ದೇಶದ ಜನತೆಗೆ ಮೋದಿ ದೀಪಾವಳಿ ಡಬಲ್‌ ಗಿಫ್ಟ್‌ – ತೆರಿಗೆ ಇಳಿಕೆ, ಯುವಜನತೆಗೆ ವಿಕಸಿತ ಭಾರತ ರೋಜ್‌ಗಾರ್‌ ಯೋಜನೆ

Public TV
2 Min Read

– ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುವ ಯುವಕರಿಗೆ 15,000 ರೂ. ನೆರವು: ಪ್ರಧಾನಿ

ನವದೆಹಲಿ: 79ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ದೇಶದ ನಾಗರಿಕರಿಗೆ ದೀಪಾವಳಿ ಉಡುಗೊರೆಯ ಭರವಸೆ ನೀಡಿದ್ದಾರೆ.

ಕೆಂಪು ಕೋಟೆಯಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡುವ ವೇಳೆ, ಮುಂದಿನ ಪೀಳಿಗೆಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸುಧಾರಣೆಗಳು ದೇಶಕ್ಕೆ ದೀಪಾವಳಿ ಉಡುಗೊರೆಯಾಗಿರುತ್ತವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನ್ಯೂಕ್ಲಿಯರ್ ಬೆದರಿಕೆಗೆ ಭಾರತ ಬಗ್ಗಲ್ಲ: ಪಾಕ್‌ಗೆ ಪ್ರಧಾನಿ ಮೋದಿ ತಿರುಗೇಟು

ಈ ದೀಪಾವಳಿಗೆ, ನಾನು ನಿಮಗಾಗಿ ಡಬಲ್ ಧಮಾಕ ನೀಡಲಿದ್ದೇನೆ. ಈ ದೀಪಾವಳಿಯಲ್ಲಿ ನಾಗರಿಕರು ದೊಡ್ಡ ಉಡುಗೊರೆಯನ್ನು ಪಡೆಯಲಿದ್ದಾರೆ. ನಾವು ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳನ್ನು ತರುತ್ತಿದ್ದೇವೆ. ಇದು ದೇಶಾದ್ಯಂತ ತೆರಿಗೆ ಹೊರೆಯನ್ನು ಕಡಿಮೆ ಮಾಡುತ್ತದೆ. ಇದು ದೀಪಾವಳಿ ಉಡುಗೊರೆಯಾಗಲಿದೆ ಎಂದು ಹೇಳಿದ್ದಾರೆ.

ಎಂಟು ವರ್ಷಗಳ ಹಿಂದೆ ಸರ್ಕಾರವು ಪ್ರಮುಖ ಸುಧಾರಣೆಗಳನ್ನು ಕೈಗೊಂಡಿದೆ. ಸರ್ಕಾರವು ದೇಶಾದ್ಯಂತ ತೆರಿಗೆ ಹೊರೆಯನ್ನು ಕಡಿಮೆ ಮಾಡಿ, ತೆರಿಗೆ ಪ್ರಕ್ರಿಯೆಯನ್ನು ಸರಳಗೊಳಿಸಿದೆ ಎಂದು ಭರವಸೆ ನೀಡಿದ್ದಾರೆ.

ಇದು ಸಾಮಾನ್ಯ ಜನರಿಗೆ ವಸ್ತುಗಳ ಮೇಲಿನ ತೆರಿಗೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ನಮ್ಮ MSME ಗಳು ಭಾರಿ ಲಾಭ ಪಡೆಯುತ್ತವೆ. ದಿನನಿತ್ಯ ಬಳಸುವ ವಸ್ತುಗಳು ಅಗ್ಗವಾಗುತ್ತವೆ. ಇದು ನಮ್ಮ ಆರ್ಥಿಕತೆಯನ್ನು ಬಲಪಡಿಸುತ್ತದೆ ಎಂದು ಮೋದಿ ತಿಳಿಸಿದ್ದಾರೆ. ಇದನ್ನೂ ಓದಿ: 79th Independence Day: ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

2017 ರ ಜುಲೈನಲ್ಲಿ ಜಿಎಸ್‌ಟಿ ಜಾರಿಗೆ ತರಲಾಯಿತು. ಪರೋಕ್ಷ ತೆರಿಗೆ ಪದ್ಧತಿಯ ಎಂಟು ವರ್ಷಗಳು ಪೂರ್ಣಗೊಂಡ ನಂತರ, ಈ ಬದಲಾವಣೆಗಳನ್ನು ಪರಿಶೀಲಿಸುವ ಸಮಯ ಬಂದಿದೆ. ಪರಿಶೀಲನೆಗಾಗಿ ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಯಿತು. ರಾಜ್ಯಗಳೊಂದಿಗೆ ಸಹ ಸಮಾಲೋಚಿಸಲಾಯಿತು. ಅದರ ನಂತರ ಸರ್ಕಾರವು ಹೊಸ ಜಿಎಸ್‌ಟಿ ಸುಧಾರಣೆಗಳನ್ನು ಸಿದ್ಧಪಡಿಸಿದೆ.

ವಿಕಸಿತ ಭಾರತ ರೋಜ್‌ಗಾರ್ ಯೋಜನೆಯಡಿಯಲ್ಲಿ ಮೊದಲ ಬಾರಿಗೆ ಖಾಸಗಿ ವಲಯದ ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುವ ಯುವಕರಿಗೆ 15,000 ರೂ. ನೆರವನ್ನು ಮೋದಿ ಘೋಷಿಸಿದ್ದಾರೆ. ಈ ಯೋಜನೆಯಿಂದ 3.5 ಕೋಟಿಗೂ ಹೆಚ್ಚು ಯುವಜನರು ಪ್ರಯೋಜನ ಪಡೆಯುವ ನಿರೀಕ್ಷೆಯಿದೆ.

ನನ್ನ ದೇಶದ ಯುವಕರೇ, ಈ ದಿನವೇ ನಮ್ಮ ದೇಶದ ಯುವಕರಿಗಾಗಿ 1 ಲಕ್ಷ ಕೋಟಿ ಮೌಲ್ಯದ ಯೋಜನೆಯನ್ನು ನಾವು ಪ್ರಾರಂಭಿಸುತ್ತಿದ್ದೇವೆ. ಇಂದಿನಿಂದ ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್‌ಗಾರ್ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಈ ಯೋಜನೆಯಡಿಯಲ್ಲಿ ಖಾಸಗಿ ವಲಯದಲ್ಲಿ ಮೊದಲ ಉದ್ಯೋಗ ಪಡೆಯುವ ಯುವಕ-ಯುವತಿಯರು ಸರ್ಕಾರದಿಂದ 15,000 ರೂ. ಪಡೆಯುತ್ತಾರೆ. ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕಂಪನಿಗಳಿಗೆ ಪ್ರೋತ್ಸಾಹ ಮೊತ್ತವನ್ನು ಸಹ ನೀಡಲಾಗುತ್ತದೆ. ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್‌ಗಾರ್ ಯೋಜನೆಯು ಯುವಕರಿಗೆ ಸುಮಾರು 3.5 ಕೋಟಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ತಿಳಿಸಿದ್ದಾರೆ.

Share This Article