ಮೋದಿ ಇರೋವರೆಗೂ ಕಳ್ಳರ ಅಂಗಡಿ ಬಂದ್ – ಖರ್ಗೆ ಕೋಟೆಯಲ್ಲಿ ನಮೋ ರಣಕಹಳೆ

Public TV
3 Min Read

– ಕರ್ನಾಟಕ ಸರ್ಕಾರ ರೈತರ ದುಷ್ಮನ್!
– ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾ ಆಯ್ತಾ..?
– ಕರ್ನಾಟಕ ಸರ್ಕಾರ ರೈತರ ಮಾಹಿತಿ ನೀಡುತ್ತಿಲ್ಲ

ಕಲಬುರಗಿ: ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಲಬುರಗಿ ಕೋಟೆಗೆ ಪ್ರಧಾನಿ ಮೋದಿ ಆಗಮಿಸಿದ್ದು, ಜಿಲ್ಲೆಯ ಹಲವು ಸರ್ಕಾರಿ ಯೋಜನೆಗಳಿಗೆ ಚಾಲನೆ ನೀಡಿದರು. ಇದಾದ ಬಳಿಕ ಬಿಜೆಪಿ ಸಮಾವೇಶದಲ್ಲಿ ಭಾಗಿಯಾದ ಮೋದಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಎಂದಿನಂತೆ ಕನ್ನಡದಲ್ಲಿಯೇ ಮಾತು ಆರಂಭಿಸಿದ ಪ್ರಧಾನಿಗಳು ಜಿಲ್ಲೆಯ ಅಣ್ಣ ಬಸವಣ್ಣರಿಗೆ ನಮಸ್ಕರಿಸಿದರು.

ವಿಧಾನಸಭೆ ಚುನಾವಣೆ ವೇಳೆಯೂ ನಾನು ನಿಮ್ಮ ಬಳಿ ಬಂದಿದೆ. ಇಲ್ಲಿಯ ಜನರ ಅಭಿವೃದ್ಧಿಗೆ ಎಂದು ಹಿಂದೇಟು ಹಾಕಲ್ಲ ಎಂದು ಹೇಳಿದ್ದೆ. ಅಂದು ನೀಡಿದ ಮಾತಿನಂತೆ ನಡೆದುಕೊಂಡು ಬಂದಿದ್ದೇನೆ. ಕಾಂಗ್ರೆಸ್ ಸರ್ಕಾರದ ಕುಂಠಿತಗೊಂಡ ಹಲವು ಯೋಜನೆಗಳನ್ನು ನಮ್ಮ ಸರ್ಕಾರವೇ ಪೂರ್ಣಗೊಳಿಸಿದೆ. ರೈಲ್ವೇ ಯೋಜನೆ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಬದ್ಧವಾಗಿದೆ. ಕೆಲವು ಸಮಯ ಹಿಂದೆ ಒಂದು ಸಾವಿರ ಕೋಟಿಗೂ ಅಧಿಕ ಯೋಜನೆಗಳಿಗೆ ಚಾಲನೆ ನೀಡಿ ಬಂದಿದ್ದೇನೆ ಎಂದ್ರು.

ಕಾಂಗ್ರೆಸ್ ಸಾಧನೆಗೆ ಇಲ್ಲಿಯ ಮೆಡಿಕಲ್ ಕಾಲೇಜ್ ಸಾಕ್ಷಿಯಾಗಿದೆ. 2009ರಲ್ಲಿ ಈ ಕಾಲೇಜ್ ಸ್ಥಾಪನೆ ಮಾಡಲಾಗುವುದು ಎಂದು ಹೇಳಿತ್ತು. 2011ರಲ್ಲಿ ಜನರಿಗೆ ಕಾಣಲೆಂದು ನಿಧಾನಗತಿಯಲ್ಲಿ ಕಾಮಗಾರಿಯನ್ನು ಆರಂಭಿಸಿತ್ತು. ಆದರೆ ಇಂದು ನಾವು ಈ ಕೆಲಸವನ್ನು ಮಾಡಿದ್ದೇವೆ. ಹೀಗೆ ಕೇಂದ್ರ ಸರ್ಕಾರದ ಆಯುಷ್ಮಾನ್ ಯೋಜನೆ, ಕಾರ್ಮಿಕರಿಗೆ ಪಿಂಚಣಿ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಹೇಳಿದರು.

ಬಂಜಾರ ಸಮುದಾಯದ ಅಭಿವೃದ್ಧಿಗಾಗಿ ಪ್ರತ್ಯೇಕ ವಿಭಾಗವನ್ನೇ ಸರ್ಕಾರ ಆರಂಭಿಸಿದೆ. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಮೊದಲ ಹಂತದ ಕಂತನ್ನು ಸರ್ಕಾರ ನೀಡಿದೆ. ಕರ್ನಾಟಕ ಸರ್ಕಾರಕ್ಕೆ ರೈತರ ಪರವಾಗಿಲ್ಲ. ಹೀಗಾಗಿ ಕರ್ನಾಟಕ ಸರ್ಕಾರ ನಮಗೆ ರೈತರ ಮಾಹಿತಿಯನ್ನು ನೀಡುತ್ತಿಲ್ಲ. ಕಾಂಗ್ರೆಸ್ ಹಿಬಾಗಿಲಿನಿಂದ ಬಂದು ಸರ್ಕಾರ ರಚನೆ ಮಾಡಿದ್ದು, ಮುಖ್ಯಮಂತ್ರಿಗಳು ರಿಮೋಟ್ ಅನತಿಯಂತೆ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಕರ್ನಾಟಕದ ರೈತರಿಗೆ ಅನ್ಯಾಯ ಮಾಡುತ್ತಿದ್ದು, ಖಾತೆಗೆ ನಗದು ಜಮೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಅಡ್ಡಿಯಾಗಿದೆ ಎಂದು ಕಿಡಿಕಾರಿದರು.

ಸಾಲಮನ್ನಾದ ಹೆಸರಲ್ಲಿ ಮತ ಕೇಳಿದ್ದ ಜೆಡಿಎಸ್, ಗೆದ್ದ ಬಳಿಕ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಸರ್ಕಾರ ಕರ್ನಾಟಕದ ರೈತರ ಮೇಲೆ ಕೇಸ್ ಮಾಡುತ್ತಿದೆ. ಮಾತಿನಂತೆ ಕೆಲಸ ಮಾಡುತ್ತಿರುವ ನಮಗೆ ಅಡ್ಡಿಯುಂಟು ಮಾಡುತ್ತಿದ್ದಾರೆ. ಇಂತಹ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ. ಮಾತು ತಪ್ಪಿದವರ ಲೆಕ್ಕಾ ಚುಕ್ತಾ ಸಮಯ ಇದೀಗ ಬಂದಿದೆ ಎಂದರು.

ಸಮಾವೇಶದಲ್ಲಿ ಭಗವಂತ ಖೂಬಾ ಮತ್ತು ಉಮೇಶ್ ಜಾಧವ್ ಪ್ರಧಾನಿಗಳಿಗೆ ಶಾಲು ಹೊದಿಸಿ ಪೇಟ ತೊಡಿಸಿ, ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಅವರ ಮೂರ್ತಿಯನ್ನು ನೀಡಿ ಸ್ವಾಗತಿಸಿದ್ರು. ಇದೇ ವೇಳೆ ವಾಯುಪುತ್ರನ ಗದೆಯನ್ನು ನೀಡುವ ಮೂಲಕ ಬರಮಾಡಿಕೊಳ್ಳಲಾಯ್ತು.

ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದು ಗುರುತಿಸಿಕೊಂಡಿದ್ದ ಚಿಂಚೋಳಿ ಕೈ ಶಾಸಕ ಉಮೇಶ್ ಜಾಧವ್ ಇಂದು ಅಧಿಕೃತವಾಗಿ ಕಮಲ ಹಿಡಿದರು. ಸಂಸತ್ತಿನಲ್ಲಿ ಏಟಿಗೆ ಎದಿರೇಟು ನೀಡುವ ಸೋನಿಯಾ ಗಾಂಧಿಯವರ ಬಲಗೈ ಬಂಟನಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಮೋದಿ ಶಪಥ ಮಾಡಿದ್ದಾರಂತೆ. ಹೀಗಾಗಿ ಕಾಂಗ್ರೆಸ್‍ನಲ್ಲಿ ಪಳಗಿದ್ದ ಬಾಬುರಾವ್ ಚಿಂಚನಸೂರ್, ಮಾಲೀಕಯ್ಯ ಗುತ್ತೇದಾರ್ ಮತ್ತು ಉಮೇಶ್ ಜಾಧವ್ ತ್ರಿಮೂರ್ತಿಗಳ ಮೂಲಕವೇ ಸೋಲಿಲ್ಲದ ಸರದಾರರಾಗಿರುವ ಖರ್ಗೆ ಅವರನ್ನು ಸೋಲಿಸಲು ಮೋದಿ ಪ್ಲಾನ್ ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಲಬುರಗಿ ಆಗಮಿಸಿದ ಪ್ರಧಾನಿಗಳನ್ನು ಜಿಲ್ಲಾಡಳಿತ ಹಾಗೂ ಸಚಿವರಾದ ರಾಜಶೇಖರ್ ಪಾಟೀಲ್ ಬರಮಾಡಿಕೊಂಡರು. ನೇರವಾಗಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಉದ್ಘಾಟನೆ ನೆರವೇರಿಸಿದರು. ಬಿಪಿಸಿಎಲ್ ಕಲಬುರ್ಗಿ ಡಿಪೋ, ಬೆಂಗಳೂರಿನ ಇನ್ಕಮ್ ಟ್ಯಾಕ್ಸ್ ಅಪಲೇಟ್ ಟ್ರಿಬ್ಯುನಲ್ ಬಿಲ್ಡಿಂಗ್, ಹುಬ್ಬಳ್ಳಿಯ ಕಿಮ್ಸ್ ಸೂಪರ್ ಸ್ಪೆಷಾಲಿಟಿ ಬ್ಲಾಕ್, ಬೆಂಗಳೂರು ವಿವಿಯಲ್ಲಿ ಈಶಾನ್ಯ ವಲಯದ ವಿದ್ಯಾರ್ಥಿಗಳಿಗಾಗಿ ಮಹಿಳಾ ಮಹಿಳಾ ಹಾಸ್ಟೆಲ್ ಉದ್ಘಾಟಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *