ಜ.2ರಂದು ತುಮಕೂರಿಗೆ ಪ್ರಧಾನಿ ಮೋದಿ: ಡಿಸಿಎಂ ಲಕ್ಷ್ಮಣ ಸವದಿ

Public TV
2 Min Read

– ಪರಿಹಾರ ಕೊಟ್ಟು ಗಲಭೆಗೆ ಮಮತಾ ಬ್ಯಾನರ್ಜಿ ಪ್ರಚೋದನೆ

ತುಮಕೂರು: ಮಂಗಳೂರು ಗೋಲಿಬಾರಿನಲ್ಲಿ ಮೃತಪಟ್ಟವರಿಗೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಪರಿಹಾರ ಕೊಟ್ಟಿರುವುದನ್ನು ಡಿಸಿಎಂ ಲಕ್ಷ್ಮಣ ಸವದಿ ಕಟುವಾಗಿ ಟೀಕಿಸಿದ್ದು, ಜನರು ಗಲಭೆ ಮಾಡಿಕೊಂಡು ಸತ್ತರೂ ಪರಿಹಾರ ಕೊಡುತ್ತೇವೆ ಎಂದು ಮಮತಾ ಬ್ಯಾನರ್ಜಿ ಪ್ರಚೋದನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಲಕ್ಷ್ಮಣ ಸವದಿ ಅವರು, ಪಶ್ಚಿಮ ಬಂಗಾಳದ ಸಿಎಂಗೆ ಕರ್ನಾಟಕದಲ್ಲಿ ಪರಿಹಾರ ನೀಡುವ ಆಸಕ್ತಿಯೇನು? ಈ ಬಗ್ಗೆ ಆಲೋಚಿಸಬೇಕಾಗಿದೆ. ಕೋಮುಗಲಭೆ ಉಂಟುಮಾಡಲು ಎಲ್ಲಾ ಪಕ್ಷಗಳು ಹುನ್ನಾರ ಮಾಡುತ್ತಿವೆ ಎಂಬುವುದು ಸ್ಪಷ್ಟವಾಗಿದೆ. ಜನರು ಗಲಭೆ ಮಾಡಿಕೊಂಡು ಸತ್ತರು ಪರಿಹಾರ ಕೊಡುತ್ತೇವೆ ಎಂದು ಪ್ರಚೋದಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಗಲಭೆಕೋರರಿಗೆ ದಂಡ ಹಾಕುವ ನಿಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರು ಆಲೋಚಿಸಿದ ರೀತಿಯಲ್ಲಿ ನಾವು ಆಲೋಚನೆ ಮಾಡುತ್ತಿದ್ದೇವೆ. ಗಲಭೆ ಮಾಡಿ ಸಾರ್ವಜನಿಕ ಆಸ್ತಿ ಹಾಳು ಮಾಡುವುದಕ್ಕೆ ದಂಡ ವಸೂಲಿ ಜಾರಿ ಮಾಡಲು ಚಿಂತನೆ ನಡೆದಿದೆ. ದಂಡ ನೀಡದಿದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಕಠಿಣ ಕಾನೂನಿಗೆ ಚಿಂತನೆ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ತುಮಕೂರಿಗೆ ಮೋದಿ: ಜನವರಿ 2 ರಂದು ಪ್ರಧಾನಿ ಮೋದಿ ಅವರು ತುಮಕೂರಿಗೆ ಭೇಟಿ ನೀಡಲಿದ್ದು, ಕಾರ್ಯಕ್ರಮ ನಡೆಯುವ ಸ್ಥಳವನ್ನು ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಸಚಿವ ವಿ.ಸೋಮಣ್ಣ ಪರಿಶೀಲಿಸಿದರು. ಕಿಸಾನ್ ಸಮ್ಮಾನ್ ಯೋಜನೆಯ 2ನೇ ಹಂತ ಲೋಕಾರ್ಪಣೆ ಕಾರ್ಯಕ್ರಮ ಜನವರಿ 2ರಂದು ನಡೆಯಲಿದ್ದು, ಸುಮಾರು ಒಂದು ಲಕ್ಷ ರೈತರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಸೋಮಣ್ಣ ತಿಳಿಸಿದರು.

ಜನವರಿ 2ರ ಸಂಜೆ 4ಗಂಟೆ ವೇಳೆಗೆ ಪ್ರಧಾನಿಗಳು ಆಗಮಿಸಲಿದ್ದು, ಮೊದಲು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಶಿವಕುಮಾರ ಶ್ರೀ ಗಳ ಗದ್ದುಗೆ ದರ್ಶನ ಪಡೆದು ಬಳಿಕ ಸಿದ್ದಲಿಂಗಸ್ವಾಮಿಗಳ ಆಶೀರ್ವಾದ ಪಡೆಯಲಿದ್ದಾರೆ. ಮಠದ ಮಕ್ಕಳೊಂದಿಗೆ ಹತ್ತು ನಿಮಿಷಗಳ ಕಾಲ ಸಂವಾದ ನಡೆಸಲಿದ್ದಾರೆ. ಸುಮಾರು 40 ನಿಮಿಷಗಳ ಕಾಲ ಸಿದ್ದಗಂಗಾ ಮಠದಲ್ಲಿಯೇ ಮೋದಿ ಇರಲಿದ್ದು, ಬಳಿಕ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ರಾಜ್ಯಾದ್ಯಂತ ಒಂದು ಸಾವಿರ ಕೆಎಸ್‍ಆರ್ ಟಿಸಿ ಬಸ್‍ಗಳ ವ್ಯವಸ್ಥೆ ಮಾಡಲಾಗಿದ್ದು. ದೇಶದ ಆಯ್ದ 40 ಪ್ರಗತಿಪರ ರೈತರಿಗೆ ಮೋದಿ ಸನ್ಮಾನಿಸಲಿದ್ದಾರೆ. ಬಳಿಕ 5.30ಕ್ಕೆ ಬೆಂಗಳೂರಿಗೆ ಮೋದಿ ಪ್ರಯಾಣ ಬೆಳೆಸಲಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಮಾಹಿತಿ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *