ಮನ್ ಕಿ ಬಾತ್‌ನಲ್ಲಿ ರಾಜ್ಯದ ಲಾಲಿಹಾಡು ಪ್ರಸಾರ – ʼಮಲಗು ಕಂದʼ ಹಾಡಿಗೆ ಪ್ರಧಾನಿ ಮೋದಿ ಪ್ರಶಂಸೆ

Public TV
2 Min Read

ನವದೆಹಲಿ: ಮನ್ ಕಿ ಬಾತ್.. (Mann Ki Baat) ಇದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪ್ರತಿ ತಿಂಗಳು ಆಕಾಶವಾಣಿಯಲ್ಲಿ ನಡೆಸಿಕೊಡುವ ಕಾರ್ಯಕ್ರಮ. ಸರ್ಕಾರದ ಆಶಯಗಳನ್ನು ತಿಳಿಸುತ್ತಲೇ ದೇಶದ ವಿವಿಧೆಡೆ ಎಲೆ ಮರೆಕಾಯಿಯಂತೆ ದೇಶದ ಅಭಿವೃದ್ಧಿಗೆ ಕೈಜೋಡಿಸುತ್ತಿರುವವರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಬೆಳಕಿಗೆ ಬಾರದಂತೆ ಗಣನೀಯ ಸಾಧನೆ ಮಾಡುತ್ತಿರುವವರ ವಿವರಗಳನ್ನು ತಿಳಿಸಿ ಬೆನ್ನುತಟ್ಟುವ ಕಾರ್ಯವನ್ನು ಪ್ರಧಾನಿ ಮೋದಿ ಅವರು ಮಾಡುತ್ತಿದ್ದಾರೆ. ಈ ಬಾರಿ ಗಡಿ ಜಿಲ್ಲೆ ಚಾಮರಾಜನಗರದ (Chamarajanagar) ಬಾಳಗುಣಸೆ ಮಂಜುನಾಥ್ ಎಂಬ ಕವಿ ಬರೆದ ಜೋಗುಳ ಗೀತೆಯನ್ನು ಪ್ರಸ್ತಾಪಿಸಿ ಪ್ರಶಂಸಿಸಿದ್ದಾರೆ.

ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯ ರಾಷ್ಟ್ರಮಟ್ಟದಲ್ಲಿ ನಡೆಸಿದ ಪೆನ್ ಎ ಲೋರಿ ಎಂಬ ಜೋಗುಳ ಗೀತೆ ಸ್ಪರ್ಧೆಯಲ್ಲಿ ಚಾಮರಾಜನಗರ ಜಿಲ್ಲೆಯ ಬಿ.ಎಂ. ಮಂಜುನಾಥ್ ಎಂಬ ಕವಿ ಪ್ರಥಮ ಸ್ಥಾನ ಪಡೆದಿದ್ದಾರೆ. “ಮಲಗು ಕಂದ, ಮಲಗು ಕೂಸೆ” ಎಂಬ ಈ ಲಾಲಿಹಾಡಿಗೆ ಅವರ ತಾಯಿ, ಅಜ್ಜಿ ಹಾಡುತ್ತಿದ್ದ ಜೋಗುಳಗಳೇ ಸ್ಫೂರ್ತಿಯಾಗಿವೆ. ಇದನ್ನು ಕೇಳಿದರೆ ನಿಮಗೂ ಆನಂದವಾಗುತ್ತದೆ ಎಂದು ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಪ್ರಶಂಸಿಸಿದ್ದಾರೆ. ಇದನ್ನೂ ಓದಿ: ಕೋರ್ಟ್ ಎಚ್ಚರಿಕೆ ಬಳಿಕವೂ ಸಿಂಧೂರಿ ವಿರುದ್ಧ ಗುಡುಗಿದ ರೂಪಾ

