ಬೆಲೆ ಏರಿಕೆಯ ಪಾಪ ನಮ್ಮೇಲೆ ಹೇರಲು ಯತ್ನಿಸುತ್ತಿರುವ ಬಿಜೆಪಿ ನಾಯಕರ ಮುಖಕ್ಕೆ ಮೋದಿ ಮಸಿ ಬಳಿದಿದ್ದಾರೆ: ಸಿಎಂ

Public TV
2 Min Read

– ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಏರಿಕೆಗೆ ಸಿಎಂ ಆಕ್ಷೇಪ
– ಎಲ್ಲದರ ಬೆಲೆ ಏರಿಕೆಗೆ ಕಾರಣ ಕೇಂದ್ರ ಸರ್ಕಾರ

ಬೆಂಗಳೂರು: ಪೆಟ್ರೋಲ್, ಡೀಸೆಲ್ ದರ ಏರಿಕೆ ಮೂಲಕ ರಾಜ್ಯ ಬಿಜೆಪಿ ನಾಯಕರಿಗೆ ಮುಟ್ಟಿ ನೋಡಿಕೊಳ್ಳುವಂತೆ ಮೋದಿ ಕಪಾಳಮೋಕ್ಷ ಮಾಡಿದ್ದಾರೆ, ಬಿಜೆಪಿ ನಾಯಕರ ಮುಖಕ್ಕೆ ಮಸಿ ಬಳಿದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಕಿಡಿಕಾರಿದ್ದಾರೆ.

ಕೇಂದ್ರ ಸರ್ಕಾರ (Central Government) ಪೆಟ್ರೋಲ್, ಡೀಸೆಲ್‌ನ ಅಬಕಾರಿ ಸುಂಕ 2 ರೂ. ಏರಿಕೆ ಮಾಡಿರುವ ಕುರಿತು ಮಾಧ್ಯಮ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಅವರು, ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯನ್ನು ಹೆಚ್ಚಿಸಿದ್ದಾರೆ. ಈ ಮೂಲಕ ಜನಾಕ್ರೋಶ ಯಾತ್ರೆ ಎಂಬ ಪ್ರಹಸನವನ್ನು ಶುರುಮಾಡಿರುವ ರಾಜ್ಯದ ಬಿಜೆಪಿ (BJP) ನಾಯಕರಿಗೆ ಮುಟ್ಟಿ ನೋಡಿಕೊಳ್ಳುವಂತೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ಆರೇ ತಿಂಗಳಲ್ಲಿ ತಂದುಕೊಡ್ತೀನಿ – 2.45 ಲಕ್ಷ ರೂ. ಕದ್ದು ಪತ್ರ ಬರೆದಿಟ್ಟು ಹೋದ ಕಳ್ಳ!

ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ಜನವಿರೋಧಿ ಆರ್ಥಿಕ ನೀತಿಯೇ ಕಾರಣ ಎಂದು ನಾವು ಹೇಳುತ್ತಲೇ ಬಂದಿದ್ದೇವೆ. ಈ ಸತ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರೇ ದೇಶದ ಜನರ ಮುಂದೆ ಒಪ್ಪಿಕೊಂಡಿದ್ದಾರೆ. ಈಗ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ತೆರಿಗೆಯನ್ನು 2 ರೂ.ಗಳಷ್ಟು ಮತ್ತು ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು 50 ರೂ.ಯಷ್ಟು ಏರಿಕೆ ಮಾಡಿರುವ ಬಗ್ಗೆ ರಾಜ್ಯದ ಬಿಜೆಪಿ ನಾಯಕರ ಪ್ರತಿಕ್ರಿಯೆ ಏನು ಎಂಬುದನ್ನು ನಾನು ತಿಳಿದುಕೊಳ್ಳಬಯಸುತ್ತೇನೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಯುತ್ತಿದ್ದರೂ ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಒಂದೇ ಸಮನೆ ಏರಿಸುತ್ತಾ ಹೋಗಲು ಕಾರಣ ಏನು ಎಂದು ಬಿಜೆಪಿ ನಾಯಕರು ರಾಜ್ಯದ ಜನರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.

ಅಕ್ಕಿ, ಬೇಳೆ, ಮೀನು, ಮಾಂಸ, ತರಕಾರಿಯಿಂದ ಹಿಡಿದು ಹೋಟೆಲ್ ತಿಂಡಿಯವರೆಗೆ ಎಲ್ಲದರ ಬೆಲೆ ಏರಿಕೆಗೆ ಮೂಲ ಕಾರಣ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯನ್ನು ಹೆಚ್ಚಿಸುತ್ತಲೇ ಇರುವ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಎನ್ನುವುದು ಆರ್ಥಿಕ ವ್ಯವಹಾರದ ಸಾಮಾನ್ಯ ಜ್ಞಾನ ಇದ್ದವರಿಗೆ ಗೊತ್ತಿರುತ್ತದೆ. ಹೀಗಿದ್ದರೂ ಬೆಲೆ ಏರಿಕೆಯ ಪಾಪದ ಹೊರೆಯನ್ನು ನಮ್ಮ ತಲೆ ಮೇಲೆ ಕಟ್ಟಲು ಹೊರಟಿರುವ ಬಿಜೆಪಿ ನಾಯಕರ ಮುಖಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಮಸಿ ಬಳಿದಿದ್ದಾರೆ ಎಂದರು.

ಜನಾಕ್ರೋಶ ಯಾತ್ರೆ ಹೊರಟವರ ಮುಂದೆ ಈಗ ಇರುವುದು ಎರಡೇ ಎರಡು ಆಯ್ಕೆ. ಒಂದು ಅವರು ಪ್ರಧಾನ ಮಂತ್ರಿಯವರ ಮೇಲೆ ಒತ್ತಡ ಹೇರಿ ಕೇಂದ್ರ ಸರ್ಕಾರ ಹೆಚ್ಚಿಸಿರುವ ಬೆಲೆಯನ್ನು ಇಳಿಸುವಂತೆ ಮಾಡಬೇಕು. ಇಲ್ಲವೇ ಯಾತ್ರೆಯನ್ನು ಕೊನೆಗೊಳಿಸಿ ಗಂಟುಮೂಟೆ ಕಟ್ಟಿಕೊಂಡು ತಮ್ಮ ತಮ್ಮ ಮನೆಗೆ ಮರಳಬೇಕು. ಇದರ ಹೊರತಾಗಿ ಈ ಯಾತ್ರೆಯ ಪ್ರಹಸನವನ್ನು ಮುಂದುವರಿಸಿದರೆ ಜನರ ಆಕ್ರೋಶಕ್ಕೆ ತುತ್ತಾಗುವುದು ಖಂಡಿತ ಎಂದು ತಿಳಿಸಿದರು.ಇದನ್ನೂ ಓದಿ: ಮಂಡ್ಯ | ವಿಸಿ ನಾಲೆಯಲ್ಲಿ ಈಜಲು ಹೋಗಿದ್ದ ಒಂದೇ ಕುಟುಂಬದ ಮೂವರು ಮಕ್ಕಳ ದುರ್ಮರಣ

Share This Article