ನವದೆಹಲಿ: ದೇಶಾದ್ಯಂತ 79ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ನೆರವೇರಿಸಿದರು.
ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಘೋಷವಾಕ್ಯ ‘ನಯ ಭಾರತ’. ಸಮೃದ್ಧ, ಸುರಕ್ಷಿತ ಮತ್ತು ದಿಟ್ಟ ನವ ಭಾರತದ ನಿರಂತರ ಉದಯವನ್ನು ಸ್ಮರಿಸುವ ಧ್ಯೇಯವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಧ್ವಜಾರೋಹಣಕ್ಕೂ ಮುನ್ನ ದೆಹಲಿಯ ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದರು. ನಂತರ ರಾಷ್ಟ್ರದ ನೇತೃತ್ವ ವಹಿಸಿ ಸಂಭ್ರಮಿಸಲು ಕೆಂಪು ಕೋಟೆಗೆ ಆಗಮಿಸಿದರು. ಮೋದಿ ಅವರನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ವಾಗತಿಸಿದರು.
ಬಳಿಕ ಪಿಎಂ ಮೋದಿ ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರಗೀತೆ ಮೊಳಗಿತು. ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಿದರು. ಈ ವೇಳೆ ಭಾರತೀಯ ವಾಯುಪಡೆಯ ಎರಡು Mi-17 ಹೆಲಿಕಾಪ್ಟರ್‌ಗಳು ಕೆಂಪು ಕೋಟೆಯ ಮೇಲೆ ಹಾರಾಟ ನಡೆಸಿ, ಪುಷ್ಪವೃಷ್ಟಿಗೈದವು. ಒಂದು ಹೆಲಿಕಾಪ್ಟರ್ ತಿರಂಗವನ್ನು ಹಾರಾಡಿಸಿತು. ಮತ್ತೊಂದು ಹೆಲಿಕಾಪ್ಟರ್, ಆಪರೇಷನ್ ಸಿಂಧೂರ್‌ನ ಬ್ಯಾನರ್ ಅನ್ನು ಪ್ರದರ್ಶಿಸಿತು. ಆ ಮೂಲಕ ಶತ್ರು ದೇಶಗಳಿಗೆ ದಿಟ್ಟ ಉತ್ತರ ಕೊಟ್ಟ ಆಪರೇಷನ್ ಸಿಂಧೂರ ಬಗ್ಗೆ ಅರಿವು ಮೂಡಿಸಿತು.