ಸಿದ್ದರಾಮಯ್ಯ ಸರ್ಕಾರವಲ್ಲ, ‘ಸೀದಾ ರೂಪಾಯಿ’ ಸರ್ಕಾರ – ಸಿದ್ದುಗೆ ಮೋದಿ ವ್ಯಂಗ್ಯ

Public TV
3 Min Read

ದಾವಣಗೆರೆ: ಕರ್ನಾಟಕದಲ್ಲಿರುವುದು ‘ಸಿದ್ದರಾಮಯ್ಯ’ ಸರ್ಕಾರವಲ್ಲ. ಇದು ‘ಸೀದಾ ರೂಪಾಯಿ’ ಸರ್ಕಾರ. ಈ ಸೀದಾ ರೂಪಾಯಿ ಸರ್ಕಾರ ನಿಮಗೆ ಬೇಕಾ..? ಇಲ್ಲಿ ಯಾವುದೇ ಕೆಲಸ ಮಾಡಬೇಕಾದರೂ ‘ರೂಪಾಯಿ’ ಕೊಡದೆ ಕೆಲಸ ಆಗುವುದಿಲ್ಲ. ಕರ್ನಾಟಕಕ್ಕೆ ಇಂತಹ ಸರ್ಕಾರ ಶೋಭೆ ತರುವುದಿಲ್ಲ. ಕರ್ನಾಟಕಕ್ಕೆ ಜವಾಬ್ದಾರಿಯುತ, ಸಂವೇದನಾಶೀಲ, ಪ್ರಾಮಾಣಿಕ ಸರ್ಕಾರದ ಅವಶ್ಯಕತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದಾವಣಗೆರೆಯಲ್ಲಿ ರೈತ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕರ್ನಾಟಕಕ್ಕೆ ಜನರ ದನಿ ಕೇಳುವ ಸರ್ಕಾರ ಬೇಕು. ಕೇಂದ್ರ ಸರ್ಕಾರ ರಾಜ್ಯಕ್ಕೆ ಸಾಕಷ್ಟು ಹಣ ನೀಡಿದೆ. ಆದರೆ ರಾಜ್ಯ ಸರ್ಕಾರ ಈ ಹಣ ಬಳಕೆ ಮಾಡಿಲ್ಲ ಎಂದು ಉದಾಹರಣೆ ಸಹಿತ ವಿವರಿಸಿದರು. ಈ ಹಿಂದಿನ ಸರ್ಕಾರಗಳಿದ್ದ ವೇಳೆ ಕೇಂದ್ರ ಸರ್ಕಾರ 73 ಸಾವಿರ ಕೋಟಿ ರೂಪಾಯಿ ನೀಡುತ್ತಿತ್ತು. ಆದರೆ ನಮ್ಮ ಸರ್ಕಾರ ಬಂದ ಮೇಲೆ ರಾಜ್ಯಕ್ಕೆ 2 ಲಕ್ಷ ಕೋಟಿ ಸಿಗುತ್ತಿದೆ. ಇಷ್ಟೆಲ್ಲಾ ಆದರೂ ಇಲ್ಲಿನ ಸರ್ಕಾರ ಹಣವನ್ನು ಖರ್ಚು ಮಾಡುವುದೇ ಇಲ್ಲ ಎಂದು ನೇರ ಆರೋಪ ಮಾಡಿದರು.

21,400 ಕೋಟಿ ರೂ.ಗಳ ಯೋಜನೆ ರಾಜ್ಯಕ್ಕೆ ನೀಡಿದ್ದೇವೆ. ದಾವಣಗೆರೆ ಹಾವೇರಿ – 830 ಕೋಟಿ ರೂ. ರಸ್ತೆ, ದಾವಣಗೆರೆ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಗೆ 1,000 ಕೋಟಿ ರೂ. ನೀಡಿದ್ದೇವೆ. ಕರ್ನಾಟಕದ ಜನರು ಒಳ್ಳೆಯವರು. ನಾವು ನಿರಂತರವಾಗಿ ಇಲ್ಲಿನ ಸರ್ಕಾರಕ್ಕೆ ಸಹಾಯ ಮಾಡುತ್ತಾ ಬಂದಿದ್ದೇವೆ. 10 ಪರ್ಸೆಂಟ್ ಸಿಗದಿದ್ದರೆ ರಾಜ್ಯದಲ್ಲಿ ಯಾವುದೇ ಕೆಲಸ ಆಗುತ್ತಿಲ್ಲ. ಕೃಷಿಗೆ ನೀಡಿದ 50-55 ಕೋಟಿ ರೂ. ಖರ್ಚಾಗದೇ ಉಳಿದಿದೆ. ಈ ಸರ್ಕಾರ ರೈತ ಸ್ನೇಹಿಯಾಗಿದ್ದರೆ ಈ ಹಣ ಖರ್ಚಾಗುತ್ತಿತ್ತು. ರಾಷ್ಟ್ರೀಯ ಸ್ವಾಸ್ಥ್ಯ ಮಿಷನ್ ಭಾರತ ಸರ್ಕಾರ ಹಣ ನೀಡಿದರೂ 500 ಕೋಟಿ ಖರ್ಚಾಗದೇ ಉಳಿದಿದೆ. ಜನರ ಆರೋಗ್ಯಕ್ಕೆ ಹಣ ಖರ್ಚು ಮಾಡಲು ಸಾಧ್ಯವಿಲ್ಲದ ಸರ್ಕಾರ ಇಲ್ಲಿದೆ. ಶಿಕ್ಷಣ – 400 ಕೋಟಿ ರೂ., ತಾಂತ್ರಿಕ ಶಿಕ್ಷಣಕ್ಕೆ ನೀಡಿದ 80-90 ಕೋಟಿ ರೂ. ಖರ್ಚಾಗಿಲ್ಲ. ನೀರಾವರಿಯಲ್ಲಿ 100 ಕೋಟಿ ರೂ. ಹಣ ಖರ್ಚಾಗಿಲ್ಲ. ಸ್ಮಾರ್ಟ್ ಸಿಟಿಗೆ ನೀಡಿದ 300 ಕೋಟಿ ಖರ್ಚಾಗಿಲ್ಲ ಸ್ವಚ್ಛ ಭಾರತ ಮಿಷನ್‍ಗೆ ನೀಡಿದ 75 ಕೋಟಿ ಹಾಗೆಯೇ ಉಳಿದಿದೆ ಎಂದರು.

ಸಚಿವರ ಮನೆಗಳ ಮೇಲೆ ಐಟಿ ದಾಳಿಯಾದ ಉದಾಹರಣೆ ದೇಶದಲ್ಲೇ ಇಲ್ಲ. ಇಲ್ಲಿರುವುದು ಜನತಾ ಸರ್ಕಾರವಲ್ಲ. ಇಲ್ಲಿನ ಹಾಲಿ ಸಚಿವರ ಮನೆಗೆ ದಾಳಿಯಾಗಿದೆ. ಈ ವೇಳೆ ಇಲ್ಲಿ ಡೈರಿ ಸಿಗುತ್ತದೆ, ನೋಟ್‍ಗಳ ಬಂಡಲ್ ಸಿಗುತ್ತದೆ. ಈ ಹಣ ಎಲ್ಲಾ ಎಲ್ಲಿಂದ ಬಂತು. ಈ ಹಣ ಸೀದಾ ರೂಪಾಯಿಯಲ್ಲದೆ ಮತ್ತಿನ್ನೇನು. ಈ ಸರ್ಕಾರವೂ ಒಂದು ನಿಮಿಷವೂ ಇರಲು ಬಿಡಬೇಡಿ. ಕರ್ನಾಟಕದಲ್ಲಿ ನಮ್ಮ ಸರ್ಕಾರ ತನ್ನಿ. ಮುಂದಿನ 5 ವರ್ಷದಲ್ಲಿ ನಾವು ಕರ್ನಾಟಕ ಅಭಿವೃದ್ಧಿ ಮಾಡುತ್ತೇವೆ. ನಾವು ಸಂಕಲ್ಪದ ಅಭಿಯಾನ ಮಾಡುತ್ತಿದ್ದೇವೆ. ಕರ್ನಾಟಕದ ಜನರ ಕನಸನ್ನು ನನಸಾಗಿಸುತ್ತೇವೆ. ಈ ಎಲ್ಲಾ ಕನಸುಗಳನ್ನು ನನಸಾಗಿಸಲು ಬಿಎಸ್‍ವೈ ನೇತೃತ್ವದಲ್ಲಿ ಮುಂದೆ ಸಾಗೋಣ. ಈ ಬಾರಿ ಬಿಜೆಪಿ ಸರ್ಕಾರ, ಬನ್ನಿ ಬಿಜೆಪಿ ಗೆಲ್ಲಿಸಿ ಎಂದು ಜನರ ಬಾಯಲ್ಲೇ ಘೋಷಣೆ ಮೊಳಗಿಸಿದರು.

ಭಾಷಣ ಆರಂಭ ಹಾಗೂ ಅಂತ್ಯ ಕನ್ನಡ ಭಾಷೆಯಲ್ಲೇ ನಡೆಯಿತು. ಸಾಗರೋಪಾದಿಯಲ್ಲಿ ಸೇರಿರೋ ಕರ್ನಾಟಕದ ಅನ್ನದಾತ ಮಹಾಜನರೇ ನಿಮಗೆಲ್ಲರಿಗೂ ನನ್ನ ನಮಸ್ಕಾರಗಳು. ಸಂತ ಬಸವೇಶ್ವರ, ಸಂತ ಕನಕದಾಸ, ಪೂಜ್ಯ ಮಾದಾರ ಚನ್ನಯ್ಯ ಸ್ವಾಮೀಜಿ, ವೀರ ಮಹಿಳೆ ಒನಕೆ ಓಬವ್ವ, ವೀರ ಮದಕರಿ ನಾಯಕ, ರೈತ ನಾಯಕ ಶಾಂತವೇರಿ ಗೋಪಾಲ ಗೌಡ, ಮುಂತಾದ ಮಹನೀಯರನ್ನು ಪ್ರಧಾನಿ ನರೇಂದ್ರ ಮೋದಿ ನೆನೆಯುತ್ತಿದ್ದಂತೆ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು.

 

Share This Article
Leave a Comment

Leave a Reply

Your email address will not be published. Required fields are marked *