ಕೇಂದ್ರ ಬಜೆಟ್‍ನಲ್ಲಿ ಸಿದ್ದರಾಮಯ್ಯ ತಂತ್ರಕ್ಕೆ ಮೋದಿ ರಣತಂತ್ರ

Public TV
2 Min Read

ಬೆಂಗಳೂರು: ಇಂದು ಕೇಂದ್ರ ಬಜೆಟ್ ಮಂಡನೆ ಆಗಲಿದ್ದು, ಚುನಾವಣೆ ಹೊಸ್ತಿನಲ್ಲಿರುವ ಕರ್ನಾಟಕಕ್ಕೆ ಭರಪೂರ ಯೋಜನೆಗಳು ಜಾರಿ ಆಗಲಿವೆ ಎಂಬ ನಿರೀಕ್ಷೆಗಳು ಜನ ಸಾಮಾನ್ಯರಲ್ಲಿ ಹುಟ್ಟಿಕೊಂಡಿದೆ. ಹಾಗಾದ್ರೆ ಪ್ರಧಾನಿ ಮೋದಿ ತಮ್ಮ ವಿಶೇಷ ಬಜೆಟ್ ಮೂಲಕ ಸಿದ್ದರಾಮಯ್ಯ ವಿರುದ್ಧ ಚುನಾವಣಾ ರಣತಂತ್ರ ಹೂಡ್ತಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಫೆಬ್ರವರಿ 4 ರಂದು ಬೆಂಗಳೂರಲ್ಲಿ ನಡೆಯುವ `ಪರಿವರ್ತನಾ ಯಾತ್ರೆ’ಯ ಸಮಾರೋಪದಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ಸಮಾರೋಪದ ಕಾರ್ಯಕ್ರಮದಲ್ಲಿಯೇ ರಾಜ್ಯಕ್ಕೆ ಬಂಪರ್ ಕೊಡುಗೆಗಳನ್ನು ನೀಡುತ್ತಾರೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ ಬೆಂಗಳೂರು ಜನರಿಗೆ ಫೆಬ್ರವರಿ 04 ರಂದು ನಡೆಯುವ ಬೃಹತ್ ಸಮಾವೇಶದಲ್ಲಿ ಸಬರ್ಬನ್ ರೈಲು ಘೋಷಣೆ ಮಾಡ್ತಾರೆ ಅಂತಾ ಹೇಳಲಾಗುತ್ತಿದೆ.

ಬೆಂಗಳೂರು ರೈಲ್ವೆ ನಿಲ್ದಾಣಗಳು ಅಂತರಾಷ್ಟ್ರೀಯ ಮಟ್ಟಕ್ಕೆ ಏರಬಹುದು. ರಾಜ್ಯ ಸರ್ಕಾರದ ಸಹಾಯ ಪಡೆಯದೇ 150 ಕಿಲೋಮೀಟರ್ ವ್ಯಾಪ್ತಿಯ ಸಬರ್ಬನ್ ರೈಲು ನಿರ್ಮಾಣ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಮಧ್ಯ ಪ್ರದೇಶ ಹಾಗೂ ಕರ್ನಾಟಕ ಸದ್ಯ ಚುನಾವಣಾ ಹೊಸ್ತಿಲಿನಲ್ಲಿರುವ ರಾಜ್ಯಗಳಾಗಿದ್ದು, ಎರಡು ರಾಜ್ಯಗಳಿಗೆ ಮೋದಿ ಚುನಾವಣಾ ಗಿಫ್ಟ್ ನೀಡುವ ಸಾಧ್ಯತೆ ಇದೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಅಧಿಕಾರದ ಚುಕ್ಕಾಣಿ ಪ್ಲಾನ್ ಮಾಡ್ತಿರುವ ಮೋದಿ ಕರ್ನಾಟಕಕ್ಕೆ ವಿಶೇಷ ಆಫರ್ ನೀಡಬಹುದು.

