ಸಂಸದರಿಗೆ 184 ಫ್ಲ್ಯಾಟ್‌ ಉದ್ಘಾಟಿಸಿದ ಮೋದಿ – 4 ಟವರ್‌ಗಳಿಗೆ 4 ನದಿಗಳ ಹೆಸರು

Public TV
2 Min Read

– ಕಾರ್ಮಿಕರ ಶ್ರಮಕ್ಕಾಗಿ ಸಿಂದೂರ ಸಸಿ ನೆಟ್ಟ ಪ್ರಧಾನಿ

ನವದೆಹಲಿ: ಸಂಸತ್​ ಸದಸ್ಯರಿಗಾಗಿಯೇ ನಿರ್ಮಾಣಗೊಂಡಿರುವ 184 ಹೊಸ ಬಹುಮಹಡಿ ಫ್ಲಾಟ್​ಗಳನ್ನ (Multi Storey Housing Flats) ಇಂದು ಪ್ರಧಾನಿ ನರೇಂದ್ರ ಮೋದಿ (PM Modi) ಉದ್ಘಾಟಿಸಿದರು. ಬಳಿಕ ವಸತಿ ಸಮುಚ್ಛಯ ಸ್ಥಳದಲ್ಲಿ ಸಿಂದೂರ (ವರ್ಮಿಲಿಯನ್) ಸಸಿ ನೆಟ್ಟು ಕಾರ್ಮಿಕರ ಶ್ರಮ ಸ್ಮರಿಸಿದರು. ಜೊತೆಗೆ ಕಾರ್ಮಿಕರೊಂದಿಗೆ ಕೆಲಕಾಲ ಸಂವಾದ ನಡೆಸಿದರು.

ದೆಹಲಿಯ ಬಾಬಾ ಖರಕ್ ಸಿಂಗ್ ಮಾರ್ಗದಲ್ಲಿ ನಿರ್ಮಾಣಗೊಂಡಿರುವ ಟೈಪ್-VII ಬಹುಮಹಡಿ ಫ್ಲ್ಯಾಟ್‌ ಕಟ್ಟಡ (MPs Flats) ಸಂಸದರಿಗೆ ವಸತಿ ಕೊರತೆ ನೀಗಿಸುವ ಉದ್ದೇಶ ಹೊಂದಿದೆ. ಅಲ್ಲದೇ ಆಧುನಿಕ, ಪರಿಸರ ಸ್ನೇಹಿ ನಿವಾಸಗಳನ್ನ ಒದಗಿಸುವುದು ಈ ಯೋಜನೆಯ ಗುರಿಯಾಗಿದೆ. ಇದನ್ನೂ ಓದಿ: ರಾಯರ ಮಧ್ಯಾರಾಧನೆಯಲ್ಲಿ ನಟ ಜಗ್ಗೇಶ್ ಭಾಗಿ

ಈ ಕಾರ್ಯಕ್ರಮದ ವೇಳೆ ಪ್ರಧಾನಿ ಜೊತೆಗೆ ಲೋಕಸಭಾ ಸ್ಪೀಕರ್​ ಓಂ ಬಿರ್ಲಾ, ಕೇಂದ್ರ ಸಚಿವರಾದ ಮನೋಹರ್​ ಲಾಲ್​ ಖಟ್ಟರ್​, ಕಿರಣ್​ ರಿಜಿಜು ಅವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ವಸತಿ ಸಮುಚ್ಛಯ ಸ್ಥಳದಲ್ಲಿ ಸಿಂಧೂರ (ವರ್ಮಿಲಿಯನ್) ಸಸಿಯನ್ನು ನೆಟ್ಟರು. ಈ ವೇಳೆ, ಕಟ್ಟಡ ಕಾರ್ಮಿಕರ ಜೊತೆಗೆ ಕೂಡ ಸಂಭಾಷಣೆ ನಡೆಸಿದರು. ಇದನ್ನೂ ಓದಿ: ಎರಡೆರಡು ವೋಟರ್ ಐಡಿ – ಬಿಹಾರ ಡಿಸಿಎಂಗೆ ಚುನಾವಣಾ ಆಯೋಗ ನೋಟಿಸ್

184 ಬಹುಮಹಡಿ ಫ್ಲ್ಯಾಟ್‌ನ ವಿಶೇಷತೆ ಏನು?

