ಕಾಂಗ್ರೆಸ್ ಅಂದ್ರೆ ವಿಭಜನೆ – ಲೋಕಸಭೆಯಲ್ಲಿ ಸಿಎಂ ಸಿದ್ದು ವಿರುದ್ಧ ಮೋದಿ ವಾಗ್ದಾಳಿ

Public TV
4 Min Read

– ಖರ್ಗೆ ಓದಿದ ಶಾಯರಿ ಸಾಲನ್ನು ಉದಾಹರಿಸಿ ಸಿಎಂಗೆ ಟಾಂಗ್
– ಕಲಬುರಗಿ- ಬೀದರ್ ರೈಲ್ವೇ ಯೋಜನೆ ನಮ್ಮದು

ನವದೆಹಲಿ: ಬೆಂಗಳೂರಿನಲ್ಲಿ ಕಮಿಷನ್ ಸರ್ಕಾರ ಎಂದು ರಾಜ್ಯದ ಕೈ ಸರ್ಕಾರವನ್ನು ಟೀಕಿಸಿದ್ದ ಪ್ರಧಾನಿ ಮೋದಿ ಇಂದು ಲೋಕಸಭೆಯಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ತಮ್ಮ ಭಾಷಣದಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದರು.

ಚುನಾವಣೆಗೆ ರಣಕಹಳೆ: ಸಿಎಂ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಕರ್ನಾಟಕದಲ್ಲಿ ಅಶಾಂತಿ ಮೂಡಲು ಕಾರಣವಾಗಿದೆ. ಕಾಂಗ್ರೆಸ್ ಮೂಲವೇ ವಿಭಜನೆ. ಮಲ್ಲಿಕಾರ್ಜುನ ಖರ್ಗೆ ಕರ್ನಾಟಕ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಪ್ರಯಾಸ ಪಡುತ್ತಿದ್ದಾರೆ ಅಂತಾ ಸರ್ಕಾರದ ಕಾರ್ಯವೈಖರಿ ವಿರುದ್ಧ ಟೀಕೆಗಳ ಸುರಿಮಳೆಗೈದರು.

ಚುನಾವಣೆಗಳಿಗೆ ಕಾಂಗ್ರೆಸ್ ಪಕ್ಷ ಅಂದು ದೇಶ ವಿಭಜನೆ ಮಾಡಿದ್ದು, ಅದರ ನೋವು 70 ವರ್ಷವಾದರೂ ದೇಶದ ಜನರು ಅನುಭವಿಸುತ್ತಿದ್ದಾರೆ. ಅಂದು ದೇಶದ ಮೊದಲ ಪ್ರಧಾನಿ ಸರ್ದಾರ್ ವಲ್ಲಭಭಾಯ್ ಪಟೇಲ್ ಆಗಿದ್ದರೆ ನಮ್ಮ ಪೂರ್ಣ ಕಾಶ್ಮೀರ ನಮಲ್ಲಿಯೇ ಇರುತ್ತಿತ್ತು. ಕಾಂಗ್ರೆಸ್ ಸರ್ಕಾರದಿಂದ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರಿಗೆ ಅನ್ಯಾಯವಾಗಿದೆ. ನಿನ್ನೆ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಶತ್ರುತ್ವ ಆ ಮಟ್ಟಿಗೆ ಮಾಡಿ, ಅದು ಎಂದಾದರೂ ಒಂದು ದಿನ ಸ್ನೇಹಕ್ಕೆ ತಿರುಗಬೇಕು ಎಂದು ಬಶೀರ್ ಭದ್ರಿ ಅವರ ಕವಿತೆ ಓದಿದ್ದರು. ಈ ಸಾಲುಗಳನ್ನು ಖರ್ಗೆ ತಮ್ಮದೇ ಸರ್ಕಾರವಿರುವ ಮುಖ್ಯಮಂತ್ರಿಗಳಿಗೆ ಹೇಳಿದಂತಿದೆ. ಈ ಶಾಯರಿಯನ್ನು ಕರ್ನಾಟಕದ ಸಿಎಂ ಕೇಳಲೇ ಬೇಕು. ಈ ಶಾಯರಿಯನ್ನು ಖರ್ಗೆಯವರು ಓದಿದ ಸ್ವಲ್ಪ ಹಿಂದಿನಿಂದ ಓದಬೇಕಿತ್ತು ಎಂದು ಹೇಳಿ ಟಾಂಗ್ ಕೊಟ್ಟರು.

