2019ರ ಭಾರತದ ಅತಿ ಹೆಚ್ಚು ಮೆಚ್ಚುಗೆ ಪಡೆದ ವ್ಯಕ್ತಿ ಮೋದಿ – ಸಮೀಕ್ಷೆ

Public TV
2 Min Read

ನವದೆಹಲಿ: ಭಾರತದ ಪ್ರಧಾನಿ ಮೋದಿ ಅವರು 2019 ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಮೆಚ್ಚುಗೆ ಪಡೆದವರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

ಯುಕೆ ಮೂಲದ ಯೂಗೂವ್ ಎಂಬ ಮಾರುಕಟ್ಟೆ ಸಂಶೋಧನಾ ಸಂಸ್ಥೆ ನಡೆಸಿರುವ ಸಮೀಕ್ಷೆಯ ಪ್ರಕಾರ ಮೋದಿ ಅವರು ಭಾರತದಲ್ಲಿ ಅತೀ ಹೆಚ್ಚು ಮೆಚ್ಚುಗೆ ಪಡೆದವರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಇದರ ಜೊತೆಗೆ ವಿಶ್ವದಲ್ಲೇ ಅತಿ ಹೆಚ್ಚು ಮೆಚ್ಚುಗೆ ಪಡೆದವರ ಪಟ್ಟಿಯಲ್ಲಿ 6 ನೇ ಸ್ಥಾನ ಪಡೆದಿದ್ದಾರೆ.

ಈ ಪಟ್ಟಿಯಲ್ಲಿ ಕಳೆದ ವರ್ಷ ಮೋದಿ ಅವರು ಎಂಟನೇ ಸ್ಥಾನದಲ್ಲಿ ಇದ್ದರು ಈ ವರ್ಷ ಆರನೇ ಸ್ಥಾನಕ್ಕೆ ಬಂದಿದ್ದಾರೆ. ಈ ಮೂಲಕ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತೀಯ ಏಕೈಕ ರಾಜಕಾರಣಿಯಾಗಿದ್ದಾರೆ. ಮಹಿಳೆ ವಿಭಾಗದಿಂದ ಬಾಕ್ಸರ್ ಮೇರಿ ಕೂಮ್ ಅವರು ಭಾರತದಲ್ಲಿ ಅತೀ ಹೆಚ್ಚು ಮೆಚ್ಚುಗೆ ಪಡೆದ ಮಹಿಳೆಯಾಗಿದ್ದಾರೆ.

ಪ್ರಧಾನಿ ಮೋದಿ ಅವರ ಮೆಚ್ಚುಗೆಯ ಅಂಕ ವಿಶ್ವಾದ್ಯಂತ ಶೇಕಡಾ 4.8 ರಷ್ಟಿದೆ. ಮೋದಿ ಅವರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದರಿಂದ ಮೆಚ್ಚುಗೆ ಮಹಾಪೂರವೇ ಹರಿದು ಬಂದಿದ್ದು, ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಸಂಸದೆ ಸ್ಮೃತಿ ಇರಾನಿ ಟ್ವಿಟ್ಟರ್ ಮೂಲಕ ವಿಶ್ ಮಾಡಿದ್ದಾರೆ.

ಭಾರತದಲ್ಲಿ ಮೋದಿ ಅವರನ್ನು ಬಿಟ್ಟರೆ ಎರಡನೇ ಸ್ಥಾನದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ವಿಕೆಟ್ ಕೀಪರ್ ಎಂ.ಎಸ್ ಧೋನಿ ಅವರ ಎರಡನೇ ಸ್ಥಾನದಲ್ಲಿ ಇದ್ದಾರೆ. ಇವರ ನಂತರ ಮೂರನೇ ಸ್ಥಾನದಲ್ಲಿ ಉದ್ಯಮಿ ರತನ್ ಟಾಟಾ ಅವರು ಇದ್ದಾರೆ.

ಇನ್ನೂ ಈ ಪಟ್ಟಿಯಲ್ಲಿ ಬಾಲಿವುಡ್ ಸ್ಟಾರ್ ನಟರಾದ ಅಮಿತಾಬ್ ಬಚ್ಚನ್, ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ವಿಶ್ವದ ಅತಿ ಹೆಚ್ಚು ಮೆಚ್ಚುಗೆ ಪಡೆದ ಟಾಪ್ 20 ಪುರುಷರಲ್ಲಿ ಕಾಣಿಸಿಕೊಂಡಿದ್ದಾರೆ. ಮಹಿಳಾ ವಿಭಾಗದಲ್ಲಿ ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಐಶ್ವರ್ಯಾ ರೈ ಮತ್ತು ಸುಸ್ಮಿತಾ ಸೇನ್ ವಿಶ್ವದ ಅತಿ ಹೆಚ್ಚು ಮೆಚ್ಚುಗೆ ಪಡೆದ 20 ಮಹಿಳೆಯರಲ್ಲಿ ಪಟ್ಟಿಗೆ ಸೇರಿದ್ದಾರೆ.

ಮೇರಿ ಕೋಮ್ ಅವರು ಸೇರಿದಂತೆ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ, ಗಾಯಕಿ ಲತಾ ಮಂಗೇಶ್ಕರ್, ಬಿಜೆಪಿ ಮುಖಂಡೆ ಸುಷ್ಮಾ ಸ್ವರಾಜ್ ಮತ್ತು ನಟಿ ದೀಪಿಕಾ ಪಡುಕೋಣೆ ಮೊದಲ ಐದು ಹೆಚ್ಚು ಮೆಚ್ಚುಗೆ ಪಡೆದ ಭಾರತದ ಮಹಿಳೆಯರಾಗಿದ್ದಾರೆ.

ಈ ಪಟ್ಟಿಯಲ್ಲಿ ಬಿಲಿಯನೇರ್ ಬಿಲ್ ಗೇಟ್ಸ್ ಅಗ್ರಸ್ಥಾನದಲ್ಲಿದ್ದು, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಎರಡನೇ ಸ್ಥಾನದಲ್ಲಿದ್ದಾರೆ. ವಿಶ್ವದ ಮಹಿಳಾ ವಿಭಾಗದಿಂದ ಮಾಜಿ ಪ್ರಥಮ ಮಹಿಳೆ ಮಿಷೆಲ್ ಒಬಾಮ ಮತ್ತು ಅಮೆರಿಕದ ಟಿವಿ ನಿರೂಪಕಿ ಓಪ್ರಾ ವಿನ್ಫ್ರೇ ಅವರು ವಿಶ್ವದಾದ್ಯಂತ ಹೆಚ್ಚು ಮೆಚ್ಚುಗೆ ಪಡೆದ ಮಹಿಳೆಯರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *