ಧೈರ್ಯ ಮೆಚ್ಚುವಂತದ್ದು: ಸುರಂಗದಿಂದ ರಕ್ಷಿಸಲ್ಪಟ್ಟ ಕಾರ್ಮಿಕರ ಜೊತೆ ಮೋದಿ ಮಾತುಕತೆ

By
2 Min Read

ನವದೆಹಲಿ: ಉತ್ತರಾಕಾಶಿಯಲ್ಲಿ ಸುರಂಗ (Uttarakashi Tunnel) ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣೆಗೊಂಡ ಕಾರ್ಮಿಕರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮಾತುಕತೆ ನಡೆಸಿದ್ದಾರೆ.

ದೂರವಾಣಿ ಮೂಲಕ ಕಾರ್ಮಿಕರ ಜೊತೆಗೆ ಮಾತನಾಡಿರುವ ಪ್ರಧಾನಿ, ನೀವು ಸುರಕ್ಷಿತವಾಗಿ ಹೊರ ಬಂದಿರುವುದು ಖುಷಿಯ ಸಂಗತಿ. ಅದನ್ನು ಶಬ್ದದಲ್ಲಿ ವರ್ಣನೆ ಮಾಡಲು ಸಾಧ್ಯವಿಲ್ಲ. ಕೇದಾರನಾಥ ಬದರಿನಾಥ ಆರ್ಶಿವಾದ ಎಂದಿದ್ದಾರೆ. ಇದನ್ನೂ ಓದಿ: ಹೆಜ್ಜೆ ಹೆಜ್ಜೆಗೂ ಅಡೆತಡೆ – ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸಿದ್ದು ಹೇಗೆ? ಇಲ್ಲಿದೆ ಪೂರ್ಣ ವಿವರ

ಎಲ್ಲವೂ ಧೈರ್ಯ ಮೆಚ್ಚುವಂತದ್ದು, ಒಬ್ಬರಿಗೊಬ್ಬರು ಆತ್ಮ ವಿಶ್ವಾಸ ತುಂಬಿದ್ದೀರಿ ಅದು ದೊಡ್ಡ ವಿಚಾರವಾಗಿದೆ. ನಾನು ಸಿಎಂ ಸೇರಿ ಎಲ್ಲರಿಂದ ಮಾಹಿತಿ ಪಡೆಯುತ್ತಿದ್ದೆ. ಮಾಹಿತಿ ಪಡೆದರೂ ನಿಮ್ಮ ಬಗೆಗಿನ ಚಿಂತೆ ಕಡಿಮೆಯಾಗುತ್ತಿರಲಿಲ್ಲ. ನಿಮ್ಮ ಕುಟುಂಬಸ್ಥರ ಪುಣ್ಯವೂ ಕಾರಣವಾಗಿರುತ್ತದೆ. ಎಲ್ಲರೂ ಸುರಕ್ಷಿತವಾಗಿ ಹೊರ ಬಂದದ್ದೀರಿ ಎಂದು ಹೇಳಿದ್ದಾರೆ. ಇದನ್ನೂ ಓದಿ: 41 ಕಾರ್ಮಿಕರ ರಕ್ಷಣೆಗೆ ವರವಾಯ್ತು ನಿಷೇಧಿತ ರ‍್ಯಾಟ್ ಹೋಲ್ ಮೈನಿಂಗ್ – ನಿಷೇಧಿಸಿದ್ದು ಯಾಕೆ?

