ದೇಶದ ಮೊದಲ ವಂದೇ ಮೆಟ್ರೋ, 6 ವಂದೇ ಭಾರತ್‌ ರೈಲು ಸೇವೆಗೆ ಮೋದಿ ಚಾಲನೆ – ಏನಿದರ ವಿಶೇಷ!

Public TV
3 Min Read

– ಒಟ್ಟು 660 ಕೋಟಿ ಮೌಲ್ಯದ ವಿವಿಧ ಯೋಜನೆಗಳಿಗೆ ಹಸಿರು ನಿಶಾನೆ

ನವದೆಹಲಿ: ಎರಡು ದಿನಗಳ ಗುಜರಾತ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಭಾನುವಾರ ಒಂದೇ ದಿನ ಸುಮಾರು 660 ಕೋಟಿ ರೂ. ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ. ಈಗಾಗಲೇ ರಾಂಚಿಯಲ್ಲಿ ಜಾರ್ಖಂಡ್, ಒಡಿಶಾ, ಬಿಹಾರ ಮತ್ತು ಉತ್ತರ ಪ್ರದೇಶ ಸಂಪರ್ಕಿಸುವ 6 ವಂದೇ ಭಾರತ್ ರೈಲುಗಳಿಗೆ (Vande Bharat Trains) ವರ್ಚುವಲ್‌ ಚಾಲನೆ ನೀಡಿದ್ದಾರೆ.

ಇದರೊಂದಿಗೆ ದೇಶದ ಮೊದಲ ʻವಂದೇ ಮೆಟ್ರೋʼ ರೈಲು (Vande Metro Train) ಸೇವೆಗೆ ಗುಜರಾತ್‌ನಲ್ಲಿ ಹಸಿರು ನಿಶಾನೆ ತೋರಲಿದ್ದಾರೆ. ಪಶ್ಚಿಮ ರೈಲ್ವೆಯ ಅಹಮದಾಬಾದ್ ವಿಭಾಗವು ಈ ವಾರದ ಆರಂಭದಲ್ಲಿ ಯಶಸ್ವಿಯಾಗಿ ಪ್ರಾಯೋಗಿಕ ಚಾಲನೆ ನಡೆಸಿತ್ತು.

ಇದರ ಉಪಯೋಗ ಏನು?
* ವಂದೇ ಮೆಟ್ರೋ ಸೇವೆಯು ಭುಜ್ (ಕಚ್ ಜಿಲ್ಲೆಯಲ್ಲಿದೆ) ನಿಂದ ಅಹಮದಾಬಾದ್‌ನೊಂದಿಗೆ ಸಂಪರ್ಕಿಸುತ್ತದೆ.
* 360 ಕಿಮೀ ದೂರವನ್ನ 5 ಗಂಟೆ 45 ನಿಮಿಷಗಳಲ್ಲಿ ಕ್ರಮಿಸಲಿದೆ.
* ಈ ರೈಲು ಗರಿಷ್ಠ 110 ಕಿಮೀ ವೇಗದಲ್ಲಿ ಚಲಿಸುತ್ತದೆ. ಅಂಜಾರ್, ಗಾಂಧಿಧಾಮ್, ಭಚೌ, ಸಮಖಿಯಾಲಿ, ಹಲ್ವಾಡ್, ಧ್ರಂಗಾಧ್ರಾ, ವಿರಾಮ್ಗಮ್, ಚಂದ್ಲೋಡಿಯಾ, ಸಬರಮತಿ ಮತ್ತು ಕಲುಪುರ್ (ಅಹಮದಾಬಾದ್ ನಿಲ್ದಾಣ) ನಿಲ್ದಾಣಗಳಲ್ಲಿ ಸ್ಟಾಪ್‌ ಇರಲಿದೆ.
* ಈ ರೈಲು ವಾರದಲ್ಲಿ 6 ದಿನಗಳು ಕಾರ್ಯನಿರ್ವಹಿಸುತ್ತದೆ. ಶನಿವಾರ ಭುಜ್ ನಿಂದ ಭಾನುವಾರ ಅಹಮದಾಬಾದ್‌ನಿಂದ ಸೇವೆ ಸ್ಥಗಿತಗೊಳಿಸಲಾಗುತ್ತದೆ.

ವಂದೇ ಮೆಟ್ರೋ ಸಮಯ ಹೇಗಿದೆ?
* ಭುಜ್‌ನಿಂದ ನಿರ್ಗಮನ: ಬೆಳಗ್ಗೆ 5:05 ಗಂಟೆ, ಅಹಮದಾಬಾದ್‌ಗೆ ಆಗಮನ: ಬೆಳಗ್ಗೆ 10:50 ಗಂಟೆ
* ಅಹಮದಾಬಾದ್‌ನಿಂದ ನಿರ್ಗಮನ: ಸಂಜೆ 5:30, ಭುಜ್‌ಗೆ ಆಗಮನ: ರಾತ್ರಿ 11:20 ಗಂಟೆ

ವಂದೇ ಮೆಟ್ರೋ ವಿಶೇಷತೆಗಳೇನು?
* 1,150 ಆಸನಗಳನ್ನು ಹೊಂದಿರುವುದಲ್ಲದೇ 2,058 ನಿಂತು ಪ್ರಯಾಣಿಸಬಹುದಾಗಿದೆ. ಕುಳಿತುಕೊಳ್ಳಲು ಮೃದು ಸೋಫಾಗಳನ್ನ ಅಳವಡಿಸಲಾಗಿದೆ.
* ಮೆಟ್ರೋ ಸಂಪೂರ್ಣ ಹವಾನಿಯಂತ್ರಿತವಾಗಿದೆ (ಎ.ಸಿ.)
* ಇದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನೇ ಹೋಲುತ್ತದೆಯಾದರೂ, ಉಪನಗರದ ಮೆಟ್ರೋ ವ್ಯವಸ್ಥೆಗಳ ವೈಶಿಷ್ಟ್ಯತೆಯನ್ನು ಒಳಗೊಂಡಿದೆ.
* ಎರಡೂ ತುದಿಗಳಲ್ಲಿ ಎಂಜಿನ್‌ ಮತ್ತು ಎರಡೂ ಬದಿಗಳಲ್ಲಿ ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲುಗಳನ್ನು ಒಳಗೊಂಡಿದೆ
* ಸಂಪೂರ್ಣ ಬುಕ್ಕಿಂಗ್‌ ಇಲ್ಲ, ಟಿಕೆಟ್‌ ಖರೀದಿಸಲು ಅವಕಾಶವಿದೆ.

* ವಂದೇ ಮೆಟ್ರೋ ಟಿಕೆಟ್‌ ದರ ಹೇಗೆ?
* ಕನಿಷ್ಠ ಟಿಕೆಟ್ ದರವು 30 ರೂ. ನಿಂದ ಪ್ರಾರಂಭವಾಗುತ್ತದೆ, GST ಸೇರಿದಂತೆ, ನಿಖರವಾದ ದರಗಳನ್ನು ಇನ್ನೂ ದೃಢೀಕರಿಸಲಾಗಿಲ್ಲ.
* ಭುಜ್‌ನಿಂದ ಅಹಮದಾಬಾದ್‌ಗೆ ಏಕಮುಖ ಪ್ರಯಾಣಕ್ಕೆ ಜಿಎಸ್‌ಟಿ ಹೊರತುಪಡಿಸಿ 430 ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಪ್ರಧಾನಿ ಕಾಯ್ರಕ್ರಮದ ವೇಳೆ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಜಾರ್ಖಂಡ್ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಹೊಸ ವಂದೇ ಭಾರತ್‌ ರೈಲುಗಳು ಟಾಟಾನಗರ-ಪಾಟ್ನಾ, ಬ್ರಹ್ಮಪುರ-ಟಾಟಾನಗರ, ರೂರ್ಕೆಲಾ-ಹೌರಾ, ದಿಯೋಘರ್-ವಾರಣಾಸಿ, ಭಾಗಲ್ಪುರ್-ಹೌರಾ ಮತ್ತು ಗಯಾ-ಹೌರಾ ಮಾರ್ಗಗಳಲ್ಲಿ ಚಲಿಸುತ್ತವೆ.

ಅಲ್ಲದೇ 20,000 ಪ್ರಧಾನ ಮಂತ್ರಿ ಆವಾಸ್ ಯೋಜನೆ- ಗ್ರಾಮೀಣ (PMAY-G) ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ಮೋದಿ ವಿತರಿಸಲಿದ್ದಾರೆ. ಅವರು 46,000 ಫಲಾನುಭವಿಗಳ ಗೃಹ ಪ್ರವೇಶ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ.

Share This Article