ಟೀ ಕುಡಿದಿದ್ದ ಉಜ್ವಲ ಫಲಾನುಭವಿ ಮಹಿಳೆಯ ಮನೆಗೆ‌ ಗಿಫ್ಟ್‌ ಜೊತೆ ಮೋದಿ ಪತ್ರ

Public TV
2 Min Read

ನವದೆಹಲಿ: ಅಯೋಧ್ಯೆ (Ayodhya) ಭೇಟಿ ವೇಳೆ ಉಜ್ವಲ ಫಲಾನುಭವಿ ಮೀರಾ ಮಾಂಝಿ (Ujjwala Beneficiary Meera Manjhi) ಮನೆಗೆ ಭೇಟಿ ನೀಡಿ ಟೀ ಕುಡಿದಿದ್ದ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಇಂದು ವಿಶೇಷ ಗಿಫ್ಟ್‌ನೊಂದಿಗೆ ಶುಭಕೋರಿದ್ದಾರೆ.

2024 ರ ಹೊಸ ವರ್ಷಕ್ಕೆ ಮೀರಾ ಮಾಂಝಿ ಹಾಗೂ ಅವರ ಕುಟುಂಬ ಸದಸ್ಯರಿಗೆ ಪತ್ರದ ಮೂಲಕ ಪ್ರಧಾನಿ ಶುಭಾಶಯಗಳನ್ನು ತಿಳಿಸಿದ್ದಾರೆ. ಜೊತೆಗೆ ಇಡೀ ಕುಟುಂಬಕ್ಕೆ ಉಡುಗೊರೆಗಳನ್ನು ಕಳುಹಿಸಿದ್ದಾರೆ.

ಪತ್ರದಲ್ಲೇನಿದೆ..?: ಮೀರಾ ದೇವಿ ಜೀ, ನಿಮಗೆ ಮತ್ತು ನಿಮ್ಮ ಕುಟುಂಬ ಸದಸ್ಯರಿಗೆ 2024 ರ ಹೊಸ ವರ್ಷದ ಶುಭಾಶಯಗಳು. ಭಗವಾನ್ ಶ್ರೀರಾಮನ ಪವಿತ್ರ ನಗರವಾದ ಅಯೋಧ್ಯೆಯಲ್ಲಿ ನಿಮ್ಮನ್ನು ಮತ್ತು ನಿಮ್ಮ ಕುಟುಂಬದ ಸದಸ್ಯರನ್ನು ಭೇಟಿಯಾಗಿದ್ದು ಹಾಗೂ ನೀವು ತಯಾರಿಸಿದ ಚಹಾವನ್ನು ಸೇವಿಸಿರುವುದು ಸಂತಸ ತಂದಿದೆ. ಅಯೋಧ್ಯೆಯಿಂದ ಬಂದ ನಂತರ ಹಲವು ಟಿವಿ ಚಾನೆಲ್‌ಗಳಲ್ಲಿ ನಿಮ್ಮ ಸಂದರ್ಶನ ನೋಡಿದೆ. ನಿಮ್ಮ ಮತ್ತು ಕುಟುಂಬ ಸದಸ್ಯರ ವಿಶ್ವಾಸ ಮತ್ತು ನಿಮ್ಮ ಅನುಭವಗಳನ್ನು ನೀವು ಹಂಚಿಕೊಂಡ ಸರಳ ನಡೆ ತುಂಬಾ ಇಷ್ಟವಾಯಿತು  ಎಂದು ಮೋದಿ ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮಾಜಿ ಮಾಡೆಲ್‌ ಕೊಲೆಗೈದು ಶವ ಎಳೆದುಕೊಂಡು ಹೋದ್ರಾ?- ಹೋಟೆಲ್ ಮಾಲೀಕ ಸೇರಿ ಮೂವರ ಬಂಧನ

ನಿಮ್ಮಂತಹ ಕೋಟ್ಯಂತರ ದೇಶವಾಸಿಗಳ ಚೈತನ್ಯ ಮತ್ತು ಉತ್ಸಾಹವು ಇಂದು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ನಮ್ಮ ಗುರಿಯನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ. ನಿಮ್ಮ ಮಕ್ಕಳಿಗೆ ಉತ್ತಮ ಆರೋಗ್ಯ ಮತ್ತು ಕುಟುಂಬದ ಉಜ್ವಲ ಭವಿಷ್ಯಕ್ಕಾಗಿ ಹಾರೈಸುತ್ತೇನೆ. ಇಂತಿ ನಿಮ್ಮ ನರೇಂದ್ರ ಮೋದಿ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಡಿಸೆಂಬರ್ 30 ರಂದು ಪ್ರಧಾನಿ ಮೋದಿಯವರು ರೈಲ್ವೆ ನಿಲ್ದಾಣ, ಹೊಸ ವಿಮಾನ ನಿಲ್ದಾಣ ಉದ್ಘಾಟನೆಗೆ ಅಯೋಧ್ಯೆಗೆ ತೆರಳಿದ್ದರು. ಈ ವೇಳೆ ಮೋದಿಯವರು ಉಜ್ವಲ ಫಲಾನುಭವಿ ಮೀರಾ ಮಾಂಝಿ ಹಾಗೂ ಸೂರಜ್ ಮಾಂಝಿ ದಂಪತಿ ಮನೆಗೆ ಹೋಗಿ ಚಹಾ ಸೇವಿಸಿದ್ದರು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟೌವ್ ಪಡೆದಿದ್ದರು. ಅವರು ಈ ಯೋಜನೆಯ ಫಲಾನುಭವಿಗಳಲ್ಲಿ 10ನೇ ಕೋಟಿಯವರಾಗಿದ್ದರು. ಮೋದಿ ಭೇಟಿ ನೀಡಿದ ಬಳಿಕ ಮಾಂಝಿ ಭಾರೀ ಸುದ್ದಿಯಾಗಿದ್ದರು.

Share This Article