* ಬಹುಮಹಡಿ ಫ್ಲ್ಯಾಟ್‌ನ 4 ಟವರ್‌ಗಳಿಗೆ 4 ನದಿಗಳ ಹೆಸರನ್ನು ನಾಮಕರಣ ಮಾಡಲಾಗಿದೆ, ಕೃಷ್ಣಾ, ಗೋದಾವರಿ, ಕೋಸಿ, ಹೂಗ್ಲಿ ಎಂಬ ಹೆಸರುಗಳನ್ನಿಡಲಾಗಿದೆ.

* ಹೊಸದಾಗಿ ನಿರ್ಮಿಸಲಾದ ಪ್ರತಿಯೊಂದು ಟೈಪ್-7 ಫ್ಲಾಟ್‌ಗಳು ಅಂದಾಜು 5000 ಚದರ ಅಡಿ ಕಾರ್ಪೆಟ್ ಪ್ರದೇಶವನ್ನ ಒಳಗೊಂಡಿದೆ. ಕಚೇರಿಗಳು, ಸಿಬ್ಬಂದಿ ವಸತಿ ಮತ್ತು ವಸತಿ ಉದ್ದೇಶಗಳಿಗೆ ಅನುಕೂಲವಾಗುವ ವಿಭಾಗಗಳನ್ನು ವಿನ್ಯಾಸಗೊಳಿಸಲಾಗಿದೆ. ಇದರಿಂದಾಗಿ ಸಂಸದರು ತಮ್ಮ ಸಾರ್ವಜನಿಕ ಕರ್ತವ್ಯಗಳನ್ನೂ ಮನೆಯಿಂದಲೇ ನಿರ್ವಹಿಸಲು ಅವಕಾಶವಿದೆ ಎಂದು ಕೇಂದ್ರ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

* ಹೊಸ ಫ್ಲ್ಯಾಟ್‌ಗಳು ಉನ್ನತ ವರ್ಗದ ಟೈಪ್‌-8 ಬಂಗಲೆಗಳಿಗಿಂತಲೂ ಹೆಚ್ಚು ವಿಶಾಲವಾಗಿವೆ. ಈ ಬಹುಮಹಡಿ ಕಟ್ಟಡವನ್ನು ಅಲ್ಯೂಮಿನಿಯಂ ಶಟರಿಂಗ್‌ನೊಂದಿಗೆ ಏಕಶಿಲೆಯ ಕಾಂಕ್ರೀಟ್ ಬಳಸಿ ನಿರ್ಮಿಸಲಾಗಿದೆ.

* ಕಟ್ಟಡ ಆವರಣದಲ್ಲಿ ಸಮುದಾಯ ಕೇಂದ್ರವನ್ನೂ ಒಳಗೊಂಡಿದ್ದು, ಸಂಸದರ ಸಾಮಾಜಿಕ ಮತ್ತು ಅಧಿಕೃತ ಕಾರ್ಯಕ್ರಮಗಳಿಗೆ ಉಪಯುಕ್ತವಾಗಲಿದೆ.

* ಈ ಕಟ್ಟಡವು GRIHA 3-ಸ್ಟಾರ್ ರೇಟಿಂಗ್‌ ಮಾನದಂಡ ಹೊಂದಿದೆ, ರಾಷ್ಟ್ರೀಯ ಕಟ್ಟಡ ಸಂಹಿತೆ (ಎನ್​ಬಿಸಿ) 2016ಗೆ ಅನುಗುಣವಾಗಿ ನಿರ್ಮಾಣವಾಗಿದೆ.

* ಪರಿಸರ ಸುಸ್ಥಿರ ವೈಶಿಷ್ಟ್ಯಗಳಲ್ಲಿ ನವೀಕರಿಸಬಹುದಾದ ಇಂಧನ ವ್ಯವಸ್ಥೆಗಳು, ಇಂಧನ-ಸಮರ್ಥ ಫಿಟ್ಟಿಂಗ್‌ಗಳು ಮತ್ತು ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಒಳಗೊಂಡಿದೆ.

* ಮುಖ್ಯವಾಗಿ ಎಲ್ಲಾ ಕಟ್ಟಡಗಳನ್ನು ಆಧುನಿಕ ರಚನಾತ್ಮಕ ಮಾನದಂಡಗಳಿಗೆ ಅನುಗುಣವಾಗಿ ಭೂಕಂಪ-ನಿರೋಧಕವಾಗಿ ನಿರ್ಮಿಸಲಾಗಿದೆ. ನಿವಾಸಿಗಳ ಸುರಕ್ಷತೆಗಾಗಿ ದೃಢವಾದ ಭದ್ರತಾ ವ್ಯವಸ್ಥೆಯನ್ನು ಸಹ ಅಳವಡಿಸಲಾಗಿದೆ.

Share This Article