ನವದೆಹಲಿ: ಭಾರತ-ಪಾಕಿಸ್ತಾನ (India Pakistan War) ನಡುವಿನ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿರುವ ಹೊತ್ತಲ್ಲೇ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಶುಕ್ರವಾರ ಮತ್ತೆ ಮೂರು ಸೇನಾ ಮುಖ್ಯಸ್ಥರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಸಿಡಿಎಸ್ ಮತ್ತು ಎಲ್ಲಾ ಸಶಸ್ತ್ರ ಪಡೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಯಿತು. ಪ್ರಸ್ತುತ ಪರಿಸ್ಥಿತಿಗಳ ಬಗ್ಗೆ ಮೋದಿ ಮಾಹಿತಿ ಪಡೆದುಕೊಂಡರು. ಇದನ್ನೂ ಓದಿ: ಭಾರತ-ಪಾಕ್ ಗಡಿಯಲ್ಲಿರುವ 24 ವಿಮಾನ ನಿಲ್ದಾಣಗಳು ಮೇ 15ರವರೆಗೆ ಬಂದ್
ಎರಡು ವಾರಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಮಾರಕ ದಾಳಿಗೆ ಪ್ರತೀಕಾರವಾಗಿ, ಬುಧವಾರ ಭಾರತವು ಭಯೋತ್ಪಾದಕ ಮೂಲಸೌಕರ್ಯವಿದ್ದ ಪಾಕಿಸ್ತಾನ ಮತ್ತು ಪಿಒಕೆ ತಾಣಗಳನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಿತು. ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತು.
ಇದಕ್ಕೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನದ ಸಶಸ್ತ್ರ ಪಡೆಗಳು ಗುರುವಾರ ರಾತ್ರಿ ಇಡೀ ಪಶ್ಚಿಮ ಗಡಿಯಲ್ಲಿ ಡ್ರೋನ್‌ಗಳು ಮತ್ತು ಇತರ ಯುದ್ಧಸಾಮಗ್ರಿಗಳನ್ನು ಬಳಸಿ ಅನೇಕ ದಾಳಿಗಳನ್ನು ನಡೆಸಿದವು. ಆದರೆ, ಅವುಗಳನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ಇದನ್ನೂ ಓದಿ: ಪಾಕ್‌ನಿಂದ ಜಮ್ಮು & ಕಾಶ್ಮೀರ, ಪೂಂಚ್, ಉರಿ ಮೇಲೆ ಶೆಲ್ ದಾಳಿ
PM Narendra Modi chairs a meeting with Defence Minister Rajnath Singh, NSA Ajit Doval, CDS and chiefs of all the Armed Forces https://t.co/EbKenXBAAp pic.twitter.com/PBHpsX8Enu
— ANI (@ANI) May 9, 2025
ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ‘ಆಕಾಶ್’ ಮೇಲ್ಮೈಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ವಾಯು ರಕ್ಷಣಾ ವ್ಯವಸ್ಥೆಯು ಗುರುವಾರ ಭಾರತೀಯ ಸೇನಾ ನೆಲೆಗಳನ್ನು ಟಾರ್ಗೆಟ್ ಮಾಡಿದ್ದ ಪಾಕಿಸ್ತಾನದ ಡ್ರೋನ್ ದಾಳಿಯನ್ನು ತಡೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಭಾರತೀಯ ಸೇನೆ ಮತ್ತು ವಾಯುಪಡೆ ಎರಡೂ ಕ್ಷಿಪಣಿ ವ್ಯವಸ್ಥೆಯನ್ನು ಪಾಕಿಸ್ತಾನ ಗಡಿಯಲ್ಲಿ ನಿಯೋಜಿಸಿವೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸುವ ಪಾಕಿಸ್ತಾನದ ಪ್ರಯತ್ನಗಳನ್ನು ಹಿಮ್ಮೆಟ್ಟಿಸಿದ ಬಳಿಕ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉನ್ನತ ಮಿಲಿಟರಿ ನಾಯಕರೊಂದಿಗೆ ರಾಷ್ಟ್ರೀಯ ಭದ್ರತಾ ಸನ್ನಿವೇಶದ ಸಮಗ್ರ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಭಾರತದ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿ ಪಾಕ್ ದಾಳಿ: ಕೇಂದ್ರ ಸರ್ಕಾರ ವಾಗ್ದಾಳಿ