ಉಡುಪಿ: ದೇಶದ ರಕ್ಷಣೆ ಮತ್ತು ಗೌರವ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಶಕ್ತಿ ನೀಡುವಂತೆ ಶ್ರೀಕೃಷ್ಣ ಪರಮಾತ್ಮ ಮತ್ತು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿ ನಗರಸಭಾ ವ್ಯಾಪ್ತಿಯ ಸುಬ್ರಹ್ಮಣ್ಯ ನಗರ ವಾರ್ಡ್‍ನ ಕೊರಗ ಜನಾಂಗದ ಮನೆಗಳಿಗೆ ಆಹಾರ ಕಿಟ್ ವಿತರಣೆ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ದೇಶದ ಬಡಜನರ ಸೇವೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಿಯವಾದದ್ದು. ಸೇವಾ ಚಟುವಟಿಕೆ ನಡೆಸಿದರೆ ಅವರಿಗೆ ಮುದಕೊಡುತ್ತದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ವಿವಿಧ ರೀತಿಯ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ ಎಂದರು. ಇದನ್ನೂ ಓದಿ: 1 ಸಾಲಿನಲ್ಲಿ ಪ್ರಧಾನಿಗೆ ವಿಶ್ ಮಾಡಿದ ರಾಹುಲ್ ಗಾಂಧಿ
ಪೆಟ್ರೋಲ್, ಡೀಸೆಲ್ ಜಿಎಸ್‍ಟಿ ವ್ಯಾಪ್ತಿಗೆ ತರುವ ವಿಚಾರವಾಗಿ ಪ್ರತಿಯಿಸಿದ ಅವರು, ಇಂದು ಲಕ್ನೋದಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಪೆಟ್ರೋಲ್, ಡೀಸೆಲ್ ಜಿಎಸ್‍ಟಿ ವ್ಯಾಪ್ತಿಗೆ ಬಂದರೆ ಜನರಿಗೆ ಅನುಕೂಲ ಆಗಬಹುದು. ಪ್ರಧಾನಿ ನರೇಂದ್ರ ಮೋದಿ ಈ ಪ್ರಯತ್ನದಲ್ಲಿದ್ದಾರೆ. ಇವತ್ತು ಕೈಗೊಳ್ಳಬಹುದಾದ ನಿರ್ಧಾರವನ್ನು ದೇಶ ಸ್ವಾಗತಿಸುತ್ತದೆ ಎಂಬ ನಂಬಿಕೆ ನನಗಿದೆ ಎಂದರು.
ಮತಾಂತರ ತಡೆ- ಸರ್ಕಾರಕ್ಕೆ ಒತ್ತಾಯ
ಕೇವಲ ಕರಾವಳಿ ಮಾತ್ರವಲ್ಲ, ದೇಶದ ಇತರ ಭಾಗಗಳಲ್ಲೂ ಮತಾಂತರ ನಡೆಯುತ್ತಿದೆ. ಹಿಂದೂಗಳ ದುರ್ಬಲತೆಯನ್ನು ದುರುಪಯೋಗಪಡಿಸಿಕೊಂಡು ಕ್ರೈಸ್ತ ಮಿಷನರಿಗಳು ಮತಾಂತರ ಮಾಡುತ್ತಿವೆ ಎಂದು ಕಿಡಿಕಾರಿದರು.
ಮತಾಂತರ ಕುರಿತ ಕಾನೂನು ವ್ಯವಸ್ಥೆ ಗಟ್ಟಿಯಾಗಬೇಕು. ಅದನ್ನು ತಡೆಯಲು ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು. ಈ ಕುರಿತು ಸರ್ಕಾರವನ್ನು ನಾನು ಆಗ್ರಹಿಸುತ್ತೇನೆ. ಮತಾಂತರ ತಡೆಯಲು ಕಾನೂನು ಬರಬೇಕಿದೆ. ಹಿಂದೂಗಳ ದುರ್ಬಲತೆಯನ್ನು ದುರುಪಯೋಗ ಮಾಡುವವರ ವಿರುದ್ಧ ಕ್ರಮ ಆಗಬೇಕು. ವಾರದ ಹಿಂದೆ ಹಿಂದೂ ಜಾಗರಣ ವೇದಿಕೆ ಕಾರ್ಕಳದಲ್ಲಿ ಮತಾಂತರ ಕೇಂದ್ರದ ಮೇಲೆ ದಾಳಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದರು.

 
			 
		 
		 
                                
                              
		