ಥಾಮಸ್ ಕಪ್ ಗೆದ್ದ ಭಾರತ ತಂಡದೊಂದಿಗೆ ಇಡೀ ದೇಶವೇ ಸಂಭ್ರಮಿಸಿದೆ: ಮೋದಿ

Public TV
3 Min Read

ನವದೆಹಲಿ: ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ 43 ವರ್ಷಗಳ ಬಳಿಕ ಚೊಚ್ಚಲ ಬಾರಿಗೆ ಚಾಂಪಿಯನ್ ಆದ ಭಾರತದ ಪುರುಷರ ತಂಡದೊಂದಿಗೆ ಇಡೀ ದೇಶವೇ ಸಂಭ್ರಮಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್ ಮೂಲಕ ಸಂಭ್ರಮ ಹಂಚಿಕೊಂಡಿದ್ದಾರೆ.‌

ಟ್ವೀಟ್‍ನಲ್ಲಿ ಏನಿದೆ?
ಭಾರತ ಬ್ಯಾಡ್ಮಿಂಟನ್ ತಂಡ ಇತಿಹಾಸ ಬರೆದಿದೆ. ಥಾಮಸ್ ಕಪ್ ಗೆದ್ದ ಭಾರತ ತಂಡದೊಂದಿಗೆ ಇಡೀ ದೇಶವೇ ಸಂಭ್ರಮಿಸಿದೆ. ನಮ್ಮ ಬಲಿಷ್ಠ ತಂಡಕ್ಕೆ ಅಭಿನಂದನೆಗಳು ಮತ್ತು ಅವರ ಮುಂದಿನ ಸಾಧನೆಗಳಿಗೆ ಶುಭಾಶಯಗಳು. ಈ ಗೆಲುವು ಮುಂಬರುವ ಹಲವು ಕ್ರೀಡಾ ಪಟುಗಳಿಗೆ ಪ್ರೇರಣೆ ನೀಡಲಿದೆ. ಇದನ್ನೂ ಓದಿ: ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌ – ಭಾರತ ಚಾಂಪಿಯನ್‌, ಇತಿಹಾಸ ಸೃಷ್ಟಿ

1 ಕೋಟಿ ರೂ. ಬಹುಮಾನ:
43 ವರ್ಷಗಳ ಬಳಿಕ ಬ್ಯಾಡ್ಮಿಂಟನ್‍ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭಾರತದ ಪುರುಷರ ತಂಡಕ್ಕೆ 1 ಕೋಟಿ ರೂ. ನೀಡಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಘೋಷಿಸಿದ್ದು, ಇದೊಂದು ಐತಿಹಾಸಿಕ ಸಾಧನೆ. ದೇಶಕ್ಕೆ ಹೆಮ್ಮೆ ತಂದಿದೆ ಎಂದು ಸಂಭ್ರಮಪಟ್ಟರು.

43 ವರ್ಷಗಳಿಂದಲೂ ಟೂರ್ನಿಯಲ್ಲಿ ಆಡುತ್ತಿರುವ ಭಾರತ ಈ ಬಾರಿ ಚೊಚ್ಚಲ ಟ್ರೋಫಿಯನ್ನು ಗೆದ್ದುಕೊಂಡಿದೆ. ಅದು 14 ಬಾರಿ ಚಾಂಪಿಯನ್ ಇಂಡೋನೇಷ್ಯಾದ ವಿರುದ್ಧ ಗೆದ್ದು ಈ ಸಾಧನೆ ಮಾಡಿದೆ ಎನ್ನುವುದು ವಿಶೇಷ. ಈ ಮೂಲಕ ಥಾಮಸ್ ಕಪ್ ಗೆದ್ದ 6ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಈ ಹಿಂದೆ 1979ರಲ್ಲಿ ಕಂಚಿನ ಪದಕ ಗೆದ್ದಿದ್ದೇ ಈವರೆಗೆ ಟೂರ್ನಿಯಲ್ಲಿ ಭಾರತದ ಶ್ರೇಷ್ಠ ಸಾಧನೆ ಎನಿಸಿತ್ತು. ಇದನ್ನೂ ಓದಿ: ಉದ್ದನೆ ಕೂದಲಿನ, ತುಟಿಗೆ ಬಣ್ಣ ಹಚ್ಚಿ ದೈತ ದಾಂಡಿಗನಾಗಿ ಗಮನಸೆಳೆದ ಸೈಮಂಡ್ಸ್ ಇನ್ನು ನೆನಪು ಮಾತ್ರ

ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಲಕ್ಷ್ಯ ಸೆನ್ ಜಿಂಟಿಂಗ್ ವಿರುದ್ಧ ಜಯಗಳಿಸಿದರು. ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಜಿಂಟಿಗ್ ಮೊದಲ ಪಂದ್ಯವನ್ನು 8-21 ರಿಂದ ಗೆದ್ದುಕೊಂಡರೂ ಲಕ್ಷ್ಯ ಸೆನ್ ನಂತರ ಎರಡು ಪಂದ್ಯವನ್ನು 21-17, 21-16 ಗೇಮ್‍ಗಳಿಂದ ಗೆದ್ದುಕೊಳ್ಳುವ ಮೂಲಕ ಭಾರತಕ್ಕೆ ಮೊದಲ ಮುನ್ನಡೆಯನ್ನು ತಂದುಕೊಟ್ಟರು.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‍ಸಾಯಿರಾಜ್ ರಾಂಕಿರೆಡ್ಡಿ, ಚಿರಾಗ್ ಶೆಟ್ಟಿ ಅವರು ಮೊಹಮ್ಮದ್ ಅಹ್ಸಾನ್ ಮತ್ತು ಕೆವಿನ್ ಸುಕಮುಲ್ಜೊ ಜೊತೆ ಮೊದಲ ಪಂದ್ಯವನ್ನು 18-21 ರಿಂದ ಸೋತಿದ್ದರೂ ನಂತರ 23-21, 21-19 ಗೇಮ್‍ಗಳಿಂದ ಗೆಲ್ಲುವ ಮೂಲಕ ಗೆಲುವಿನ ಸಮೀಪ ತಂದರು. ಇದನ್ನೂ ಓದಿ: ಗುಜರಾತ್ ಗುನ್ನಕ್ಕೆ ಚೆನ್ನೈ ಚಿಂದಿ –  ಟೈಟಾನ್ಸ್‌ಗೆ 7 ವಿಕೆಟ್‌ಗಳ ಜಯ

ಮೂರನೇ ಪಂದ್ಯದಲ್ಲಿ ಶ್ರೀಕಾಂತ್ ಕಿಡಂಬಿ ಅವರು ಜೊನಾಟನ್ ಕ್ರಿಸ್ಟಿ ಅವರ ವಿರುದ್ಧ 21-15, 23-21 ನೇರ ಸೆಟ್‍ಗಳಿಂದ ಗೆಲುವು ಸಾಧಿಸಿ ಭಾರತಕ್ಕೆ ಟ್ರೋಫಿಯನ್ನು ಗೆದ್ದುಕೊಟ್ಟರು.

ಈ ಸಾಧನೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಷ್ಟ್ರೀಯ ಕೋಚ್ ಹಾಗೂ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ಉಪಾಧ್ಯಕ್ಷ ಪುಲ್ಲೇಲ ಗೋಪಿಚಂದ್, ಇದು ನಿಜವಾಗಿಯೂ ದೊಡ್ಡ ಸಾಧನೆ. 1983ರಲ್ಲಿ ಭಾರತ ಕ್ರಿಕೆಟ್ ವಿಶ್ವಕಪ್ ಗೆದ್ದಂತೆ ಆಗಿದೆ. ಇಂಡೋನೇಷ್ಯಾ ಬ್ಯಾಡ್ಮಿಂಟನ್ ಮತ್ತು ಥಾಮಸ್ ಕಪ್‍ನಲ್ಲಿ ದೊಡ್ಡ ಖ್ಯಾತಿ ಮತ್ತು ಪರಂಪರೆಯನ್ನು ಹೊಂದಿದೆ. ಈ ತಂಡವನ್ನು ಸೋಲಿಸುವ ಮೂಲಕ ವಿಶ್ವ ಮಟ್ಟದಲ್ಲಿ ನಾವು ಬಲಿಷ್ಠವಾಗುತ್ತಿದ್ದೇವೆ ಎಂಬುದಕ್ಕೆ ಸಾಕ್ಷಿ ಎಂದರು.

ನಾವು ಸೈನಾ ಮತ್ತು ಸಿಂಧು ಅವರನ್ನು ಮಹಿಳಾ ಶಕ್ತಿ ಎಂದು ಕರೆಯಲ್ಪಟ್ಟಿದ್ದೇವೆ, ಆದರೆ ಈಗ ನಮ್ಮ ಹುಡುಗರು ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಈ ಸಾಧನೆ ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳು ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ.  ಭಾರತದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಸವಾಲು ಇದೆ. ಕ್ರೀಡಾಪಟುಗಳಿಗೆ ಬ್ಯಾಡ್ಮಿಂಟನ್ ಸಂಸ್ಥೆ ಹಾಗೂ ಪ್ರಧಾನಿ ಮೋದಿ ಅವರ ಬೆಂಬಲಕ್ಕಾಗಿ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ನುಡಿದರು.

Share This Article
Leave a Comment

Leave a Reply

Your email address will not be published. Required fields are marked *