ಸಿಎಂ ಸಿದ್ದರಾಮಯ್ಯ ಅವರು ಶಾಂತಿಯ ಸಂದೇಶ ಸಾರುವ ಬದಲು ಶತ್ರುತ್ವದ ಸಂದೇಶ ಸಾರುತ್ತಿದ್ದಾರೆ. ಮುಂದಿನ ಕರ್ನಾಟಕ ಚುನಾವಣೆ ಬಳಿಕ ನೀವು ಲೋಕಸಭೆಯಲ್ಲಿ ಇರುತ್ತೀರೋ ಇಲ್ಲವೋ ಗೊತ್ತಿಲ್ಲ. ನಮಗೆ ಸಲಹೆ ನೀಡುವ ಬದಲು ನಿಮ್ಮದೇ ಸರ್ಕಾರವಿರುವ ಸಿಎಂಗೆ ಬುದ್ಧಿ ಮಾತುಗಳನ್ನು ಹೇಳಿ ಅಂತಾ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಪ್ರಧಾನಿ ವಾಗ್ದಾಳಿ ನಡೆಸಿದರು.

ಖರ್ಗೆಗೆ ಟಾಂಗ್: ಖರ್ಗೆಯವರೇ ನೀವು ಕರ್ನಾಟಕದಿಂದ ಬಂದಿದ್ದೀರಿ. ಒಂದು ಪರಿವಾರದ ಮೇಲಿನ ಭಕ್ತಿಗಾಗಿ ಕರ್ನಾಟಕ ಚುನಾವಣೆ ಬಳಿಕ ಲೋಕಸಭೆಯ ನಿಮ್ಮ ಸ್ಥಾನ ಉಳಿಯಲಿ. ಆದರೆ ಜಗತ್ ಗುರು ಬಸವೇಶ್ವರರಿಗೆ ಅವಮಾನ ಮಾಡಬೇಡಿ. ಬಸವೇಶ್ವರರವರು ಆ ದಿನಗಳಲ್ಲಿ ‘ಅನುಭವ ಮಂಟಪ’ದಿಂದ ಊರಿನ ಎಲ್ಲಾ ನಿರ್ಣಯಗಳನ್ನು ಗಣತಂತ್ರ ಮೂಲಕ ಮಾಡುತ್ತಿದ್ದರು. ಆ ಕಾಲದಲ್ಲೇ ನಿರ್ಣಯ ಕೈಗೊಳ್ಳುವಲ್ಲಿ ಮಹಿಳೆಯರ ಪಾತ್ರ ಇತ್ತು. ಸದನಗಳಲ್ಲಿ ಸಭೆಗಳಲ್ಲಿ ಮಹಿಳೆಯರ ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿತ್ತು. ಬಸವೇಶ್ವರ ಕಾಲದಲ್ಲಿ ಗಣತಂತ್ರವನ್ನು ಪರಿಚಯಿಸುವ ಕೆಲಸವಾಗಿತ್ತು. ದೇಶದಲ್ಲಿ ಅನುಭವ ಮಂಟಪ ಮೂಲಕ 12ನೇ ಶತಮಾನದಲ್ಲಿಯೇ ಜಗದ್ಗುರು ಬಸವಣ್ಣ ಲೋಕ ತಂತ್ರವನ್ನು ಪರಿಚಯಿಸಿದ್ದಾರೆ. ಗಣತಂತ್ರ ನಮ್ಮ ರಕ್ತ ಮತ್ತು ನರನಾಡಿಗಳಲ್ಲಿ ಪ್ರವಹಿಸುತ್ತಿದ್ದು, ಅದು ನಮ್ಮ ಸಂಸ್ಕೃತಿಯಾಗಿದೆ.

ಕಲಬುರಗಿ ಮತ್ತು ಬೀದರ್ ರೈಲ್ವೇ ಯೋಜನೆ ನಮ್ಮದು: ಕಾಂಗ್ರೆಸ್ ಇದುವರೆಗೂ ಹೇಳದ ಮಾತನ್ನು ನಾನಿಂದು ಹೇಳುತ್ತಿದ್ದೇನೆ. ಕಲಬುರಗಿ – ಬೀದರ್ ರೈಲ್ವೇ ಯೋಜನೆಗಳಿಗೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಚಾಲನೆ ನೀಡಿತ್ತು. ಎನ್‍ಡಿಎ ಆಡಳಿತದ ಬಳಿಕ ಬಂದ ಯುಪಿಎ ಸರ್ಕಾರ ರೈಲ್ವೇ ಯೋಜನೆಯನ್ನು ಪೂರ್ಣ ಮಾಡಲು ಮನಸ್ಸು ಮಾಡಲಿಲ್ಲ. ಕರ್ನಾಟಕದಲ್ಲಿ ಬಿಎಸ್ ಯಡಿಯೂರಪ್ಪ ಸರ್ಕಾರ ಬಂದಾಗ ಕೇಂದ್ರದಿಂದ ಅನುದಾನ ಪಡೆದು ಕಾಮಗಾರಿಯನ್ನು ಆರಂಭಿಸಿದರು. 110 ಕಿಮೀ. ಉದ್ದದ ಕಾಮಗಾರಿಯಲ್ಲಿ ಯುಪಿಎ ಸರ್ಕಾರ ಕೇವಲ 37 ಕಿ.ಮೀ. ರೈಲ್ವೇ ಕಾಮಗಾರಿ ಪೂರ್ಣ ಮಾಡಿದೆ ಎಂದು ಹೇಳಿ ಖರ್ಗೆಗೆ ತಿರುಗೇಟು ನೀಡಿದರು.

