ಬುಡಕಟ್ಟು ಜನಾಂಗದ ಮಹಿಳೆಗೆ ಪಾದರಕ್ಷೆ ತೊಡಿಸಿದ ಪ್ರಧಾನಿ ಮೋದಿ

Public TV
1 Min Read

ರಾಯ್‍ಪುರ: ಛತ್ತೀಸಘಡ್ ರಾಜ್ಯದ ಬಿಜಾಪುರದಲ್ಲಿ ನಡೆದ ಕಾರ್ಯಕ್ರಮಮೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಡಕಟ್ಟು ಜನಾಂಗದ ಮಹಿಳೆಗೆ ಪಾದರಕ್ಷೆ ತೊಡಿಸುವ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇಲ್ಲಿನ ಅರಣ್ಯ ಪ್ರದೇಶದಲ್ಲಿ ಟೆಂಡು ಎಲೆಗಳ ಸಂಗ್ರಹಣೆಗಾಗಿ ಅಲೆಯುವ ಬುಡಕಟ್ಟು ಜನರಿಗಾಗಿ ರೂಪಿಸಿರುವ ‘ಚರಣ್ ಪಾದುಕಾ’ (ಪಾದರಕ್ಷೆ ವಿತರಣೆ) ಯೋಜನೆ ಅಡಿ ಪಾದರಕ್ಷೆ ವಿತರಿಸಿ ಮಾತನಾಡಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ಅವರಿಂದ ಸ್ಫೂರ್ತಿ ಪಡೆದುಕೊಳ್ಳಲು ಹಾಗೂ ಕೇಂದ್ರ ಸರ್ಕಾರ ನಿಮ್ಮದು ಎನ್ನುವ ವಿಶ್ವಾಸ ಮೂಡಿಸಲು ನಾನು ಇಲ್ಲಿಗೆ ಬಂದಿರುವೆ ಎಂದು ಹೇಳಿದರು.

ಬಿಜಾಪುರಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿ ನರೇಂದ್ರ ಮೋದಿಯಾಗಿದ್ದು, ಇದು ಅವರ ನಾಲ್ಕನೇ ಭೇಟಿಯಾಗಿದೆ. ಮುಂದಿನ ವರ್ಷದಲ್ಲಿ ಛತ್ತೀಸಘಡ್ ರಾಜ್ಯ ವಿಧಾನ ಸಭಾ ಚುನಾವಣೆ ನಡೆಯಲಿದೆ. ಛತ್ತೀಸಘಡ್ ಪ್ರವಾಸ ಕೈಗೊಂಡಿರುವ ಮೋದಿ, ಶನಿವಾರ ಬಿಜಾಪುರದಲ್ಲಿ ಆಯುಷ್ಮಾನ್ ಯೋಜನೆ ಅಡಿ ಪ್ರಧಾನ ಆರೋಗ್ಯ ಕೇಂದ್ರವನ್ನು ಹಾಗೂ ಬಿಜಾಪುರ, ನಾರಾಯಣಪುರ, ಬಸ್ತಾರ್, ಕಂಕರ್, ಕೊಂಡಗಾಂವ್, ಸುಕ್ಮಾ, ದಾಂತೇವಾಡ ಮೂಲಕ ಹಾದು ಹೋಗುವ ಬಾಸ್ಟರ್ ಇಂಟರ್‍ನೆಟ್ ಯೋಜನೆಯ ಮೊದಲ ಹಂತದ 40,000 ಕಿ.ಮೀ. ಉದ್ದದ ಫೈಬರ್ ಕೇಬಲ್ ಹಾಕುವ ಕಾಮಗಾರಿಯನ್ನು ಉದ್ಘಾಟಿಸಿದರು.

ಗುಡುಮ್ ಮತ್ತು ಭಾನುಪ್ರತಾಪುರ ಮಧ್ಯದಲ್ಲಿ ಸಂಚರಿಸಲಿರುವ ಪ್ಯಾಸೆಂಜರ್ ರೈಲು ಹಾಗೂ ಹೊಸ ರೈಲು ಮಾರ್ಗಕ್ಕೆ ಚಾಲನೆ, ಬಿಜಾಪುರ ಸಮೀಪದ ಏಳು ಗ್ರಾಮದಲ್ಲಿ ಬ್ಯಾಂಕ್ ಶಾಖೆಗಳ ಉದ್ಘಾಟನೆ, 1,200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ರಸ್ತೆ ಮತ್ತು ಸೇತುವೆ ಕಾಮಗಾರಿಗೆ ಅಡಿಗಲ್ಲನ್ನು ಮೋದಿ ಹಾಕಿದರು.

ಭಾರತ್ ಬಿಪಿಒ ಪ್ರಚಾರ್ ಯೋಜನೆ ಅಡಿ ಅಂತರ್ಜಾಲ ಸೌಲಭ್ಯ ಪಡೆದ ಅಭಿವೃದ್ಧಿ ಹೊಂದಿದ ಗ್ರಾಮೀಣ ಬಿಪಿಒಗಳಿಗೆ ಅವರು ಭೇಟಿ ನೀಡಿದರು.

 

Share This Article
Leave a Comment

Leave a Reply

Your email address will not be published. Required fields are marked *