ಅಂದು ಇಂಡಿಯಾ ಔಟ್‌ – ಇಂದು ಸೇನಾ ಕಚೇರಿಯಲ್ಲೇ ದೊಡ್ಡ ಕಟೌಟ್‌ | ಇದು ಮೋದಿ ಮ್ಯಾಜಿಕ್‌

Public TV
3 Min Read

– ವಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತಿಸಿದ ಮಾಲ್ಡೀವ್ಸ್‌ ಪ್ರಧಾನಿ
– ಭಾರತದ ವಿರುದ್ಧವೇ ಪ್ರಚಾರ ನಡೆಸಿ ಚುನಾವಣೆ ಗೆದ್ದಿದ್ದ ಮುಯಿಜು

ಇಂಡಿಯಾ ಔಟ್‌ (India Out) ಅಭಿಯಾನ ಆರಂಭಿಸಿ ನರೇಂದ್ರ ಮೋದಿ (Narendra Modi) ವಿರುದ್ಧ ಪ್ರಚಾರ ಮಾಡಿದ್ದ ಮಾಲ್ಡೀವ್ಸ್‌ (Maldives) ಈಗ ರತ್ನಗಂಬಳಿ ಹಾಕಿ ಸ್ವಾಗತಿಸಿದೆ.

ಪ್ರಧಾನಿ ಮೋದಿ ಅವರನ್ನು ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಜು (Mohamed Muizzu) ಅವರು ಮಾಲೆ ವಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತಿಸಿದ್ದು ವಿಶೇಷವಾಗಿತ್ತು. ವಿಮಾನ ನಿಲ್ದಾಣದಲ್ಲಿ ಮಕ್ಕಳು ಸಾಂಪ್ರದಾಯಿಕ ನೃತ್ಯದೊಂದಿಗೆ ಮೋದಿ ಅವರನ್ನು ಸ್ವಾಗತಿಸಿದರು.

ಕಳೆದ ಮಾಲ್ಡೀವ್ಸ್‌ ಚುನಾವಣೆಯಲ್ಲಿ ಮುಯಿಜು ಮೋದಿ ಫೋಟೋವನ್ನು ಹಿಡಿದು ಇಂಡಿಯಾ ಔಟ್‌ ಅಭಿಯಾನವನ್ನು ನಡೆಸಿದ್ದರು. ಆದರೆ ಈಗ ಸೇನಾ ಪ್ರಧಾನ ಕಚೇರಿ ಹೊರಗಡೆ ದೊಡ್ಡ ಕಟೌಟ್‌ ಹಾಕಿ ಮೋದಿ ಅವರಿಗೆ ಮಾಲ್ಡೀವ್ಸ್‌ ಗೌರವ ನೀಡಿದೆ. ಇದನ್ನೂ ಓದಿ: ಪ್ರಧಾನಿ ಮೋದಿ, ಭಾರತದ ಜನತೆ ಬಳಿ ಕ್ಷಮೆಯಾಚಿಸಿ: ಮಾಲ್ಡೀವ್ಸ್‌ ಅಧ್ಯಕ್ಷರಿಗೆ ವಿಪಕ್ಷ ನಾಯಕರ ಒತ್ತಾಯ

ಜುಲೈ 26 ರಂದು ದ್ವೀಪರಾಷ್ಟ್ರದ 60ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮೋದಿ ಭಾಗವಹಿಸಲಿದ್ದಾರೆ. ಹೀಗಾಗಿ ಅಧ್ಯಕ್ಷ ಮುಯಿಜು ಅವರ ವಿಶೇಷ ಆಹ್ವಾನದ ಮೇರೆಗೆ ಮೋದಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಮೋದಿ ಮಾಲ್ದೀವ್ಸ್‌ನಲ್ಲಿ ಭಾರತದ ಸಹಾಯದೊಂದಿಗೆ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಭಾರತೀಯರ ಅಭಿಯಾನಕ್ಕೆ ಬೆಚ್ಚಿಬಿದ್ದ ಮಾಲ್ಡೀವ್ಸ್!
ಮೊದಲಿನಿಂದಲೂ ಭಾರತ ಮತ್ತು ಮಾಲ್ಡೀವ್ಸ್‌ ಸಂಬಂಧ ಉತ್ತಮವಾಗಿತ್ತು.  ಮುಸ್ಲಿಮ್‌ ಬಹುಸಂಖ್ಯಾತರಿರುವ ಮಾಲ್ಡೀವ್ಸ್‌ನಲ್ಲಿ ಯಾರೇ ಪ್ರಧಾನಿಯಾದರೂ ಮೊದಲು ಭಾರತಕ್ಕೆ ಬರತ್ತಿದ್ದರು. ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಯಾಕೆ ನಡೆಯಿತು? ಹಿನ್ನೆಲೆ ಏನು ಎಂದು ತಿಳಿದುಕೊಳ್ಳಬೇಕಾದರೆ 15 ವರ್ಷದ ಹಿಂದೆ ಹೋಗಬೇಕು.

2010 ಮತ್ತು 2015ರಲ್ಲಿ ಭಾರತ ಧ್ರುವ್ ಅಡ್ವಾನ್ಸ್‌ಡ್ ಲೈಟ್ ಹೆಲಿಕಾಪ್ಟರ್‌ಗಳನ್ನು ಮಾಲ್ಡೀವ್ಸ್‌ಗೆ ನೀಡಿತ್ತು. ದ್ವೀಪರಾಷ್ಟ್ರವಾದ ಕಾರಣ ಹುಡುಕಾಟ, ಹವಾಮಾನ ಕಣ್ಗಾವಲು ಮತ್ತು ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ದ್ವೀಪರಾಷ್ಟ್ರದ ಜನರನ್ನು ಏರ್‌ಲಿಫ್ಟ್‌ ಮಾಡಲು ಭಾರತ ಹೆಲಿಕಾಪ್ಟರ್‌ ನೀಡಿತ್ತು.

ಮಾನವೀಯ ದೃಷ್ಟಿಯಿಂದ ಭಾರತ ಕೊಡುಗೆಯಾಗಿ ನೀಡಿದ್ದರೂ ಮಾಲ್ಡೀವ್ಸ್‌ನಲ್ಲಿ ಇದೊಂದು ವಿವಾದವಾಗಿ ಹೊರಹೊಮ್ಮಿತ್ತು. ಭಾರತ ತನ್ನ ಮಿಲಿಟರಿ ನೆಲೆಯಾಗಿ ಮಾಲ್ಡೀವ್ಸ್‌ನ್ನು ಬಳಸಲು ಮುಂದಾಗಿದೆ ಎಂದು ಅಪಪ್ರಚಾರ ಮಾಡಲಾಯಿತು. ಈ ಸಂದರ್ಭದಲ್ಲಿ ಅಲ್ಲಿದ್ದ ಮಾಲ್ಡೀವ್ಸ್‌ ಸರ್ಕಾರ ಈ ವಿಚಾರವನ್ನು ಸರಿಯಾಗಿ ನಿಭಾಯಿಸುವಲ್ಲಿ ವಿಫಲವಾಯಿತು.

2020ರಲ್ಲಿ ಇಂಡಿಯಾ ಔಟ್‌ ವಿಚಾರ ಜೋರಾಗಿ ಚರ್ಚೆ ಆಗತೊಡಗಿತು. ಸಾಮಾಜಿಕ ಜಾಲತಾಣದಲ್ಲೂ ಈ ವಿಚಾರದ ಬಗ್ಗೆ ಅಪಪ್ರಚಾರ ಮಾಡಲಾಯಿತು. ಇಂಡಿಯಾ ಔಟ್‌ ಪ್ರಚಾರಕ್ಕೆ ಚೀನಾ ಹಿಂದುಗಡೆಯಿಂದ ಬೆಂಬಲ ನೀಡಿತು. ಅಂತಿಮವಾಗಿ 2023 ರ ಚುನಾವಣೆಯಲ್ಲಿ ಭಾರತದ ವಿರೋಧಿಯಾಗಿ ಮೊಹಮ್ಮದ್‌ ಮುಯಿಜು ಅಧ್ಯಕ್ಷರಾಗಿ ಆಯ್ಕೆಯಾದರು. ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮುಯಿಜು ಚೀನಾ, ಟರ್ಕಿಗೆ ಭೇಟಿ ನೀಡಯವ ಮೂಲಕ ಭಾರತದ ವಿರೋಧಿ ಧೋರಣೆ ತೋರಲು ಆರಂಭಿಸಿದರು. ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಯಾವೊಬ್ಬ ಭಾರತೀಯ ಸೈನಿಕ ಮಾಲ್ಡೀವ್ಸ್‌ನಲ್ಲಿ ಇರಬಾರದು, ಭಾರತದ ಸೈನಿಕರು ಮಾಲ್ಡೀವ್ಸ್‌ ತೊರೆಯಬೇಕು ಎಂದು ತಾಕೀತು ಮಾಡಿದರು.

ಕಿತ್ತಾಟ ನಡೆಯುತ್ತಿರುವ ಸಮಯದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಜನವರಿಯಲ್ಲಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ಮಾಲ್ದೀವ್ಸ್‌ಗೆ ಸರಿಸಾಟಿಯಾಗಿ ಲಕ್ಷದ್ವೀಪ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಪ್ರಧಾನಿ ಮೋದಿ ಅವರು ಅಲ್ಲಿಗೆ ಭೇಟಿ ನೀಡಿದರು ಎಂಬ ಚರ್ಚೆ ಆರಂಭವಾಯಿತು. ಪ್ರಧಾನಿ ಅವರ ಚಿತ್ರ ಹಾಗೂ ವಿಡಿಯೊಗಳು ಇದಕ್ಕೆ ಪುಷ್ಟಿ ನೀಡಿದ್ದವು. ಈ ಚಿತ್ರ ಹಾಗೂ ವಿಡಿಯೋಗಳಿಗೆ ಮಾಲ್ದೀವ್ಸ್‌ನ ಇಬ್ಬರು ಸಚಿವರು ಅವಹೇಳನಕಾರಿಯಾಗಿ ಕಮೆಂಟ್‌ ಮಾಡಿದರು. ಇದು ಭಾರತದಲ್ಲಿ ದೊಡ್ಡ ವಿವಾದಕ್ಕೆ ಕಾರಣ ಆಗಿ ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಆರಂಭವಾಯಿತು. ಇದನ್ನೂ ಓದಿ: ಮೋದಿಯನ್ನು ಟೀಕಿಸಿದ ಮಾಲ್ಡೀವ್ಸ್‌ಗೆ ಶಾಕ್ ಭಾರತೀಯ ಪ್ರವಾಸಿಗರ ಸಂಖ್ಯೆ 33%ರಷ್ಟು ಕುಸಿತ

ಅಭಿಯಾನ ಜೋರಾಗುತ್ತಿದ್ದಂತೆ ಮಾಲ್ಡೀವ್ಸ್‌ಗೆ ಭೇಟಿ ನೀಡುತ್ತಿರುವ ಭಾರತೀಯರ ಸಂಖ್ಯೆ ಭಾರೀ ಇಳಿಕೆಯಾಗಿದ್ದು ಲಕ್ಷದ್ವೀಪಕ್ಕೆ ಹೋಗುವ ಪ್ರವಾಸಿಗರ ಸಂಖ್ಯೆ ಏರಿಕೆಯಾಗತೊಡಗಿತು. ಮಾಲ್ಡೀವ್ಸ್‌ ಆದಾಯ ಯಾವುದು ಎಂದರೆ ಪ್ರವಾಸೋದ್ಯಮ. ಅದರಲ್ಲೂ ಭಾರತದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಮಾಲ್ಡೀವ್ಸ್‌ಗೆ ತೆರಳುತ್ತಿದ್ದರು. ಯಾವಾಗ ಪ್ರವಾಸೋದ್ಯಮಕ್ಕೆ ಪೆಟ್ಟು ಬಿತ್ತೋ ಆರ್ಥಿಕತೆ ನೆಲಕಚ್ಚಲು ಆರಂಭವಾಯಿತು. ಮಾಲ್ಡೀವ್ಸ್‌ ಸರ್ಕಾರವೇ ಭಾರತದಲ್ಲಿ ಪ್ರವಾಸೋದ್ಯಮ ಪ್ರಚಾರ ಮಾಡಿದರೂ  ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ.  ಭಾರತದ ಜೊತೆ ಸಂಬಂಧ ಹಾಳಾದರೆ ಭವಿಷ್ಯದಲ್ಲಿ ಸಮಸ್ಯೆಯಾಗಲಿದೆ ಎನ್ನುವುದನ್ನು ಅರಿತ ಮುಯಿಜು ಈಗ ಮೋದಿ ಅವರನ್ನು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಹ್ವಾನಿಸಿ ಸಂಬಂಧ ಸುಧಾರಿಸಲು ಮುಂದಾಗುತ್ತಿದ್ದಾರೆ.

Share This Article