ಬಿ.ಎನ್.ಮಂಜುನಾಥ್ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಕಾಡಂಚಿನ ಬಾಳೆಗುಣಸೆ ಎಂಬ ಗ್ರಾಮದವರು. ಎಲ್ಐಸಿ ಪ್ರತಿನಿಧಿ ಆಗಿರುವ ಮಂಜುನಾಥ್ ‌ಪ್ರವೃತ್ತಿಯಲ್ಲಿ ಕವಿ. ಕೇಂದ್ರ ಸಂಸ್ಕೃತಿ ಸಚಿವಾಲಯ ಜೋಗುಳ ಗೀತೆ ರಚಿಸುವ ಸ್ಪರ್ಧೆಗೆ ಆಹ್ವಾನಿಸಿದಾಗ ಪತ್ನಿ ಹಾಗೂ ಮಗನ ಒತ್ತಾಯಕ್ಕೆ ಕಟ್ಟುಬಿದ್ದ ಮಂಜುನಾಥ್, ಮಲಗು ಕಂದ, ಮಲಗು ಕೂಸೆ ಎಂಬ ಜೋಗುಳ ಗೀತೆ ರಚಿಸಿ ಕಳುಹಿಸಿದ್ದರು. ಜಿಲ್ಲಾ ಮಟ್ಟದಲ್ಲಿ ಎರಡನೇ ಸ್ಥಾನ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಈ ಜೋಗುಳ ಗೀತೆಯನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿ ಮಂಜುನಾಥ್ ಅವರನ್ನು ಪ್ರಶಂಸಿಸಿದ್ದಾರೆ. ಸ್ವತಃ ಪ್ರಧಾನಿ ಹೊಗಳಿಕೆಯ ಬಗ್ಗೆ ಹರ್ಷಗೊಂಡಿರುವ ಕವಿ ಮಂಜುನಾಥ್, ಇದು ನನ್ನ ಜೀವನದ ಅವಿಸ್ಮರಣೀಯ ಕ್ಷಣ. ಖಂಡಿತವಾಗಿಯೂ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ತಮ್ಮ ಮನ್‌ ಕಿ‌ ಬಾತ್‌ನಲ್ಲಿ‌ ಕವಿ ಮಂಜುನಾಥ್ ಅವರ ಜೋಗುಳದ ಗೀತೆಯನ್ನು‌ ಪ್ರಸ್ತಾಪಿಸಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಂತೆ ಮಂಜುನಾಥ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಸ್ವತಃ ಶಾಸಕ ಎನ್.ಮಹೇಶ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ ಕುಮಾರಗ ಸುರಾನ ಕವಿ ಮಂಜುನಾಥ್ ನಿವಾಸಕ್ಕೆ ತೆರಳಿ ಸನ್ಮಾನಿಸಿ ಅಭಿನಂದಿಸಿದ್ದಾರೆ. ಇದನ್ನೂ ಓದಿ: ಸಹಾಯಕ ಪ್ರಾಧ್ಯಾಪಕರನ್ನ ನೇಮಿಸೋಕೆ ಸುಧಾಕರ್ 50 ಲಕ್ಷ ಕೇಳಿದ್ದಾರೆ – ಹೆಚ್‌ಡಿಕೆ ಆರೋಪ

ಕವಿ ಬಾಳಗುಣಸೆ ಮಂಜುನಾಥ್ ಅವರು ಚಿತ್ತ ಚಿತ್ತಾರದ ಹೂವು ಎಂಬ ಕವನ ಸಂಕಲನ ಹಾಗೂ ಶಾಪ ಎಂಬ ನಾಟಕ ಪುಸ್ತಕಗಳನ್ನು ಹೊರತಂದಿದ್ದಾರೆ. ಇನ್ನೆರಡು ಕೃತಿಗಳು ಅಚ್ಚಿನ ಹಂತದಲ್ಲಿವೆ. ಈ ನಡುವೆ ಪ್ರಧಾನಿ ಮೋದಿ ಅವರ ಪ್ರಶಂಸೆಯಿಂದ ಮಂಜುನಾಥ್ ಅವರ ಕುಟುಂಬ ಸಂತಸದ ಹೊನಲಿನಲ್ಲಿ ತೇಲುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *