ಪ್ರತಿಯೊಬ್ಬ ಭಾರತೀಯರು ಇಂದು ಹೆಮ್ಮೆ ಪಡುವ ದಿನ – ಮೋದಿ

Public TV
2 Min Read

ನವೆದೆಹಲಿ: ಇಂದು ಭಾರತದ ಬಹು ನಿರೀಕ್ಷಿತ ಚಂದ್ರಯಾನ-2 ಯಶಸ್ವಿ ಉಡಾವಣೆಯಾಗಿದ್ದು, ಈ ವಿಚಾರಕ್ಕೆ ಸಂತಸ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ಇಂದು ಪ್ರತಿಯೊಬ್ಬ ಭಾರತೀಯರು ಹೆಮ್ಮೆ ಪಡುವ ದಿನ ಎಂದು ಟ್ವೀಟ್ ಮಾಡಿದ್ದಾರೆ.

ಇಂದು ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್‍ಎಲ್‍ವಿ ಮಾರ್ಕ್-3 ರಾಕೆಟ್ ಮಧ್ಯಾಹ್ನ 2.41ಕ್ಕೆ ನಭಕ್ಕೆ ಚಿಮ್ಮಿದೆ. ಈ ಮೂಲಕ ಈ ಸಾಧನೆ ಮಾಡುತ್ತಿರುವ ಜಗತ್ತಿನ 4ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

ಇಸ್ರೋ ವಿಜ್ಞಾನಿಗಳ ಈ ಸಾಧನೆಯನ್ನು ಮೆಚ್ಚಿ ಮೋದಿ ಅವರು ಟ್ವೀಟ್ ಮಾಡಿದ್ದು, ಇದು ನಮ್ಮ ದೇಶದ ವಿಶೇಷ ಕ್ಷಣ. ಇದು ಇತಿಹಾಸ ವಾರ್ಷಿಕೋತ್ಸವಗಳಲ್ಲಿ ಕೆತ್ತಲ್ಪಡುತ್ತದೆ! ಚಂದ್ರಯಾನ-2 ರ ಉಡಾವಣೆಯು ನಮ್ಮ ವಿಜ್ಞಾನಿಗಳ ಪರಾಕ್ರಮ ಮತ್ತು ವಿಜ್ಞಾನದ ಹೊಸ ಆವಿಷ್ಕಾರವನ್ನು ವಿವರಿಸುತ್ತದೆ ಮತ್ತು 130 ಕೋಟಿ ಭಾರತೀಯರ ವಿಜ್ಞಾನದ ಹೊಸ ಗಡಿನಾಡುಗಳನ್ನು ಅಳೆಯಲು ಸಹಾಯವಾಗುತ್ತದೆ. ಪ್ರತಿಯೊಬ್ಬ ಭಾರತೀಯನೂ ಇಂದು ಅಪಾರ ಹೆಮ್ಮೆ ಪಡುತ್ತಾನೆ!”ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಚಂದ್ರಯಾನ-2 ನಂತಹ ಪ್ರಯತ್ನಗಳು ನಮ್ಮ ಯುವ ಪೀಳಿಗೆಯನ್ನು ವಿಜ್ಞಾನದ ಕಡೆಗೆ ಮತ್ತಷ್ಟು ಪ್ರೋತ್ಸಾಹಿಸುತ್ತದೆ. ಇದು ಭಾರತದ ಉನ್ನತ ಗುಣಮಟ್ಟದ ಸಂಶೋಧನೆ ಮತ್ತು ಆವಿಷ್ಕಾರ. ಚಂದ್ರಯಾನದ ತಂಡಕ್ಕೆ ಧನ್ಯವಾದಗಳು, ಈ ಕಾರ್ಯಕ್ರಮ ಇನ್ನಷ್ಟು ಉತ್ತೇಜನ ಪಡೆಯಲಿ. ಚಂದ್ರಯಾನ-2 ಏಕೆ ವಿಶಿಷ್ಟ ಎಂದರೆ ಅದು ಚಂದ್ರನ ದಕ್ಷಿಣ ಧ್ರುವಕ್ಕೆ ಹೋಗುತ್ತದೆ. ಈ ಹಿಂದೆ ಯಾವ ದೇಶದ ಉಪಗ್ರಹವು ಕೂಡ ದಕ್ಷಿಣ ಧ್ರುವಕ್ಕೆ ಹೋಗಿಲ್ಲ ಎಂದು ಮೋದಿ ಹೇಳಿದ್ದಾರೆ.

ಚಂದ್ರನ ದಕ್ಷಿಣ ಧ್ರುವ ಆಯ್ಕೆ ಏಕೆ..?
ಚಂದ್ರನ ದಕ್ಷಿಣ ಧ್ರುವ ವಿಶಿಷ್ಟವಷ್ಟೇ ಅಲ್ಲದೆ ಕುತೂಹಲಕಾರಿ. ಈ ಭಾಗ ಕತ್ತಲಿನಿಂದ ಕೂಡಿದ್ದು ಉತ್ತರ ಭಾಗಕ್ಕೆ ಹೋಲಿಸಿದರೆ ಇಲ್ಲಿನ ಮೇಲ್ಮೈ ಪ್ರದೇಶದ ವ್ಯಾಪ್ತಿ ದೊಡ್ಡದು. ಶಾಶ್ವತವಾಗಿ ಕತ್ತಲಿನಿಂದ ಕೂಡಿರುವ ಈ ಪ್ರದೇಶದಲ್ಲಿ ನೀರಿನ ಅಸ್ತಿತ್ವ ಇರುವ ಸಾಧ್ಯತೆಯಿದೆ. ದಕ್ಷಿಣ ಧ್ರುವದಲ್ಲಿರುವ ಕುಳಿಗಳು ಬಹಳ ತಂಪಾಗಿವೆ. ಸೌರಮಂಡಲ ವ್ಯವಸ್ಥೆ ಸೃಷ್ಟಿಯ ಹಂತದ ದಾಖಲೆಗಳನ್ನೂ ಹೊಂದಿರುವ ಸಾಧ್ಯತೆ.

ಚಂದ್ರನ ಆಯ್ಕೆ ಏಕೆ?
ಚಂದ್ರ ನಮಗೆ ಅತಿ ಹತ್ತಿರದ ಆಕಾಶಕಾಯವಾಗಿದ್ದು ಸಂಶೋಧನೆ ಮತ್ತು ದಾಖಲೀಕರಣ ಸುಲಭ. ಬಾಹ್ಯಾಕಾಶ ತಂತ್ರಜ್ಞಾನ ಪರೀಕ್ಷೆಯ ಭರವಸೆಯ ಪ್ರಯೋಗಾಲಯ. ಹಲವು ಪ್ರಯೋಗಗಳಿಗೆ ಚಂದ್ರಯಾನ ವೇದಿಕೆಯಾಗಲಿದೆ.

ಚಂದ್ರಯಾನ-2ಗೆ ಮಹಿಳಾ ವಿಜ್ಞಾನಿಗಳ ಮುಂದಾಳತ್ವ
ಯೋಜನಾ ತಂಡದಲ್ಲಿ ಶೇ.30ರಷ್ಟು ಮಹಿಳೆಯರು ಕಾರ್ಯನಿರ್ವಹಿಸಿದ್ದು, ಇಬ್ಬರು ಮಹಿಳೆಯರು ನೇತೃತ್ವ ವಹಿಸಿಕೊಂಡಿದ್ದಾರೆ. ಯೋಜನಾ ನಿರ್ದೇಶಕಿ ಎಂ. ವನಿತಾ, ಅಭಿಯಾನ ನಿರ್ದೇಶಕಿ ರಿತು ಕರಿಧಾಲ್ ಅವರಿಗೆ ಇಸ್ರೋದಲ್ಲಿ 20 ವರ್ಷ ಸೇವೆಗಳ ಅನುಭವವಿದೆ. ಮಂಗಳಯಾನ ಸೇರಿ ಪ್ರಮುಖ ಯೋಜನೆಗಳಲ್ಲಿ ಇಬ್ಬರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಚಂದ್ರಯಾನ-2 ಗೆ 620 ಸರ್ಕಾರಿ, ಖಾಸಗಿ ಕಂಪನಿಗಳು, ಐಐಎಸ್ಸಿ, ಐಐಟಿ ಸೇರಿದಂತೆ ದೇಶದ ಪ್ರಮುಖ 15 ಶಿಕ್ಷಣಗಳ ಕೇಂದ್ರಗಳು ನಾನಾ ರೀತಿಯಲ್ಲಿ ಕೆಲಸ ಮಾಡಿವೆ.

Share This Article
Leave a Comment

Leave a Reply

Your email address will not be published. Required fields are marked *