ನಮ್ಮಲ್ಲಿ ಭೇದ ಭಾವವಿಲ್ಲ: ಮಲ್ಲಿಕಾರ್ಜುನ್ ಖರ್ಗೆ ತಾವೇ ರೈಲ್ವೇ ಮಂತ್ರಿಯಾಗಿದ್ದರೂ, ತಮ್ಮ ಸ್ವಕ್ಷೇತ್ರದ ಅಭಿವೃದ್ಧಿಗೆ ಮುಂದಾಗಲಿಲ್ಲ. 2014ರಲ್ಲಿ ಕೇಂದ್ರದಲ್ಲಿ ಎನ್‍ಡಿಎ ಸರ್ಕಾರ ಬಂದ ಬಳಿಕ ಕಲಬುರಗಿ ಮತ್ತು ಬೀದರ್ ರೈಲ್ವೇ ಯೋಜನೆಯನ್ನು ಕೈಗೆತ್ತಿಕೊಂಡು ಪೂರ್ಣ ಮಾಡಿದ್ದೇವೆ. ನಾವು ಎಲ್ಲಿಯೂ ಕಲಬುರಗಿ ಮತ್ತು ಬೀದರ್ ನಮ್ಮ ವಿರೋಧ ಪಕ್ಷದ ನಾಯಕರ ಕ್ಷೇತ್ರ ಎಂದು ಭೇದ ಭಾವ ಮಾಡಿಲ್ಲ. ಕಲಬುರಗಿ ಮತ್ತು ಬೀದರ್ ವಿರೋಧ ಪಕ್ಷದ ನಾಯಕರ ಕ್ಷೇತ್ರವಾದ್ರೂ, ದೇಶ ನಮ್ಮದು ಅಂತಾ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ. 2017 ಡಿಸೆಂಬರ್ ನಲ್ಲಿ ಬೀದರ್ ರೈಲ್ವೆ ಯೋಜನೆಯನ್ನು ಉದ್ಘಾಟನೆ ಮಾಡಿದ ಖುಷಿ ನನಗಿದೆ ಎಂದರು.

ದೇಶದ ಇಂದು ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರೆ ದೇಶದ ಎಲ್ಲ ರಾಜ್ಯ ಸರ್ಕಾರಗಳ ಪರಿಶ್ರಮ ಮತ್ತು ಹಿಂದಿನ ಕೇಂದ್ರ ಸರ್ಕಾರಗಳ ಪರಿಶ್ರಮವಿದೆ ಎಂದು ಇದುವರೆಗೂ ಯಾವ ಕಾಂಗ್ರೆಸ್ ಪ್ರಧಾನಿಯೂ ಕೆಂಪುಕೋಟೆಯಲ್ಲಿ ಎದೆ ತಟ್ಟಿಕೊಂಡು ಹೇಳಿಲ್ಲ. ಆದ್ರೆ ನಾನು ಪ್ರಧಾನಿ ಆದ ಮೇಲೆ ಈ ಮಾತುಗಳನ್ನು ಹೇಳಿದ್ದೇನೆ. ಆದರೂ ನಮ್ಮ ನಂತರ ಸ್ವತಂತ್ರ ಪಡೆದ ಹಲವು ರಾಷ್ಟ್ರಗಳು ಅಭಿವೃದ್ಧಿಯಲ್ಲಿ ನಮಗಿಂತ ಮುಂದಿವೆ. ಕಾಂಗ್ರೆಸ್ ಸರ್ಕಾರದಿಂದ ದೇಶದ ಅಭಿವೃದ್ಧಿ ಕುಂಠಿತವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದಲ್ಲಿ ಕಾಂಗ್ರೆಸ್ ವಿರುದ್ಧ ಟೀಕೆ ಮಾಡುತ್ತಿದ್ದಂತೆ “ಬಂದ್ ಕರೋ.. ಬಂದ್ ಕರೋ, ನಾಟಕ್ ಬಂದ್ ಕರೋ” ಎಂದು ಕೂಗುವ ಮೂಲಕ ಮೋದಿ ಭಾಷಣಕ್ಕೆ ಕೈ ಸಂಸದರು ಅಡ್ಡಿಪಡಿಸಲು ಯತ್ನಿಸಿದರು. ಆದರೆ ವಿಪಕ್ಷಗಳ ವಿರೋಧದ ನಡುವೆಯೂ ಮೋದಿ ಏರುಧ್ವನಿಯಲ್ಲಿ ಮಾತನಾಡಿ ತಮ್ಮ ಭಾಷಣವನ್ನು ಪೂರ್ಣಗೊಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *