ಬೆಂಗಳೂರು ಉತ್ಸಾಹಭರಿತ ವಾಸ್ತುಶಿಲ್ಪ ನಗರಿ: ಪ್ರಧಾನಿ ಮೋದಿ ಬಣ್ಣನೆ

By
2 Min Read

– ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್‌ 2ಗೆ ಯುನೆಸ್ಕೋ ವಿಶ್ವ ಮನ್ನಣೆಗೆ ಪ್ರಧಾನಿ ಶ್ಲಾಘನೆ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ಗೆ ಯುನೆಸ್ಕೋದ ವಿಶೇಷ ವಿಶ್ವ ಮನ್ನಣೆ ಸಿಕ್ಕಿದೆ. ಇದಕ್ಕೆ ತಮ್ಮ ಎಕ್ಸ್ ಖಾತೆಯಲ್ಲಿ ಪ್ರಧಾನಿ ‌ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಜಗತ್ತಿನ ಅತ್ಯಂತ ಸುಂದರ ವಿಮಾನ ನಿಲ್ದಾಣಗಳ ಪೈಕಿ ಇದೂ ಒಂದು ಎಂಬ ಕೀರ್ತಿಗೆ ನಮ್ಮ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾಜನವಾಗಿದೆ ಎಂದು ಕಳೆದ ವರ್ಷ ಟರ್ಮಿನಲ್ ಕಟ್ಟಡ ಉದ್ಘಾಟನೆಯ ಫೋಟೋಗಳನ್ನ ಶೇರ್‌ ಮಾಡಿ ಮೋದಿ ಹರ್ಷವನ್ನ ವ್ಯಕ್ತಪಡಿಸಿದ್ದಾರೆ. ಉತ್ಸಾಹಭರಿತ ನಗರದ ಜೊತೆಗೆ ವಾಸ್ತುಶಿಲ್ಪದಲ್ಲಿ ತನ್ನ ಜಾಣ್ಮೆಯನ್ನ ಇಲ್ಲಿ ತೋರಿಸಲಾಗಿದೆ. ಇದು ಭಾರತಕ್ಕೆ ಹೆಮ್ಮೆ ಎಂದು ಪ್ರಧಾನಿಗಳು ಶ್ಲಾಘಿಸಿದ್ದಾರೆ.

‘ಶ್ಲಾಘನೀಯ ಸಾಧನೆ! ಬೆಂಗಳೂರಿನ ಜನತೆಗೆ ಅಭಿನಂದನೆಗಳು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಕೇವಲ ರೋಮಾಂಚಕ ನಗರವಾದ ಬೆಂಗಳೂರಿನ ಹೆಬ್ಬಾಗಿಲು ಮಾತ್ರವಲ್ಲದೆ, ವಾಸ್ತುಶಿಲ್ಪದ ವೈಭವದ ಪ್ರದರ್ಶನವಾಗಿದೆ. ಈ ಸಾಧನೆಯು ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಕಲಾತ್ಮಕ ಸೌಂದರ್ಯದೊಂದಿಗೆ ಸಂಯೋಜಿಸುವಲ್ಲಿ ದೇಶದ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಕಳೆದ ವರ್ಷ ಟರ್ಮಿನಲ್ ಕಟ್ಟಡದ ಉದ್ಘಾಟನೆಯ ಝಲಕ್ ಇಲ್ಲಿದೆ’ ಎಂದು ಪ್ರಧಾನಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ನಿಜಕ್ಕೂ ವರ್ಷಾಂತ್ಯದಲ್ಲಿ ಬೆಂಗಳೂರಿಗೆ ಇದು ಒಂದು ಶುಭ ಸುದ್ದಿ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯುನೆಸ್ಕೋದ 2023ರ ಪ್ರಿಕ್ಸ್‌ ವರ್ಸೈಲ್ಸ್‌ನಲ್ಲಿ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗಿದೆ.

ಹೌದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಅನ್ನು ವಿಶ್ವದ ಅತ್ಯಂತ ಸುಂದರ ವಿಮಾನ ನಿಲ್ದಾಣಗಳ ಪೈಕಿ ಒಂದು ಎಂದು ಯುನೆಸ್ಕೋ ಗುರುತಿಸಿದೆ. ಟರ್ಮಿನಲ್ 2ರ ಒಳಾಂಗಣ ವಿನ್ಯಾಸಕ್ಕಾಗಿ ವರ್ಲ್ಡ್‌ ಸ್ಪೆಷಲ್ ಪ್ರೈಝ್ ಫಾರ್ ಆನ್ ಇಂಟೀರಿಯರ್‌-2023 ಎಂಬ ಪ್ರಶಸ್ತಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾಜನವಾಗಿದೆ.

Share This Article