ಸದ್ಯ ಕಾರ್ಮಿಕರಿಗೆ ಚಿನ್ಯಾಲಿಸೌರ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಮುಂದುವರಿದಿದೆ. ಹಲವು ರೀತಿಯ ವೈದ್ಯಕೀಯ ತಪಾಸಣೆ ನಡೆದಿದೆ. ಇನ್ನು ಪ್ರಧಾನಿ ಮೋದಿ, ಸಿಎಂ ಪುಷ್ಕರ್ ಸಿಂಗ್ ಧಾಮಿ, ಸಚಿವ ವಿ.ಕೆ ಸಿಂಗ್ ಸೇರಿ ಎಲ್ಲರಿಗೂ ಕಾರ್ಮಿಕರು ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೇ ಅಗತ್ಯ ನೆರವು ನೀಡಿ, ಹೊರ ಕರೆತಂದಿದ್ದಕ್ಕೆ ಕೂಡ ಕಾರ್ಮಿಕರು ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಮಂಗಳವಾರ 41 ಕಾರ್ಮಿಕರನ್ನು ಸುರಂಗದಿಂದ ರಕ್ಷಣೆ ಮಾಡುತ್ತಿದ್ದಂತೆಯೇ ಎಕ್ಸ್ ಮಾಡಿರುವ ಮೋದಿ, ನಮ್ಮ ಕಾರ್ಮಿಕ ಬಂಧುಗಳ ರಕ್ಷಣಾ ಕಾರ್ಯಾಚರಣೆಯ ಯಶಸ್ಸು ಎಲ್ಲರನ್ನೂ ಭಾವುಕರನ್ನಾಗಿಸುತ್ತಿದೆ. ನಿಮ್ಮ ಧೈರ್ಯ ಮತ್ತು ತಾಳ್ಮೆ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ ಎಂದು ಸುರಂಗದಲ್ಲಿ ಸಿಕ್ಕಿಬಿದ್ದ ಸ್ನೇಹಿತರಿಗೆ ಹೇಳುತ್ತೇನೆ.

ನಾನು ನಿಮ್ಮೆಲ್ಲರಿಗೂ ಒಳ್ಳೆಯ ಮತ್ತು ಉತ್ತಮ ಆರೋಗ್ಯವನ್ನು ಬಯಸುತ್ತೇನೆ. ದೀರ್ಘಾವಧಿಯ ಕಾಯುವಿಕೆಯ ನಂತರ ನಮ್ಮ ಈ ಸ್ನೇಹಿತರು ಈಗ ತಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುತ್ತಾರೆ ಎಂಬುದು ತುಂಬಾ ತೃಪ್ತಿಯ ವಿಷಯ. ಈ ಸವಾಲಿನ ಸಮಯದಲ್ಲಿ ಈ ಎಲ್ಲಾ ಕುಟುಂಬಗಳು ತೋರಿದ ತಾಳ್ಮೆ ಮತ್ತು ಧೈರ್ಯವನ್ನು ಸಾಕಷ್ಟು ಪ್ರಶಂಸಿನೀಯ. ಅವರ ಶೌರ್ಯ ಮತ್ತು ಸ್ಥೈರ್ಯ ನಮ್ಮ ಕಾರ್ಮಿಕ ಬಂಧುಗಳಿಗೆ ಹೊಸ ಬದುಕನ್ನು ನೀಡಿದೆ ಎಂದು ತಿಳಿಸಿದರು.

ಉತ್ತರಕಾಶಿ ಜಿಲ್ಲೆಯ ಸಿಲ್‍ಕ್ಯಾರ ಹಾಗೂ ದಂಡಲ್‍ಗಾಂವ್‍ಗೆ ಸಂಪರ್ಕ ಕಲ್ಪಿಸಲು ಚಾರ್ ಧಾಮ್ ರಸ್ತೆ ಯೋಜನೆ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. 4.5 ಕಿಲೋ ಮೀಟರ್ ದೂರದ ಸುರಂಗ ನಿರ್ಮಾಣದ ವೇಳೆ ಸುಮಾರು 150 ಮೀಟರ್ ಉದ್ದದ ಸುರಂಗ ಕುಸಿದಿತ್ತು. ನವೆಂಬರ್ 12ರಂದು ಜಾವ 4 ಗಂಟೆ ಸುಮಾರಿಗೆ ಸುರಂಗ ಕುಸಿದಿದ್ದು, ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ವೇಳೆ 41 ಮಂದಿ ಕಾರ್ಮಿಕರು ಸುರಂಗದೊಳಗೆ ಸಿಲುಕಿಕೊಂಡಿದ್ದು, 17 ದಿನಗಳ ಬಳಿಕ ಸತತ ಕಾರ್ಯಾಚರಣೆ ನಡೆಸಿ ಅವರನ್ನು ಸುರಕ್ಷಿತವಾಗಿ ಮಂಗಳವಾರ ರಾತ್ರಿ ಹೊರತರಲಾಯಿತು.

Share This Article