ವಸ್ತುಗಳ ತೆರಿಗೆ ಭಾರೀ ಇಳಿಕೆ ಸಾಧ್ಯತೆ – ಜಿಎಸ್‌ಟಿಯಲ್ಲಿ ಇರಲಿದೆ ಎರಡೇ ಸ್ಲ್ಯಾಬ್‌!

Public TV
2 Min Read

– ಮೋದಿ ಭಾಷಣದಲ್ಲಿ ಜಿಎಸ್‌ಟಿ ಪರಿಷ್ಕರಣೆಯ ಸುಳಿವು
– 5%, 18% ಸ್ಲ್ಯಾಬ್‌ ಮಾತ್ರ ಉಳಿಸಿಕೊಳ್ಳಲು ಪ್ರಸ್ತಾಪ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜಿಎಸ್‌ಟಿ (GST) ದರ ಪರಿಷ್ಕರಣೆಯ ಸುಳಿವು ನೀಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ 2 ಸ್ಲ್ಯಾಬ್‌ (Slab) ಮಾತ್ರ ಉಳಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಈಗ ಅಗತ್ಯ ವಸ್ತುಗಳಿಗೆ 0%, ಮೂಲಭೂತ ಅಗತ್ಯಗಳಿಗೆ ಬೇಕಾದ ವಸ್ತುಗಳಿಗೆ 5%, ಪ್ರಮಾಣಿತ ಸರಕುಗಳಿಗೆ 12%, ಹೆಚ್ಚಿನ ಗ್ರಾಹಕ ಉತ್ಪನ್ನಗಳಿಗೆ 18%, ಐಷಾರಾಮಿ ಸರಕುಗಳಿಗೆ 28% ಜಿಎಸ್‌ಟಿ ವಿಧಿಸಲಾಗುತ್ತಿದೆ.

ಸದ್ಯ ಈಗ ಇರುವ ಸ್ಲ್ಯಾಬ್‌ಗಳ ಪೈಕಿ 5% ಮತ್ತು 18% ಸ್ಲ್ಯಾಬ್‌ ಮಾತ್ರ ಉಳಿಸಿಕೊಳ್ಳಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ. ಈ ಪ್ರಸ್ತಾವನೆಯಡಿಯಲ್ಲಿ 28% ನಲ್ಲಿರುವ 90% ರಷ್ಟು ವಸ್ತುಗಳನ್ನು 18%ಕ್ಕೆ ವರ್ಗಾಯಿಸಲಾಗುತ್ತದೆ, 12% ರಷ್ಟು ಸ್ಲ್ಯಾಬ್‌ನಲ್ಲಿರುವ 99% ರಷ್ಟು ವಸ್ತುಗಳನ್ನು 5% ಸ್ಲ್ಯಾಬ್‌ಗೆ ವರ್ಗಾಯಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಐಷಾರಾಮಿ ಸರಕುಗಳಿಗೆ 40% ದರ ಅನ್ವಯಿಸುತ್ತದೆ. ಇದರಲ್ಲಿ ತಂಬಾಕು, ಗುಟ್ಕಾ ಮತ್ತು ಸಿಗರೇಟ್ ಸೇರಿವೆ. ಸರ್ಕಾರಿ ಮೂಲಗಳ ಪ್ರಕಾರ 40% ವರ್ಗವು ಕೇವಲ 5-7 ವಸ್ತುಗಳನ್ನು ಮಾತ್ರ ಹೊಂದಿರುತ್ತದೆ. ರೆಫ್ರಿಜರೇಟರ್, ಎಸಿ, ವಾಷಿಂಗ್‌ ಮಷೀನ್‌ನಂತ ವಸ್ತುಗಳನ್ನು ಇದರಿಂದ ಹೊರಗಿಡಲಾಗುತ್ತದೆ.  ಇದನ್ನೂ ಓದಿ: ಈ ವರ್ಷದ ಅಂತ್ಯಕ್ಕೆ ಮಾರುಕಟ್ಟೆಗೆ ಬರಲಿದೆ ಮೇಡ್‌ ಇನ್‌ ಇಂಡಿಯಾ ಚಿಪ್‌: ಮೋದಿ ಘೋಷಣೆ

 

ಒಟ್ಟು ಜಿಎಸ್‌ಟಿ ಆದಾಯದ ಪೈಕಿ 67% ಆದಾಯ 18% ಸ್ಲ್ಯಾಬ್‌ನಲ್ಲಿರುವ ವಸ್ತುಗಳಿಂದ ಬರುತ್ತಿದೆ. 11% ಮತ್ತು 5% ಆದಾಯ ಕ್ರಮವಾಗಿ 28% ಮತ್ತು 12% ಬಂದರೆ, 12% ಆದಾಯ 5% ಸ್ಲ್ಯಾಬ್‌ನಲ್ಲಿರುವ ವಸ್ತುಗಳಿಂದ ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ. ತೆರಿಗೆ ಪರಿಷ್ಕರಣೆಯಾದರೂ ಪೆಟ್ರೋಲ್‌, ಡೀಸೆಲ್‌ ದರಗಳು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ಇಡಲಾಗುತ್ತದೆ.

ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಡಬಲ್ ದೀಪಾವಳಿಗೆ ಜಿಎಸ್‌ಟಿ ಸುಧಾರಣೆಗಳನ್ನು ತರಲಾಗುವುದು ಎಂದು ಹೇಳಿದ ಕೆಲವೇ ಗಂಟೆಗಳ ನಂತರ ಪ್ರಸ್ತಾವಿತ ಜಿಎಸ್‌ಟಿ ಪರಿಷ್ಕರಣೆ ಸುದ್ದಿಗಳು ಹೊರಬಂದಿವೆ. ಇದನ್ನೂ ಓದಿ:  12 ಸ್ವಾತಂತ್ರ್ಯ ಸಂಭ್ರಮಗಳಲ್ಲಿ ಭಾಗಿ2014 ರಿಂದ 2025 – ಮೋದಿ ಪೇಟ, ವಿಭಿನ್ನ ಲುಕ್‌ ನೋಡಿ

ಕೇಂದ್ರ ಸರ್ಕಾರ ಈ ಪ್ರಸ್ತಾಪ ಸಿದ್ಧಪಡಿಸಿದರೂ ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಬೇಕಾಗುತ್ತದೆ. ಜಿಎಸ್‌ಟಿ ಕೌನ್ಸಿಲ್‌ನಲ್ಲಿ ರಾಜ್ಯಗಳು ಒಪ್ಪಿಗೆ ನೀಡಿದರೆ ಮಾತ್ರ ಇದು ಜಾರಿಯಾಗುತ್ತದೆ. ಹಲವು ರಾಜ್ಯಗಳು ಚುನಾವಣೆಯ ಸಮಯದಲ್ಲಿ ಉಚಿತ ಘೋಷಣೆ ಮಾಡಿವೆ. ಹೀಗಾಗಿ ಈ ಯೋಜನೆಗಳಿಗೆ ಹಣ ಹೊಂದಿಸಲು ಜಿಎಸ್‌ಟಿ ಪರಿಷ್ಕರಣೆಗೆ ಸರ್ಕಾರಗಳು ಒಪ್ಪಿಗೆ ನೀಡುತ್ತಾ? ಇಲ್ವೋ ಎನ್ನುವುದು ಸದ್ಯದ ಕುತೂಹಲ.

ಈ ಹಿಂದೆ ಹಲವು ಬಾರಿ ಕೇಂದ್ರ ಸರ್ಕಾರ ಪೆಟ್ರೋಲ್‌, ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಮುಂದಾಗಿತ್ತು. ಆದರೆ ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡದ ಕಾರಣ ಈಗಲೂ ತೈಲಗಳು ಜಿಎಸ್‌ಟಿ ವ್ಯಾಪ್ತಿಗೆ ಸೇರ್ಪಡೆಯಾಗಿಲ್ಲ.

 

Share This Article