ಫ್ರಾನ್ಸ್‌ನ ಮಾರ್ಸಿಲ್ಲೆಸ್‌ಗೆ ಪ್ರಧಾನಿ ಮೋದಿ ಭೇಟಿ – ಬಲಿದಾನಗೈದ ಭಾರತೀಯ ಯೋಧರಿಗೆ ಗೌರವ ನಮನ

Public TV
1 Min Read

ಪ್ಯಾರಿಸ್: ಪ್ರಧಾನಿ ನರೇಂದ್ರ ಮೋದಿ ಬುಧವಾರ ಫೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮಾರ್ಸಿಲ್ಲೆಸ್‌ನಲ್ಲಿರುವ ಮಜಾರ್ಗ್ಸ್ ಯುದ್ಧ ಸ್ಮಶಾನಕ್ಕೆ ಭೇಟಿ ನೀಡಿ ವಿಶ್ವ ಯುದ್ಧಗಳಲ್ಲಿ ಬಲಿದಾನಗೈದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಿದರು. ಮೋದಿ ಅವರು ಸ್ಮಾರಕದಲ್ಲಿ ಪುಷ್ಪಗುಚ್ಛ ಇಟ್ಟು ನಮಿಸಿದರು.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಪ್ರಧಾನಿ ಮೋದಿ, ‘ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯೆಲ್‌ ಮ್ಯಾಕ್ರನ್‌ ಅವರೊಂದಿಗೆ ಮಾರ್ಸಿಲ್ಲೆಗೆ ಬಂದಿದ್ದೇನೆ. ಭಾರತದ ಸ್ವಾತಂತ್ರ್ಯದ ಅನ್ವೇಷಣೆಯಲ್ಲಿ ಈ ನಗರವು ವಿಶೇಷ ಮಹತ್ವ ಹೊಂದಿದೆ. ಮಹಾನ್‌ ವೀರ್‌ ಸಾವರ್ಕರ್‌ ಧೈರ್ಯದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು ಇಲ್ಲಿಯೇ. ಅವರನ್ನು ಬ್ರಿಟಿಷ್‌ ಕಸ್ಟಡಿಗೆ ಹಸ್ತಾಂತರಿಸಬಾರದು ಎಂದು ಒತ್ತಾಯಿಸಿದ್ದ ಮಾರ್ಸೆಲ್ಲೆಯ ಜನರು ಮತ್ತು ಆ ಕಾಲದ ಫ್ರೆಂಚ್‌ ಕಾರ್ಯಕರ್ತರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ವೀರ್‌ ಸಾವರ್ಕರ್‌ ಅವರ ಶೌರ್ಯವು ಪೀಳಿಗೆಗೆ ಸ್ಫೂರ್ತಿಯಾಗಿದೆ’ ಎಂದು ತಿಳಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಮಾರ್ಸಿಲ್ಲೆಯಲ್ಲಿ ವಾಸಿಸುತ್ತಿರುವ ಭಾರತೀಯ ಸಮುದಾಯದ ಸದಸ್ಯ ಅನುಪ್ ಗುಪ್ತಾ ಮಾತನಾಡಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತೀಯರನ್ನು ಪ್ರತಿನಿಧಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಪ್ಯಾರಿಸ್‌ನಲ್ಲಿರುವ ರಾಯಭಾರ ಕಚೇರಿಯ ನಂತರ ಫ್ರಾನ್ಸ್‌ನಲ್ಲಿರುವ ಮೊದಲ ಕಾನ್ಸುಲೇಟ್ ಇದಾಗಿದೆ. ಇದು ಭಾರತೀಯ ಸಮುದಾಯ ಬೆಳೆಯಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಫೆ.10 ರಿಂದ 12 ರ ವರೆಗೆ ಫ್ರಾನ್ಸ್‌ಗೆ ಭೇಟಿ ನೀಡಿದ್ದಾರೆ. ಮಂಗಳವಾರ ಪ್ಯಾರಿಸ್‌ನಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ AI ಕ್ರಿಯಾ ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸಿದ್ದರು. ಇದರ ನಂತರ, ಪ್ರಧಾನಿ ಮೋದಿ ಫೆ.12-13 ರಂದು ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕ ಆಡಳಿತದ ಇತರ ಹಿರಿಯ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ.

Share This Article