ಸೋಫಾ ತೆಗೆಸಿ ಎಲ್ಲರೊಂದಿಗೆ ಖುರ್ಚಿಯಲ್ಲಿ ಆಸೀನರಾದ ಮೋದಿ- ವಿಡಿಯೋ

Public TV
1 Min Read

ನವದೆಹಲಿ: ರಷ್ಯಾ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಸರಳತೆಯ ಮೂಲಕ ಮತ್ತೊಮ್ಮೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಪ್ರಧಾನಿಗಳ ಸರಳತೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಶ್ವದೆಲ್ಲಡೆ ಮೆಚ್ಚುಗೆಯನ್ನು ಪಡೆದುಕೊಂಡಿದೆ.

ಫೋಟೋ ಸೆಷನ್ ವೇಳೆ ಮೋದಿ ಅವರಿಗಾಗಿ ವಿಶೇಷ ಸೋಫಾ ಹಾಕಲಾಗಿತ್ತು. ಉಳಿದ ಎಲ್ಲ ಗಣ್ಯರಿಗೂ ಖುರ್ಚಿ ಹಾಕಲಾಗಿತ್ತು. ಫೋಟೋ ಸೆಷನ್ ಗೆ ಬಂದ ಪ್ರಧಾನಿಗಳು ಕೂಡಲೇ ಸೋಫಾ ತೆಗೆಯುವಂತೆ ಸೂಚಿಸಿದ್ದಾರೆ. ಪ್ರಧಾನಿಗಳ ಸೂಚನೆಯ ಮೇರೆ ಸೋಫಾ ತೆಗೆದು ಎಲ್ಲರಿಗೆ ಹಾಕಲಾಗಿದ್ದ ಖುರ್ಚಿಯನ್ನು ಹಾಕಿದ ಮೇಲೆಯೇ ಮೋದಿಯವರು ಫೋಟೋ ತೆಗೆಸಿಕೊಂಡರು.

ಈಸ್ಟರ್ನ್ ಎಕಾನಮಿಕ್ ಫೋರಂನಲ್ಲಿ ಪ್ರಧಾನಿಗಳು ಭಾರತದ ಪೆವಿಲಿಯನ್ ಗೆ ಭೇಟಿ ನೀಡಿದ್ದರು. ಫೋಟೋ ಸೆಷನ್ ವೇಳೆ ಅಧಿಕಾರಿಗಳು ದೇಶದ ಪ್ರಧಾನಿಗಳಿಗೆ ಗೌರವ ನೀಡುವ ಹಿನ್ನೆಲೆಯಲ್ಲಿ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಿದ್ದರು.

ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ವಿಡಿಯೋವನ್ನು ಟ್ವೀಟ್ ಮಾಡಿಕೊಂಡಿದ್ದಾರೆ. ಪಿಎಂ ಮೋದಿಯವರ ಸರಳತೆ ಕಾಣುವ ಅವಕಾಶ ಮತ್ತೊಮ್ಮೆ ಸಿಕ್ಕಿದೆ. ರಷ್ಯಾದಲ್ಲಿ ತಮಗಾಗಿ ಕಲ್ಪಿಸಿದ್ದ ವಿಶೇಷ ವ್ಯವಸ್ಥೆಯನ್ನು ತಿರಸ್ಕರಿಸಿ, ಉಳಿದವರಂತೆ ಸಾಮಾಣ್ಯ ಖುರ್ಚಿಯಲ್ಲಿ ಆಸೀನರಾದರು ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದಾಗ ಮೋದಿಯವರು ವಿಐಪಿ ಪದ್ಧತಿಗೆ ಬ್ರೇಕ್ ಹಾಕಿದ್ದರು. ವಿಐಪಿ ಪದ್ಧತಿ ಶಮನಗೊಳಿಸುವ ಹಿನ್ನೆಲೆಯಲ್ಲಿ ಸರ್ಕಾರಿ ವಾಹನಗಳ ಮೇಲೆ ಕೆಂಪು ದೀಪವನ್ನು ತೆಗೆಯುವಂತೆ ಆದೇಶಿಸಿದ್ದರು. ಸಂಸದರಾಗಿ ಆಯ್ಕೆಯಾಗುವ ಜನಪ್ರತಿನಿಧಿಗಳು ವಿಐಪಿ ಪದ್ಧತಿಯಿಂದ ದೂರ ಉಳಿದು, ಜನರಿಗೆ ಹತ್ತಿರವಾಗಿ ಎಂದು ಸಲಹೆ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *