮನುಷ್ಯ ಖ್ಯಾತಿಯ ಪಟೇಲರ ಸ್ಮರಣಾರ್ಥ ಗುಜರಾತ್‍ನ ನರ್ಮದಾ ನದಿ ದಡದ ಸಾಧುಬೆಟ್ಟದಲ್ಲಿ ವಿಶ್ವದ ಎತ್ತರದ ಪ್ರತಿಮೆ ಅನಾವರಣ ಆಗಲಿದೆ. ಬೆಳಗ್ಗೆ 11.30ಕ್ಕೆ ಪ್ರಧಾನಿ ಮೋದಿ ಈ ಜಗದ್ವಿಖ್ಯಾತ ‘ಐಕ್ಯತಾ ಪ್ರತಿಮೆ’ಯನ್ನ ಲೋಕಾರ್ಪಣೆ ಮಾಡಲಿದ್ದಾರೆ.

‘ಐಕ್ಯತಾ ಪ್ರತಿಮೆ’ಯ ವಿಶೇಷತೆ
ಈ ಐಕ್ಯತಾ ಪ್ರತಿಮೆ 182 ಮೀಟರ್ ಎತ್ತರವಿದ್ದು, ಇದಕ್ಕೆ 2 ಸಾವಿರದ 300 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. 25 ಸಾವಿರ ಟನ್ ಕಬ್ಬಿಣ ಬಳಕೆ ಮಾಡಲಾಗಿದ್ದು, 90 ಸಾವಿರ ಟನ್ ಸಿಮೆಂಟ್ ಬಳಕೆ ಮಾಡಲಾಗಿದೆ. ಇದಕ್ಕಾಗಿ 250 ಎಂಜಿನಿಯರ್ಸ್, 3,400 ಕಾರ್ಮಿಕರು ಬರೋಬ್ಬರಿ 33 ತಿಂಗಳ ಕಾಲ ಶ್ರಮವಹಿಸಿದ್ದಾರೆ. ಲೋಹ ಅಭಿಯಾನದ ಮೂಲಕ 1.69 ಲಕ್ಷ ಲೋಹದ ತುಣುಕುಗಳನ್ನು ದೇಶದೆಲ್ಲೆಡೆಯಿಂದ ಸಂಗ್ರಹಿಸಲಾಗಿದೆ.
ಇದನ್ನೂ ಓದಿ: ಏಕತಾ ಪ್ರತಿಮೆ ಉದ್ಘಾಟನೆಗೆ ಬರುತ್ತಿರುವ ನಿಮಗೆ ಬಹಿಷ್ಕಾರ: ಮೋದಿಗೆ ಗ್ರಾಮಸ್ಥರ ಪತ್ರ

2010ರಲ್ಲಿ ಯೂನಿಟಿ ಸ್ಟ್ಯಾಚ್ಯೂ ಯೋಜನೆ ಘೋಷಣೆಯಾಗಿತ್ತು. ನರೇಂದ್ರ ಮೋದಿ 2013ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸ್ಟ್ಯಾಚೂ ಆಫ್ ಯೂನಿಟಿ ನಿರ್ಮಾಣ ಯೋಜನೆಗೆ ಅಡಿಗಲ್ಲು ಹಾಕಿದ್ದರು. ಇದೀಗ ಅದು ಪೂರ್ಣಗೊಂಡಿದ್ದು, ಇಂದು ಪ್ರಧಾನಿ ಮೋದಿ ಉದ್ಘಾಟನೆ ಮಾಡುತ್ತಿದ್ದಾರೆ. ಈ ಏಕತಾ ಪ್ರತಿಮೆ ಜೊತೆ ಪಟೇಲರ ಜೀವನಗಾಥೆ ಸಾರುವ ವಸ್ತು ಸಂಗ್ರಹಾಲಯ, ಲೇಸರ್ ಲೈಟ್ ಪ್ರದರ್ಶನ, ಪ್ರತಿಮೆ ಸುತ್ತಲಿನ ಪ್ರದೇಶದಲ್ಲಿ ಜಲವಿಹಾರ, ವಿವಿಧ ರಾಜ್ಯಗಳ ಮಹತ್ವ ಸಾರುವ ಪ್ರದರ್ಶನ ಕೇಂದ್ರ, ಸರ್ದಾರ್ ಪಟೇಲ್, ಗಾಂಧೀಜಿ, ಅಂಬೇಡ್ಕರ್ ಜೀವನ ಸಾಧನೆಗಳ ಅಧ್ಯಯನಕ್ಕೆ ಸಂಶೋಧನಾ ಕೇಂದ್ರ ಇದೆ. ಇದನ್ನೂ ಓದಿ:  ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆಯ ಯೋಜನೆ ಆರಂಭಗೊಂಡಿದ್ದು ಹೇಗೆ?

ನೋಯ್ಡಾ ಮೂಲದ ಶಿಲ್ಪಿ ರಾಮ್. ವಿ. ಸುತರ್ ಈ ಪ್ರತಿಮೆ ವಿನ್ಯಾಸಗೊಳಿಸಿದ್ದಾರೆ. ಇದಕ್ಕಾಗಿ ಸುತರ್, ಪಟೇಲ್‍ರ ಸುಮಾರು 2 ಸಾವಿರ ಫೋಟೋಗಳನ್ನ ಅಧ್ಯಯನ ಮಾಡಿದ್ದರು. ಈ ಪ್ರತಿಮೆಯನ್ನ ದೂರದಿಂದ ನೋಡಿದರೆ ಸರ್ದಾರ್ ಪಟೇಲ್ ಅವರು ನೀರಿನಲ್ಲಿ ನಡೆದುಕೊಂಡು ಸರ್ದಾರ್ ಸರೋವರ್ ಡ್ಯಾಮ್‍ನತ್ತ ಬರುತ್ತಿರುವಂತೆ ಕಾಣುತ್ತದೆ. ಗಂಟೆಗೆ 180 ಕಿ.ಮೀ ವೇಗದಲ್ಲಿ ಗಾಳಿ ಬೀಸಿದರೂ, 6.5 ತೀವ್ರತೆಯ ಭೂಕಂಪ ಸಂಭವಿಸಿದರೂ ಅದನ್ನು ತಡೆಯುವ ಸಾಮರ್ಥ್ಯ ಈ ‘ಉಕ್ಕಿನ ಮನುಷ್ಯ’ನ ಪ್ರತಿಮೆಗೆ ಇದೆ ಎನ್ನುವುದು ಭಾರತದ ಮತ್ತೊಂದು ಹೆಮ್ಮೆ.

ಇಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಏಕತೆಯ ಓಟ ಆಯೋಜಿಸಲಾಗಿದೆ. ಬೆಂಗಳೂರಿನ 3 ಲೋಕಸಭಾ ಕ್ಷೇತ್ರ ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏಕತಾ ಓಟ ನಡೆಸೋದಾಗಿ ಕೇಂದ್ರ ಸಚಿವ ಸದಾನಂದಗೌಡ ತಿಳಿಸಿದ್ದಾರೆ. ದೇಶಾದ್ಯಂತ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ರಾಷ್ಟ್ರೀಯ ಏಕತಾ ದಿನ ಆಚರಣೆಗೆ ಆದೇಶಿಸಲಾಗಿದೆ. ಒಟ್ಟಿನಲ್ಲಿ ಇದೀಗ ಎಲ್ಲಾ ಸವಾಲುಗಳನ್ನ ದಾಟಿ ಪ್ರತಿಮೆ ಲೋಕಾರ್ಪಣೆಗೆ ಸಿದ್ಧವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *