ಬಿಜೆಪಿಯಿಂದ ಎಷ್ಟು ಮುಸ್ಲಿಮರು ಆಯ್ಕೆಯಾಗಿದ್ದಾರೆ : ಮೋದಿಗೆ ಓವೈಸಿ ಪ್ರಶ್ನೆ

Public TV
2 Min Read

– ಭಯದಲ್ಲಿ ಕಾಲ ಕಳೆಯುತ್ತಿದ್ದೇವೆ

ನವದೆಹಲಿ: ಬಿಜೆಪಿಯಿಂದ ಲೋಕಸಭೆಗೆ ಆಯ್ಕೆಯಾದ 303 ಜನರಲ್ಲಿ ಮುಸ್ಲಿಮರು ಎಷ್ಟು ಜನರಿದ್ದಾರೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಗೋ ಮಾಂಸ ಸಾಗಿಸುತ್ತಿದ್ದಾರೆ ಎನ್ನುವ ಶಂಕೆಯ ಹಿನ್ನೆಲೆಯಲ್ಲಿ ಮುಸ್ಲಿಂ ಯುವಕರ ಮೇಲೆ ಯುವಕರು ನಡೆಸಿದ ಹಲ್ಲೆ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ದೇಶದಲ್ಲಿ ಮುಸ್ಲಿಮರು ಆತಂಕದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 5 ವರ್ಷಗಳಿಂದ ದೇಶದ ಪ್ರತಿಯೊಬ್ಬರ ರಕ್ಷಣೆ ಅಂತ ಹೇಳುತ್ತಾ ಬಂದಿದ್ದಾರೆ. ಇದು ಬೂಟಾಟಿಕೆ ಹಾಗೂ ವಿರೋಧಭಾಸ ಎಂದು ದೂರಿದರು.

ಮುಸ್ಲಿಮರು ಭಯದಲ್ಲಿಯೇ ಜೀವನ ನಡೆಸುತ್ತಿದ್ದಾರೆ ಎಂದು ಅವರು ಮೋದಿ ಒಪ್ಪಿಕೊಳ್ಳುವುದಾದರೆ, ಮೊಹ್ಮಮದ್ ಅಖ್ಲಾಕ್ ಕೊಲೆ ಮಾಡಿದವರು ಇಂದು ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ಕುಳಿರುವುದನ್ನು ಅರಿತುಕೊಳ್ಳಬೇಕು. ಮುಸ್ಲಿಮರು ಆತಂಕದಲ್ಲಿದ್ದಾರೆ ಎಂದು ಪ್ರಧಾನಿ ಮೋದಿ ಭಾವಿಸಿದರೆ ಗೋಮಾಂಸದ ಹೆಸರಿನಲ್ಲಿ ಮುಸ್ಲಿಂ ಯುವಕರ ಮೇಲೆ ಗುಂಡಾಗಳು ನಡೆಸುತ್ತಿರುವ ಹಲ್ಲೆ, ಕೊಲೆಯನ್ನು ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ 2015 ಸೆಪ್ಟೆಂಬರ್ 28ರಂದು ಗೋಮಾಂಸ ಸಂಗ್ರಹಿಸಿದ ಆರೋಪದ ಮೇಲೆ ದಾದ್ರಿಯ ಮುಸ್ಲಿಂ ವ್ಯಕ್ತಿ ಮೊಹಮ್ಮದ್ ಅಖ್ಲಾಕ್‍ನನ್ನು ಗುಂಪೊಂದು ಹತ್ಯೆ ಮಾಡಿತ್ತು. ಆದರೆ ತನಿಖೆಯ ಬಳಿಕ ಅಖ್ಲಾಕ್ ಮನೆಯಲ್ಲಿದ್ದಿದ್ದು ಗೋಮಾಂಸ ಅಲ್ಲ, ಕುರಿ ಮಾಂಸ ಎನ್ನುವ ವಿಚಾರ ಬೆಳಕಿಗೆ ಬಂದಿತ್ತು.

ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ಮೇ 22ರಂದು ಆಟೋದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂದು ಶಂಕಿಸಿ ಯುವಕರ ಗುಂಪೊಂದು ಮುಸ್ಲಿಂ ಯುವತಿ ಹಾಗೂ 4 ಮಂದಿ ಯುವಕರಿಗೆ ಮನಬಂದಂತೆ ಥಳಿಸಿದ್ದರು. ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಯುವಕರು ಹಲ್ಲೆ ಮಾಡುತ್ತಿರುವುದನ್ನು ಸ್ಥಳೀಯರು ವಿಡಿಯೋ ಮಾಡುತ್ತಿದ್ದರೆ ವಿನಾ: ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ವಿಡಿಯೋದಲ್ಲಿ ಕೆಲ ಯುವಕರ ಗುಂಪು “ಜೈ ಶ್ರೀರಾಮ್” ಎಂದು ಘೋಷಣೆ ಕೂಗುತ್ತಾ ಯುವತಿಯ ತಲೆಗೆ ಚಪ್ಪಲಿಯಿಂದ ಹೊಡೆದಿದ್ದರು ಮತ್ತು ಕೆಲ ಯುವಕರನ್ನು ಮರಕ್ಕೆ ಕಟ್ಟಿ ಅವರಿಗೆ ದೊಣ್ಣೆಗಳಿಂದ ಹೊಡೆಸಿದ್ದರು.

ಮೇ 23 ರಂದು ಈ ವಿಡಿಯೋವನ್ನು ಶುಭಮ್ ಸಿಂಗ್ ಎಂಬ ಶ್ರೀ ರಾಮ ಸೇನಾ ಕಾರ್ಯಕರ್ತ ತನ್ನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡು ನಂತರ ತೆಗೆದು ಹಾಕಿದ್ದನು. ಈ ಆಧಾರದ ಮೇಲೆ ವಿಚಾರಣೆ ಮಾಡಿರುವ ಪೊಲೀಸರು ವಿಡಿಯೋದಲ್ಲಿ ಕಾಣುವ ಸಿಯೋನಿ ನಗರದ ಐದು ಜನ ಯುವಕರನ್ನು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *