ಅಡ್ವಾಣಿ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದ ಮೋದಿ

Public TV
2 Min Read

ನವದೆಹಲಿ: ನರೇಂದ್ರ ಮೋದಿ (Narendra Modi) ಅವರು ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೊದಲು  ಮಾಜಿ ಗೃಹ ಸಚಿವ, ಬಿಜೆಪಿಯ ಹಿರಿಯ ನಾಯಕ, ತಮ್ಮ ರಾಜಕೀಯ ಗುರು ಎಲ್‌ಕೆ ಅಡ್ವಾಣಿ (LK Advani) ಅವರ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದಿದ್ದಾರೆ.

ಮಧ್ಯಾಹ್ನ ಸಂಸತ್‌ನ ಸೆಂಟ್ರಲ್‌ ಹಾಲ್‌ನಲ್ಲಿ ಎನ್‌ಡಿಎ ಸಂಸದರನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ನಂತರ ನೇರವಾಗಿ ಮೋದಿ ಅವರು ದೆಹಲಿಯಲ್ಲಿರುವ ಅಡ್ವಾಣಿ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದರು.

ಫೆಬ್ರವರಿಯಲ್ಲಿ ಮೋದಿ ಅವರು ಅಡ್ವಾಣಿ ಅವರಿಗೆ ಈ ಬಾರಿ ಭಾರತ  ರತ್ನ (Bharat Ratna) ನೀಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ನಂತರ ಮಾರ್ಚ್‌ನಲ್ಲಿ ಅಡ್ವಾಣಿ ಅವರ ನಿವಾಸಕ್ಕೆ ತೆರಳಿ ಭಾರತ ರತ್ನ ನೀಡಿ ಗೌರವಿಸಲಾಗಿತ್ತು. ಇದನ್ನೂ ಓದಿ: ಇವಿಎಂ ಸತ್ತಿದ್ಯಾ ಅಥವಾ ಬದುಕಿದ್ಯಾ? – ವಿಪಕ್ಷ ನಾಯಕರನ್ನ ಲೇವಡಿ ಮಾಡಿದ ಮೋದಿ 

ಅಡ್ವಾಣಿ ಮತ್ತು ಮೋದಿ ಅವರಿಗೆ ಮೊದಲಿನಿಂದಲೂ ಉತ್ತಮ ಸಂಬಂಧವಿದೆ. ಅಡ್ವಾಣಿ ಅವರ ರಥಯಾತ್ರೆಯ ಯಶಸ್ಸಿನ ಹಿಂದೆ ಮೋದಿ ಅವರ ಪಾತ್ರವಿದೆ. ಗುಜರಾತ್‌ನಲ್ಲಿ ಇದ್ದಾಗ ಮೋದಿ ಯಶಸ್ವಿ ಸಂಘಟಕರಾಗಿದ್ದರು. ಅಡ್ವಾಣಿ ಅವರು ಗುಜರಾತಿನ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಾಗ ಮೋದಿ ಅವರು ಯಶಸ್ವಿಯಾಗಿ ಚುನಾವಣೆಯನ್ನು ಸಂಘಟಿಸುತ್ತಿದ್ದರು. ಇವರಲ್ಲಿನ ನಾಯಕತ್ವ ಕೌಶಲ್ಯವನ್ನು ನೋಡಿ ಬಿಜೆಪಿ ಹೈಕಮಾಂಡ್‌ 2001ರಲ್ಲಿ ಮೋದಿ ಅವರಿಗೆ ಸಿಎಂ ಹುದ್ದೆ ನೀಡಿತ್ತು.

 

ಮೋದಿ ಅವರು ಈ ಹಿಂದೆ ತಮ್ಮ ರಾಜಕೀಯ ಭಾಷಣದಲ್ಲಿ ಅಡ್ವಾಣಿ ಅವರ ಕೆಲಸವನ್ನು ಸ್ಮರಿಸುತ್ತಿದ್ದರು. ವಿರೋಧಿಗಳು ಬಿಜೆಪಿಯನ್ನು ಅಸ್ಪೃಶ್ಯ ಎಂದು ಕರೆಯುತ್ತಿದ್ದರು. ಈ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಅಡ್ವಾಣಿ ಈ ಸಿದ್ಧಾಂತವನ್ನು ಸೋಲಿಸಲು ಮತ್ತು ಪಕ್ಷವನ್ನು ದೇಶದಲ್ಲಿ ಪ್ರಮುಖ ರಾಜಕೀಯ ಶಕ್ತಿಯಾಗಿ ಬೆಳೆಯಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು ಎಂದು ಹೇಳಿದ್ದರು. ಇದನ್ನೂ ಓದಿ: ಭಾರತದ ಇತಿಹಾಸದಲ್ಲಿ ಯಾವುದೇ ಚುನಾವಣಾ ಪೂರ್ವ ಮೈತ್ರಿ ಸಫಲವಾಗಿಲ್ಲ, ನಾವು ಸಾಧನೆ ಮಾಡಿದ್ದೇವೆ: ಎನ್‌ಡಿಎ ಕೊಂಡಾಡಿದ ಮೋದಿ

ಒಂದು ಕುಟುಂಬದಿಂದ ದೇಶವನ್ನು ಪಾರು ಮಾಡಲು ಅಡ್ವಾಣಿ ಅವರು ರಾಷ್ಟ್ರೀಯತೆಯ ಸಿದ್ಧಾಂತದೊಂದಿಗೆ ಜನರನ್ನು ಸಂಪರ್ಕಿಸಿ ದೇಶವನ್ನು ಬಲಪಡಿಸುವ ಸವಾಲು ತೆಗೆದುಕೊಂಡಿದ್ದರು ಎಂದು ನೆನಪಿಸಿಕೊಂಡಿದ್ದರು.

Share This Article