ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ – ಆರ್‌ಸಿಇಪಿ ಒಪ್ಪಂದದಿಂದ ಹಿಂದಕ್ಕೆ ಸರಿದ ಭಾರತ

Public TV
2 Min Read

ಬ್ಯಾಂಕಾಕ್: ದೇಶಾದ್ಯಂತ ಭಾರೀ ವಿವಾದ-ಚರ್ಚೆಗೆ ಗ್ರಾಸವಾಗಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್‌ಸಿಇಪಿ)ಒಪ್ಪಂದದಿಂದ ಕೇಂದ್ರ ಸರ್ಕಾರ ಹೊರ ಬಂದಿದೆ.

ಥಾಯ್ಲೆಂಡಿನ ಬ್ಯಾಂಕಾಕ್‌ನಲ್ಲಿ ನಡೆದ ಆಸಿಯಾನ್ ರಾಷ್ಟ್ರಗಳ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಹಿತಾಸಕ್ತಿಯನ್ನು ಬಲಿಗೊಡುವ ಯಾವುದೇ ಕೆಲಸವನ್ನು ಮಾಡಲ್ಲ. ನನ್ನ ಆತ್ಮಸಾಕ್ಷಿಯೂ ಇದಕ್ಕೆ ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ. ಆರ್‌ಸಿಇಪಿ ವಿಚಾರದ ಬಗ್ಗೆ ಭಾರತೀಯರಿಂದ ನನಗೆ ಯಾವುದೇ ಧನಾತ್ಮಕ ಉತ್ತರ ಸಿಗಲಿಲ್ಲ. ಹೀಗಾಗಿ ಈ ಒಪ್ಪಂದಕ್ಕೆ ನನ್ನ ಒಪ್ಪಿಗೆ ಇಲ್ಲ ಎಂದು ತಿಳಿಸಿದ್ದಾರೆ.

ಭಾರತವನ್ನು ಹೊರತುಪಡಿಸಿ ಉಳಿದ 15 ರಾಷ್ಟ್ರಗಳು ಈ ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿಗೆ ಸೂಚಿಸಿವೆ. ವಿಯೆಟ್ನಾಂನಲ್ಲಿ 2020ರ ಫೆಬ್ರುವರಿಯಲ್ಲಿ ನಡೆಯಲಿರುವ ಆರ್‌ಸಿಇಪಿ ಶೃಂಗಸಭೆಯಲ್ಲಿ ಈ ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಲಿವೆ.

2012ರಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರ ಆಡಳಿತದಲ್ಲಿದ್ದಾಗ ಈ ಒಪ್ಪಂದದ ಮಾತುಕತೆ ಆರಂಭವಾಗಿತ್ತು. ಕೆಲವು ಉತ್ಪನ್ನಗಳನ್ನು ಸುಂಕರಹಿತ ವ್ಯಾಪಾರದಿಂದ ಹೊರಗೆ ಇಡಬೇಕು ಎಂದು ಸರ್ಕಾರ ಆಗ್ರಹಿಸಿತ್ತು. ನಂತರ ಬಂದ ಮೋದಿ ಸರ್ಕಾರ ಸರ್ಕಾರಗಳೂ ಇದನ್ನೇ ಪ್ರತಿಪಾದಿಸಿದ್ದರಿಂದ ಒಪ್ಪಂದ ಜಾರಿಯಾಗಿರಲಿಲ್ಲ.

ಅಮೆರಿಕದ ವ್ಯಾಪಾರ ಸಮರದಿಂದ ಆರ್ಥಿಕತೆ ಕುಸಿದಿರುವ ಚೀನಾ ಒಪ್ಪಂದ ಅಂತಿಮವಾಗಲೇಬೇಕೆಂದು ಪಟ್ಟು ಹಿಡಿದ ಕಾರಣ ಈಗ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಒಪ್ಪಂದವು ಜಾರಿಯಾದರೆ ಆಸಿಯಾನ್ ರಾಷ್ಟ್ರಗಳು ಮತ್ತು ಚೀನಾದಿಂದ ಅತ್ಯಂತ ಕಡಿಮೆ ಬೆಲೆಯಲ್ಲಿ ಸರಕುಗಳು ಭಾರತಕ್ಕೆ ಆಮದಾಗುತ್ತವೆ. ಇದರಿಂದ ಭಾರತೀಯ ವಸ್ತುಗಳಿಗೆ ಬೇಡಿಕೆ ಕುಸಿದು, ಭಾರತದ ತಯಾರಿಕಾ ವಲಯಕ್ಕೆ ಧಕ್ಕೆಯಾಗುತ್ತದೆ ಎಂಬ ವಿರೋಧ ಕೇಳಿಬಂದಿದೆ.

ಹಾಲಿನ ಉತ್ಪನ್ನಗಳೂ ಕಡಿಮೆ ಬೆಲೆಯಲ್ಲಿ ಆಮದಾಗುವುದರಿಂದ ಭಾರತದ ಹೈನುಗಾರಿಕೆಗೆ ಧಕ್ಕೆಯಾಗಲಿದೆ ಎಂದು ಕಾರ್ಮಿಕ ಮತ್ತು ರೈತ ಸಂಘಟನೆಗಳು ಆತಂಕ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದವು.

ರಾಜ್ಯದಲ್ಲಿ ಪ್ರತಿಭಟನೆ: ಆರ್‌ಸಿಇಪಿ ಜಾರಿ ಮಾಡಬಾರದೆಂದು ಆಗ್ರಹಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಕಿಸಾನ್ ಘಟಕದಿಂದ ಭಾರಿ ಪ್ರತಿಭಟನೆ ನಡೆಸಲಾಯ್ತು. ನಗರದ ಕಂಟೋನ್ಮೆಂಟ್ ರೈಲು ನಿಲ್ದಾಣದ ಮುತ್ತಿಗೆಗೆ ಯತ್ನಿಸಿದರು. ಜಪಾನ್, ಕೊರಿಯಾ ಜೊತೆ ಮುಕ್ತ ವ್ಯಾಪಾರಕ್ಕೆ ಸಹಿ ಹಾಕಿ ರೈತರನ್ನ ಬೀದಿಗೆ ಬೀಳಿಸಲು ಮೋದಿ ಹೊರಟಿದ್ದಾರೆ. ಪ್ರವಾಹ, ಬರದಿಂದ ರಾಜ್ಯದ ರೈತರು ತತ್ತರಿಸುತ್ತಿದ್ದಾರೆ. ಈ ಒಪ್ಪಂದದಿಂದ ೧೦ ಕೋಟಿ ಹಾಲು ಉತ್ಪಾದಕರು ಕಷ್ಟಕ್ಕೆ ಸಿಲುಕ್ತಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ಈಶ್ವರ್ ಖಂಡ್ರೆ ಆಕ್ರೋಶ ಹೊರಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *