ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮೆಜೆಸ್ಟಿಕ್ ಬಳಿ ಇರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಮೂರು ವಂದೇಭಾರತ್ ರೈಲಿಗೆ (Vande Bharat Express) ಹಸಿರು ನಿಶಾನೆ ತೋರಿಸಿದ್ದಾರೆ.
ಇದೇ ಸಮಯದಲ್ಲಿ ಅಮೃತ್‍ಸರ್ ದಿಂದ ಶ್ರೀ ಮಾತಾ ವೈಷ್ಣೋದೇವಿ ಕತ್ರಾ ಹಾಗೂ ನಾಗ್‍ಪುರ್ (ಅಜ್ನಿ) ಯಿಂದ ಪುಣೆಯ ವರೆಗೆ ಚಲಿಸಲಿರುವ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲುಗಳಿಗೂ ಸಹ ವರ್ಚುವಲ್ ಮೂಲಕ ಚಾಲನೆ ನೀಡಿದರು.
ಈ ಸಮಯದಲ್ಲಿ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ, ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್, ಸೇರಿದಂತೆ ಗಣ್ಯರು ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಮೋದಿ Live – 3 ವಂದೇ ಭಾರತ್ ರೈಲುಗಳಿಗೆ ಮೋದಿ ಚಾಲನೆ
ಬೆಂಗಳೂರು- ಬೆಳಗಾವಿ ರೈಲು ಸಂಚಾರದಿಂದ ಬೆಂಗಳೂರು, ತುಮಕೂರು, ದಾವಣಗೆರೆ, ಹಾವೇರಿ, ಧಾರವಾಡ ಹಾಗೂ ಬೆಳಗಾವಿ ಮಧ್ಯೆ ಸಂಪರ್ಕ ಹೆಚ್ಚಲಿದ್ದು, ಈ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಈ ರೈಲು 8 ಜಿಲ್ಲೆಗಳ ಮೂಲಕ ಹಾದು ಹೋಗಲಿದ್ದು, ಬುಧವಾರ ಹೊರತುಪಡಿಸಿ ವಾರದ 6 ದಿನ ಈ ರೈಲು ಸಂಚರಿಸಲಿದೆ. ಕಿತ್ತೂರು ಕರ್ನಾಟಕ, ದಕ್ಷಿಣ ಕರ್ನಾಟಕ ಮೂಲಕ ರಾಜ್ಯ ರಾಜಧಾನಿ ಸಂಪರ್ಕಿಸಲಿದೆ. ಬೆಳಗಾವಿಯಿಂದ ಬೆಳಗ್ಗೆ 5:20ಕ್ಕೆ ಹೊರಟು ಮಧ್ಯಾಹ್ನ 1:50ಕ್ಕೆ ಬೆಂಗಳೂರು ತಲುಪುವ ರೈಲು, ಮಧ್ಯಾಹ್ನ 2:20ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 10:40ಕ್ಕೆ ಬೆಳಗಾವಿ ತಲುಪಲಿದೆ. ಈ ರೈಲು ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ ನಡುವೆ ಸಂಪರ್ಕಿಸಲಿದೆ.
ಒಟ್ಟಿನಲ್ಲಿ ಈ ವಂದೇ ಭಾರತ್ ರೈಲು 8 ಗಂಟೆ 50 ನಿಮಿಷಗಳಲ್ಲಿ 611 ಕಿಲೋ ಮೀಟರ್ ದೂರ ಕ್ರಮಿಸಲಿದ್ದು, ರಾಜ್ಯದ ರೈಲ್ವೆ ಇತಿಹಾಸದಲ್ಲಿ ಮೈಲುಗಲ್ಲಾಗಿದೆ.