ರಾಜ್ಯಕ್ಕೆ ಇಂದು ಪ್ರಧಾನಿ ಮೋದಿ ಆಗಮನ – ಮಂಡ್ಯ, ಧಾರವಾಡದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ

Public TV
1 Min Read

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ (ಇಂದು) ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಮಂಡ್ಯ (Mandya) ಮತ್ತು ಧಾರವಾಡದಲ್ಲಿ (Dharwad) ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ಮಧ್ಯಾಹ್ನ 11:10ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ಪ್ರಧಾನಿ ಮೋದಿ ಮಂಡ್ಯಗೆ ತೆರಳಿ, ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ (Bengaluru-Mysuru Expressway) ಉದ್ಘಾಟನೆ ಮಾಡಲಿದ್ದಾರೆ. ಮಂಡ್ಯದ ಅಮರಾವತಿ ಹೋಟೆಲ್‌ ಬಳಿ ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಮಧ್ಯಾಹ್ನ 11:40ಕ್ಕೆ ಹೆದ್ದಾರಿ ಲೋಕಾರ್ಪಣೆಗೊಳ್ಳಲಿದೆ. ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆಗೆ ಕ್ಷಣಗಣನೆ; ಕನ್ನಡದಲ್ಲೇ ಟ್ವೀಟ್‌ ಮಾಡಿ ಮೋದಿ ಬಣ್ಣನೆ

ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ಬಳಿಕ ಮೋದಿ ಅವರು ಮಂಡ್ಯದಲ್ಲಿ 1.8 ಕಿಮೀ ರೋಡ್‌ ಶೋ ನಡೆಸಲಿದ್ದಾರೆ. ಮಧ್ಯಾಹ್ನ 12:15ರಿಂದ 1:15ರವರೆಗೆ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮದ್ದೂರಿನ ಗೆಜ್ಜಲಗೆರೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಈ ವೇಳೆ 5,700 ಕೋಟಿ ವೆಚ್ಚದ ಮಂಡ್ಯ-ಕುಶಾಲನಗರ ಹೆದ್ದಾರಿಗೆ ಭೂಮಿ ಪೂಜೆ ಮಾಡಲಿದ್ದಾರೆ. ಜೊತೆಗೆ ಹಲವು ಕೇಂದ್ರ ಸರ್ಕಾರದ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜು ಹೆಲಿಪ್ಯಾಡ್‌ನಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಮಧ್ಯಾಹ್ನ 1:30ಕ್ಕೆ ಹುಬ್ಬಳಿಗೆ ತೆರಳಲಿದ್ದಾರೆ.

ಮಧ್ಯಾಹ್ನ 2:45ಕ್ಕೆ ಮೋದಿ ಹುಬ್ಬಳ್ಳಿ ತಲುಪಲಿದ್ದಾರೆ. ಹೆಲಿಕಾಪ್ಟರ್ ಮೂಲಕ ಧಾರವಾಡದ ಚಿಕ್ಕಮಲ್ಲಿಗ ವಾಡದಲ್ಲಿರುವ ‘ಐಐಟಿ ಧಾರವಾಡ’ದ ನೂತನ ಕ್ಯಾಂಪಸ್‌ಗೆ ಭೇಟಿ ನೀಡಿ, ಸಂಜೆ 4ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ‘ಐಐಟಿ ಧಾರವಾಡ’ದ ಕ್ಯಾಂಪಸ್, ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ನಿರ್ಮಾಣಗೊಂಡಿರುವ ವಿಶ್ವದ ಅತಿ ಉದ್ದನೆಯ ಪ್ಲಾಟ್‌ಫಾರ್ಮ್ ಉದ್ಘಾಟಿಸಲಿದ್ದಾರೆ. ಜಯದೇವ ಹೃದ್ರೋಗ ಆಸ್ಪತ್ರೆಗೆ ಶಂಕುಸ್ಥಾಪನೆ ಹಾಗೂ ವಿವಿಧ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಸಂಜೆ 5ಕ್ಕೆ ದೆಹಲಿಗೆ ವಾಪಸ್‌ ಆಗಲಿದ್ದಾರೆ. ಇದನ್ನೂ ಓದಿ: ಬಿಜೆಪಿ ಮಾಜಿ ಸಚಿವ ಎ.ಮಂಜು ಜೆಡಿಎಸ್ ಸೇರ್ಪಡೆ

ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ಮಂಡ್ಯ ಹಾಗೂ ಧಾರವಾಡದಲ್ಲಿ ಬಿಜೆಪಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಭದ್ರತಾ ದೃಷ್ಟಿಯಿಂದ ಪೊಲೀಸ್‌ ಇಲಾಖೆ ಸಹ ಬಿಗಿ ಬಂದೋಬಸ್ತ್‌ ಕಲ್ಪಿಸಿದೆ.

Share This Article
Leave a Comment

Leave a Reply

Your email address will not be published. Required fields are marked *