ಕರ್ನಾಟಕಕ್ಕೆ ಏನು ಸಿಗಬಹುದು?:
* ರಾಜಧಾನಿ ಬೆಂಗಳೂರಿಗರ ಬಹು ವರ್ಷದ ಬೇಡಿಕೆಯಾದ 150 ಕಿ.ಮೀ.ಬೆಂಗಳೂರು ಸಬರ್ಬನ್ ರೈಲು ಸೇವೆಯನ್ನು ಬಜೆಟ್‍ನಲ್ಲಿ ಘೋಷಿಸುವ ಸಾಧ್ಯತೆ.
* ಬೆಂಗಳೂರು-ಹುಬ್ಬಳ್ಳಿ-ಮುಂಬೈ ಸೂಪರ್‍ಫಾಸ್ಟ್.
* ಹುಬ್ಬಳ್ಳಿ-ಬೆಳಗಾವಿ ರಾತ್ರಿ ರೈಲ್ವೆ ಸೇವೆ.
* ಹಂಪಿ ಎಕ್ಸ್ ಪ್ರೆಸ್ ರೈಲ್ವೆಗೆ ಪ್ರಯಾಣಿಕರ ಒತ್ತಡ ಹೆಚ್ಚಳ ಹಿನ್ನೆಲೆ ಹೊಸಪೇಟೆ-ಬೆಂಗಳೂರು ನಡುವೆ ಮತ್ತೂಂದು ರೈಲು ಆರಂಭಿಸುವ ಸಾಧ್ಯತೆಯಿದೆ.
* ಸೆಂಟ್ರಲ್ ರೈಲ್ವೆ ವಲಯದಲ್ಲಿರುವ ಕಲಬುರಗಿ ಪ್ರತ್ಯೇಕ ವಲಯ ಮಾಡುವ ಬೇಡಿಕೆ, ಮಂಗಳೂರನ್ನು ನೈಋತ್ಯ ವಲಯಕ್ಕೆ ಸೇರಿಸುವ ಬೇಡಿಕೆ ಬಗ್ಗೆ ಇಲಾಖೆ ಮಟ್ಟದಲ್ಲಿ ಚರ್ಚೆ ನಡೆದು ಬಜೆಟ್‍ನಲ್ಲಿ ಸೇರಿಸಬಹುದಾದ ವಿಚಾರಗಳ ಪ್ರಸ್ತಾವನೆ ಸಿದ್ಧಗೊಂಡಿದೆ.
* ರಾಜ್ಯ ಸರ್ಕಾರ ಸಹಕಾರದೊಂದಿಗೆ ಖಾಸಗಿ-ಸಾರ್ವಜನಿಕ-ಸಹಭಾಗಿತ್ವದಡಿ ಬಾಣಸವಾಡಿ, ಯಲಹಂಕ, ಯಶವಂತಪುರ, ಕೆಂಗೇರಿ, ಕಾಕ್ಸ್‍ಟೌನ್, ಮಲ್ಲೇಶ್ವರ, ರಾಮನಗರ, ವೈಟ್‍ಫೀಲ್ಡ್, ದೊಡ್ಡಬಳ್ಳಾಪುರ, ನೆಲಮಂಗಲ ಮಾರ್ಗದಲ್ಲಿ ಸಬರ್ಬನ್ ರೈಲು ಸೇವೆಗೆ ನಕ್ಷೆ.
* ಯಶವಂತಪುರ- ಹೊಸೂರು ದ್ವಿಪಥ (ಡಬಲಿಂಗ್) ಹಾಗೂ ವಿದ್ಯುದ್ದೀಕರಣ.

ಇನ್ನೇನು ಕೆಲವೇ ಗಂಟೆಗಳಲ್ಲಿ ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಕರ್ನಾಟಕಕ್ಕೆ ಯಾವ ಯೋಜನೆಗೆಳು ಲಭ್ಯವಾಗಲಿದೆ ಎಂಬುದು ತಿಳಿಯಲಿದೆ.

Share This Article
Leave a Comment

Leave a Reply

Your email address will not be published. Required fields are marked *