– 5 ರಾಜ್ಯಗಳಲ್ಲಿ 71,000 ಕೋಟಿ ಮೌಲ್ಯದ ಯೋಜನೆಗಳ ಉದ್ಘಾಟನೆ
ಐಜ್ವಾಲ್: ಮಿಜೋರಾಂನ (Mizoram) ಮೊಟ್ಟಮೊದಲ ರೈಲು ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ಉದ್ಘಾಟಿಸಿದ್ದಾರೆ.
ಸೈರಾಂಗ್‌ನಿಂದ ದೆಹಲಿ ಸಂಪರ್ಕಿಸುವ ರಾಜಧಾನಿ ಎಕ್ಸ್ಪ್ರೆಸ್, ಸೈರಾಂಗ್-ಗುವಾಹಟಿ ಎಕ್ಸ್ಪ್ರೆಸ್ ಮತ್ತು ಸೈರಾಂಗ್-ಕೋಲ್ಕತ್ತಾ ಎಕ್ಸ್ಪ್ರೆಸ್‌ಗೆ ಹಸಿರು ನಿಶಾನೆ ತೋರಿಸಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಶಾಂತಿಯ ಹೆಜ್ಜೆ – ಜನಾಂಗೀಯ ಹಿಂಸಾಚಾರದ ಬಳಿಕ ಇಂದು ಮೋದಿ ಮೊದಲ ಭೇಟಿ
ಮಿಜೋರಾಂ ಗುಡ್ಡಗಾಡಿನಿಂದ ಕೂಡಿದ ಪ್ರದೇಶವಾಗಿದ್ದು, ಇಲ್ಲಿ ರೈಲು ಮಾರ್ಗ ನಿರ್ಮಾಣ ಮಾಡುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಇದೀಗ ನಿಧಾನಗತಿಯಲ್ಲಿ ಸಾಗಿದ್ದ ರೈಲ್ವೆ ಕಾಮಗಾರಿ 11 ವರ್ಷಗಳ ಬಳಿಕ ಪೂರ್ಣಗೊಂಡಿದೆ. 8,070 ಕೋಟಿ ರೂ. ವೆಚ್ಚದ ಬೈರಾಬಿ-ಸೈರಾಂಗ್ ರೈಲು ಮಾರ್ಗವು ನಿರ್ಮಾಣವಾಗಿದೆ. 2015ರಲ್ಲಿ ಪ್ರಾರಂಭವಾದ ಕಾಮಗಾರಿ 2025ರಲ್ಲಿ ಪೂರ್ಣಗೊಂಡಿದೆ.
ಇದೀಗ ಎಲ್ಲಾ ಸುರಂಗಗಳಲ್ಲಿ ಬ್ಯಾಲೆಸ್ಟ್ಲೆಸ್ ಟ್ರ‍್ಯಾಕ್ ಅಳವಡಿಸಲಾಗಿದೆ. ಸೇತುವೆ ಮತ್ತು ಸುರಂಗಗಳನ್ನು ಹೊರತುಪಡಿಸಿ 23.715 ಕಿ.ಮೀ ಮಾರ್ಗವು ಬಯಲು ಪ್ರದೇಶದಲ್ಲಿದೆ. ಕೆಲವೆಡೆ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ರೆ, ಅದರಿಂದ ರಕ್ಷಣೆ ಪಡೆಯಲು ಸೂಕ್ತ ವ್ಯವಸ್ಥೆಗಳನ್ನೂ ಮಾಡಲಾಗಿದೆ.
ಸಾಯಿರಾಂಗ್ ಬಳಿಯ ಸೇತುವೆ ಸಂಖ್ಯೆ 144 ಕುತುಬ್ ಮಿನಾರ್‌ಗಿಂತ 114 ಮೀಟರ್ ಎತ್ತರದಲ್ಲಿದೆ. ಇದು ದೇಶದ ಅತಿ ಎತ್ತರದ ಪಿಯರ್ ರೈಲ್ವೆ ಸೇತುವೆಯಾಗಿದೆ ಎಂದು ಈಶಾನ್ಯ ಗಡಿನಾಡು ರೈಲ್ವೆಯ ಅಧಿಕಾರಿ ತಿಳಿಸಿದ್ದಾರೆ.
5 ರಾಜ್ಯಗಳಲ್ಲಿ 71,000 ಕೋಟಿ ಮೌಲ್ಯದ ಯೋಜನೆಗಳ ಉದ್ಘಾಟನೆ
ಇಂದಿನಿಂದ ಸೆ.15ರ ವರೆಗೆ ಪ್ರಧಾನಿ ಮೋದಿ 5 ರಾಜ್ಯಗಳ ಪ್ರವಾಸ ಕೈಗೊಂಡಿದ್ದಾರೆ. ಮಿಜೋರಾಂ, ಮಣಿಪುರ, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಬಿಹಾರಕ್ಕೆ ಭೇಟಿ ನೀಡಲಿದ್ದು, ಈ ಅವಧಿಯಲ್ಲಿ ಒಟ್ಟು 71,850 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.