ಬೊಜ್ಜು ವಿರುದ್ಧ ಅಭಿಯಾನ – ಒಮರ್ ಅಬ್ದುಲ್ಲಾ, ಆನಂದ್ ಮಹೀಂದ್ರಾ ಸೇರಿ 10 ಗಣ್ಯರ ನಾಮ ನಿರ್ದೇಶನ ಮಾಡಿದ ಮೋದಿ

Public TV
3 Min Read

ನವದೆಹಲಿ: ಬೊಜ್ಜು ವಿರುದ್ಧದ ಹೋರಾಟವನ್ನು ಬಲಪಡಿಸಲು, ಆಹಾರದಲ್ಲಿ ಖಾದ್ಯಗಳಲ್ಲಿ ಅಡುಗೆ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡುವ ಬಗ್ಗೆ ಜಾಗೃತಿ ಮೂಡಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ದೇಶದ ಪ್ರಮುಖ ಹತ್ತು ವ್ಯಕ್ತಿಗಳ ಹೆಸರಗಳನ್ನು ನಾಮ ನಿರ್ದೇಶನ ಮಾಡಿದ್ದಾರೆ.

ಇತ್ತೀಚಿಗೆ ಮನ್ ಕೀ ಬಾತ್‌ನಲ್ಲಿ (Mann Ki Baat) ಈ ಬಗ್ಗೆ ಮಾತನಾಡಿದ್ದ ಪ್ರಧಾನಿ ಮೋದಿ ಹತ್ತು ಹೆಸರುಗಳನ್ನು ನಾಮ ನಿರ್ದೇಶನ ಮಾಡುವುದಾಗಿ ಹೇಳಿದ್ದರು. ಅದರಂತೆ ಹತ್ತು ಹೆಸರುಗಳನ್ನು ಎಕ್ಸ್ ಖಾತೆಯಲ್ಲಿ ಅವರು ಹಂಚಿಕೊಂಡಿದ್ದಾರೆ.

 

ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ (Anand Mahindra), ಅಜಂಗಢದ ಮಾಜಿ ಬಿಜೆಪಿ ಸಂಸದ ಮತ್ತು ಭೋಜ್‌ಪುರಿ ನಟ ದಿನೇಶ್ ಲಾಲ್ ಯಾದವ್ ‘ನಿರಹುವಾ’, ಕ್ರೀಡಾಪಟು ಮನು ಭಾಕರ್, ಕ್ರೀಡಾಪಟು ಮೀರಾಬಾಯಿ ಚಾನು, ಹಿರಿಯ ಮಲೆಯಾಳಂ ಚಲನಚಿತ್ರ ನಟ ಮೋಹನ್ ಲಾಲ್, ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಹಿಂದಿ ಮತ್ತು ತಮಿಳು ಚಲನಚಿತ್ರ ನಟ ಆರ್. ಮಾಧವನ್, ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಮತ್ತು ಇನ್ಫೋಸಿಸ್ ಸಂಸ್ಥಾಪಕಿ ಮತ್ತು ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಹೆಸರನ್ನು ಮೋದಿ ನಾಮ ನಿರ್ದೇಶನ ಮಾಡಿದ್ದಾರೆ. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ವೇಳೆ ವಿದೇಶಿಯರ ಅಪಹರಣಕ್ಕೆ ಇಸ್ಲಾಮಿಕ್ ಸ್ಟೇಟ್ ಸಂಚು – ಪಾಕ್ ಗುಪ್ತಚರ ಸಂಸ್ಥೆ ಎಚ್ಚರಿಕೆ

ಹೆಸರುಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ ನಾಮ ನಿರ್ದೇಶನಗೊಂಡ ವ್ಯಕ್ತಿಗಳು ಇತರ 10 ಜನರನ್ನು ನಾಮನಿರ್ದೇಶನ ಮಾಡುವಂತೆ ವಿನಂತಿಸಿದರು. ಪ್ರಧಾನಿ ಮೋದಿಯವರ ಟ್ವೀಟ್‌ಗೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (Omar Abdullah) ಪ್ರತಿಕ್ರಿಯಿಸಿ, ಅಭಿಯಾನಕ್ಕೆ ಸೇರಲು ಸಂತೋಷ ವ್ಯಕ್ತಪಡಿಸಿದರು. ಈ ಅಭಿಯಾನ ಉತ್ತೇಜಿಸಲು ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ನಟಿ ದೀಪಿಕಾ ಪಡುಕೋಣೆ ಮತ್ತು ಕ್ರಿಕೆಟ್ ಆಟಗಾರ ಇರ್ಫಾನ್ ಪಠಾಣ್ ಸೇರಿದಂತೆ ಇತರ 10 ಜನರನ್ನು ನಾಮನಿರ್ದೇಶನ ಮಾಡಿದರು.

ಪ್ರಧಾನಿ ಮೋದಿ ಭಾನುವಾರ ತಮ್ಮ ‘ಮನ್ ಕಿ ಬಾತ್’ ಭಾಷಣದಲ್ಲಿ ಜನರು ಆಹಾರದಲ್ಲಿ ಕಡಿಮೆ ಎಣ್ಣೆಯನ್ನು ಬಳಸಬೇಕೆಂದು ಮತ್ತು ತೈಲ ಸೇವನೆಯನ್ನು ಶೇ. 10 ರಷ್ಟು ಕಡಿಮೆ ಮಾಡುವ ಸವಾಲನ್ನು ಇತರ 10 ಜನರಿಗೆ ರವಾನಿಸಬೇಕೆಂದು ಮನವಿ ಮಾಡಿದ್ದರು.

2022 ರಲ್ಲಿ ಪ್ರಪಂಚದಾದ್ಯಂತ ಸುಮಾರು 250 ಕೋಟಿ ಜನರು ಅಧಿಕ ತೂಕ ಹೊಂದಿದ್ದರು. ಒಂದು ಅಧ್ಯಯನದ ಪ್ರಕಾರ ಇಂದು ಪ್ರತಿ 8 ಜನರಲ್ಲಿ ಒಬ್ಬರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಳೆದ ವರ್ಷಗಳಲ್ಲಿ ಬೊಜ್ಜಿನ ಪ್ರಕರಣಗಳು ದ್ವಿಗುಣಗೊಂಡಿವೆ. ಇನ್ನೂ ಆತಂಕದ ವಿಷಯ ಏನೆಂದರೆ ಮಕ್ಕಳಲ್ಲಿಯೂ ಬೊಜ್ಜಿನ ಸಮಸ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ಆದರೆಈ ಸವಾಲನ್ನು ಸಣ್ಣ ಪ್ರಯತ್ನಗಳಿಂದ ನಿಭಾಯಿಸಬಹುದು ಎಂದು ಹೇಳಿದರು.

 

Share This Article