ದೇಶದ್ರೋಹಿಗಳ ಪರ ಕಾಂಗ್ರೆಸ್ ನಿಂತಿದೆ: ಮೋದಿ

Public TV
2 Min Read

ಚಿಕ್ಕೋಡಿ/ಬೆಳಗಾವಿ: ಮೋದಿ ಅಲೆ ಹೇಗಿರುತ್ತೆ ಎಂಬುದನ್ನು ಚಿಕ್ಕೋಡಿಯಲ್ಲಿ ಬಂದು ನೋಡಬೇಕು. ದೆಹಲಿಯ ಎಸಿ ಕೊಠಡಿಯಲ್ಲಿ ಕುಳಿತು ಸೋಲಿಸಲು ಪ್ರಯತ್ನಿಸುತ್ತಿರುವ ನಾಯಕರೇ ಹೊರಗೆ ಬಂದು ನೋಡಿ. ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿಯ ನಾಯಕರ ಬಗ್ಗೆ ಮತ ಕೇಳಲು ಬಂದಿದ್ದೆ. ಇಂದು ನನಗಾಗಿ ಮತ ಕೇಳಲು ದೇಶಾದ್ಯಂತ ಸಂಚರಿಸುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.

ಚಿಕ್ಕೋಡಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಅವರ ಮಿತ್ರ ಪಕ್ಷಗಳು ನಮ್ಮ ಅಭಿವೃದ್ಧಿಯ ಕೆಲಸಕ್ಕೆ ಅಡ್ಡಿಯುಂಟು ಮಾಡುತ್ತಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಜೋಡಿಗೆ ಕೇವಲ ಮತಗಳು ಮಾತ್ರ ಕಾಣುತ್ತವೆ. ಒಬ್ಬೊಬ್ಬರ ನಡುವೆ ಹೊಂದಾಣಿಕೆ ಇಲ್ಲ. ಮೋದಿಗೆ ಬೈಯೋದು, ಕುಟುಂಬ ರಾಜಕಾರಣ, ಉಗ್ರವಾದ ಮತ್ತು ಭ್ರಷ್ಟಾಚಾರ ಮಾಡುವುದು ಎರಡು ಪಕ್ಷಗಳ ಕೆಲಸವಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಸೈನಿಕರ ಬಗ್ಗೆ ಅವಮಾನಿಸುವಂತಹ ಹೇಳಿಕೆಯನ್ನು ನೀಡುತ್ತಾರೆ. ಇವರಿಗೆ ಎಂದೂ ದೇಶದ ಅಭಿವೃದ್ಧಿ ಮುಖ್ಯವಲ್ಲ ಎಂದು ವಾಗ್ದಾಳಿ ನಡೆಸಿದ್ರು.

ಅಧಿಕಾರಕ್ಕೆ ಬಂದರೆ ಸೈನಿಕರ ಹಕ್ಕುಗಳನ್ನು ಹಿಂಪಡೆಯುತ್ತವೆ ಎಂದು ಕಾಂಗ್ರೆಸ್ ತಮ್ಮ ಪ್ರಣಾಳಿಕೆಯಲ್ಲಿ ಹೇಳಿದೆ. ದೇಶದ್ರೋಹದ ಪರವಾಗಿ ಕೆಲಸ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕಿದೆ. ಪಿಎಂ ಕಿಸಾನ್ ಯೋಜನೆ ಲಾಭವನ್ನು ಕರ್ನಾಟಕ ಸರ್ಕಾರ, ಹೆಚ್ಚು ರೈತರ ಹೆಸರನ್ನು ನೀಡಿಲ್ಲ ಎಂದು ಆರೋಪಿಸಿತ್ತು. ಮೇ 23ರ ಬಳಿಕ ಮತ್ತೊಮ್ಮೆ ಮೋದಿ ಸರ್ಕಾರ ರಚನೆಯ ಬಳಿಕ ಎಲ್ಲ ರೈತರ ಖಾತೆಗೆ ಹಣ ಹಾಕಲಾಗುವುದು. ಈ ಯೋಜನೆಯ ಲಾಭ ಮುಂದಿನ ದಿನಗಳಲ್ಲಿ ಎಲ್ಲ ರೈತರಿಗೆ ಸಿಗಲಿದೆ. ಸರ್ಕಾರ ಸುಭದ್ರವಾಗಿದ್ದರೆ, ದೇಶ ಭದ್ರವಾಗಿರುತ್ತದೆ. ಸರ್ಕಾರ ಸುಭದ್ರವಾಗಿಸಲು ಚೌಕಿದಾರ ಬೇಕು. ನನ್ನಂತೆ ದೇಶದ ಎಲ್ಲರೂ ಚೌಕಿದಾರ ಎಂದರು.

ಕಾಂಗ್ರೆಸ್ ಬಂದ್ರೆ ಮತ್ತೆ ಬೆಲೆ ಹೆಚ್ಚಳ ಮಾಡುತ್ತದೆ. ಒಂದು ವೇಳೆ ಇವರು ಅಧಿಕಾರಕ್ಕೆ ಬಂದರೆ ಬೆಲೆ ಹೆಚ್ಚಳ, ವಂಶವಾದ, ದಲ್ಲಾಳಿಗಳ ಅಭಿವೃದ್ಧಿ ಮಾತ್ರ ಆಗುತ್ತದೆ. ಹಾಗಾಗಿ ಪ್ರತಿಯೊಬ್ಬರು ಕಮಲದ ಗುರುತಿಗೆ ಮತ ನೀಡಬೇಕೆಂದು ಮನವಿ ಮಾಡಿಕೊಂಡರು.

ಎಂದಿನಂತೆ ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ ಮೋದಿ ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ನಮಿಸಿದರು. ಚಿಕ್ಕೋಡಿಯಲ್ಲಿ ಅಣ್ಣಾ ಸಾಹೇಬ್ ಜೊಲ್ಲೆ ಮತ್ತು ಬೆಳಗಾವಿಯಲ್ಲಿ ಸುರೇಶ್ ಅಂಗಡಿ ಪರ ಪ್ರಧಾನಿ ಮೋದಿಯವರು ಮತಯಾಚಿಸಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ತಾರಾ ಅನುರಾಧ ಪ್ರಧಾನಿಗಳಿಗೆ ಕೊಡುಗೆಯನ್ನು ನೀಡಿ ಕಾಲಿಗೆ ನಮಸ್ಕರಿಸಿದರು.

ಬಾಗಲಕೋಟೆಯಲ್ಲಿ ಮಾತನಾಡಿದ್ದ ಮೋದಿ, ರಾಜ್ಯ ಸರ್ಕಾರವನ್ನು ದುರ್ಬಲ ಮತ್ತು ಸಿಎಂ ಕಣ್ಣೀರು ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದರು. ಅಂತೆಯೇ ಲಿಂಗಾಯತ ಧರ್ಮ ವಿಚಾರವನ್ನು ಪ್ರಸ್ತಾಪಿಸಿ, ಸಚಿವರ ಹೆಸರು ಹೇಳದೇ ಡಿ.ಕೆ.ಶಿವಕುಮಾರ್ ಮತ್ತು ಎಂ.ಬಿ.ಪಾಟೀಲ್ ಕಾಲೆಳೆದಿದ್ದರು.

Share This Article
Leave a Comment

Leave a Reply

Your email address will not be published. Required fields are marked *