– ಭಯೋತ್ಪಾದನೆ & ಅದರ ಪೋಷಕರನ್ನು ಪ್ರತ್ಯೇಕವಾಗಿ ನೋಡಲ್ಲ ಎಂದ ಪ್ರಧಾನಿ
– ಆಪರೇಷನ್ ಸಿಂಧೂರ ಸ್ಮರಣೆ, ನಯಾ ಭಾರತ ಬಗ್ಗೆ ಮೋದಿ ಮಾತು
ನವದೆಹಲಿ: ನ್ಯೂಕ್ಲಿಯರ್ ಬೆದರಿಕೆಗೆ ಭಾರತ ಬಗ್ಗಲ್ಲ ಎಂದು ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ (PM Modi) ತಿರುಗೇಟು ನೀಡಿದ್ದಾರೆ.
79ನೇ ಸ್ವಾತಂತ್ರ್ಯೋತ್ಸವ (Independence Day 2025) ಹಿನ್ನೆಲೆ ಕೆಂಪು ಕೋಟೆಯಲ್ಲಿ ಶುಕ್ರವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮೋದಿ, ಪೆಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆಯಿತು. ಧರ್ಮ ಕೇಳಿ ಹತ್ಯೆ ಮಾಡಲಾಯಿತು. ಪತ್ನಿ ಎದುರು ಪತಿಯನ್ನು, ಮಗನ ಮುಂದೆ ತಂದೆಯನ್ನು ಹತ್ಯೆ ಮಾಡಲಾಯಿತು. ಇಡೀ ದೇಶದಲ್ಲಿ ಆಕ್ರೋಶ ಮಡುಗಟ್ಟಿತ್ತು. ಆಪರೇಷನ್ ಸಿಂಧೂರ ಈ ಆಕ್ರೋಶದ ಪ್ರತಿಬಿಂಬವಾಗಿತ್ತು. ನಾವು ನಮ್ಮ ಸೇನೆಗೆ ಪೂರ್ಣ ಸ್ವಾತಂತ್ರ‍್ಯ ನೀಡಿದೆವು. ದಾಳಿ, ಸಮಯ, ಗುರಿ ಎಲ್ಲವನ್ನು ನಿರ್ಧರಿಸಲು ಸ್ವಾತಂತ್ರ‍್ಯ ನೀಡಲಾಯಿತು. ಸೇನೆ ಹಿಂದೆ ಮಾಡದ ಸಾಹಸವನ್ನು ಮೊದಲ ಬಾರಿಗೆ ಮಾಡಿತು. ಪಾಕಿಸ್ತಾನದ ಒಳಗೆ ನುಗ್ಗಿ ದಾಳಿ ಮಾಡಿತು. ಪಾಕಿಸ್ತಾನದ ಆದ ನಷ್ಟ ಎಷ್ಟಿದೆ ಅಂದರೆ ನಿತ್ಯ ಹೊಸ ಮಾಹಿತಿ ಬರ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 79th Independence Day: ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ
ನಮ್ಮ ದೇಶ ದಶಕಗಳಿಂದ ಭಯೋತ್ಪಾದನೆಯನ್ನು ಸಹಿಸಿಕೊಂಡಿದೆ. ಈಗ ನಾವು ಹೊಸ ನಿರ್ಧಾರ ತೆಗೆದುಕೊಂಡಿದ್ದೇವೆ. ಭಯೋತ್ಪಾದನೆ ಮತ್ತು ಅದರ ಪೋಷಕರನ್ನು ಪ್ರತ್ಯೇಕವಾಗಿ ನೋಡುವುದಿಲ್ಲ. ಅವರು ಮಾನವತವಾದದ ವಿರುದ್ಧ ವ್ಯಕ್ತಿಗಳು. ನ್ಯೂಕ್ಲಿಯರ್ ಬೆದರಿಕೆಗೆ ಭಾರತ ಬಗ್ಗುವುದಿಲ್ಲ. ಇಂತಹ ಬೆದರಿಕೆ ಬಹಳ ವರ್ಷಗಳಿಂದ ನೋಡಿದ್ದೇವೆ. ಇದು ಮುಂದೆ ನಡೆಯುವುದಿಲ್ಲ. ಇಂತಹದೇ ಘಟನೆ ಮುಂದುವರಿದರೆ ಮತ್ತೆ ನಮ್ಮ ಸೇನೆ ಪ್ರತಿಕ್ರಿಯೆ ನಿರ್ಧಾರ ಮಾಡಲಿದೆ. ನಾವು ಸರಿಯಾದ ಪ್ರತಿಕ್ರಿಯೆ ನೀಡಲಿದ್ದೇವೆ. ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ. ಸಿಂಧೂ ಜಲ ಒಪ್ಪಂದದಿಂದ ಭಾರತಕ್ಕೆ ಅನ್ಯಾಯವಾಗಿದೆ. ಭಾರತದಲ್ಲಿ ಹರಿಯುವ ನದಿ ನಮ್ಮ ಬಳಕೆಗೆ ಸಿಗುತ್ತಿಲ್ಲ. ನಮ್ಮ ಜನರು ನೀರಿದ್ದರೂ ಬಾಯಾರಿಕೊಂಡಿದ್ದಾರೆ. ಏಕಮುಖ ನ್ಯಾಯವನ್ನು ಈ ಒಪ್ಪಂದದಲ್ಲಿ ಮಾಡಿದೆ. ಭಾರತದ ನೀರಿನ ಮೇಲಿನ ಅಧಿಕಾರ ಭಾರತ ಮತ್ತು ನಮ್ಮ ರೈತರದ್ದು. ರೈತರ ಹಿತ, ರಾಷ್ಟ್ರದ ಹಿತದ ಕಾರಣ ಈ ಒಪ್ಪಂದಕ್ಕೆ ನಮ್ಮ ಒಪ್ಪಿಗೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸ್ವಾತಂತ್ರ‍್ಯಕ್ಕಾಗಿ ಕೋಟ್ಯಂತರ ಜನರು ಯಾವುದೇ ಆಪೇಕ್ಷೆ ಇಲ್ಲದೇ ತಮ್ಮ ಜೀವನವನ್ನು ಬಲಿದಾನ ಮಾಡಿದರು. ಗುಲಾಮಿ ಸ್ಥಿತಿಯಿಂದ ಹೊರಬರಲು ಹೋರಾಟ ಮಾಡಿದರು. ಸ್ವಾತಂತ್ರ‍್ಯದ ಬಳಿಕ ಕೋಟ್ಯಂತರ ಜನರ ಹೊಟ್ಟೆ ತುಂಬಿಸುವುದು ಕಷ್ಟವಾಗಿತ್ತು. ನಮ್ಮ ರೈತರು ದೇಶದ ಜನರ ಹೊಟ್ಟೆ ತುಂಬಿಸಿದರು. ಆತ್ಮ ನಿರ್ಭರ್ ಘೋಷಣೆ ಕೇವಲ ಆರ್ಥಿಕತೆಗೆ ಸೀಮಿತವಾಗಿಲ್ಲ. ಆತ್ಮ ನಿರ್ಭರ್ ನಮ್ಮ ಸಾಮರ್ಥ್ಯದೊಂದಿಗೆ ಸಂಪರ್ಕಿಸಿದೆ. ಆತ್ಮ ನಿರ್ಭರ್ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 79ನೇ ಸ್ವಾತಂತ್ರ‍್ಯ ದಿನ – ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಲಿರುವ ಮೋದಿ
ಆಪರೇಷನ್ ಸಿಂಧೂರನಲ್ಲಿ ಭಾರತದ ಶಸ್ತ್ರಾಸ್ತ್ರಗಳು ಅದ್ಭುತವಾಗಿ ಕೆಲಸ ಮಾಡಿವೆ. ಶತ್ರು ದೇಶಗಳು ಇವು ಎಂತಹ ಶಸ್ತ್ರಾಸ್ತ್ರಗಳು ಅಂತ ಗೊಂದಲಕ್ಕೆ ಒಳಗಾದರು. ಯುದ್ಧದ ಸನ್ನಿವೇಶದಲ್ಲಿ ಶಸ್ತ್ರಾಸ್ತ್ರಗಳು ದೊರೆಯುವ ಗೊಂದಲ ಆತಂಕ ಇರುತ್ತದೆ. ಆದರೆ, ಭಾರತ ತನ್ನ ಶಸ್ತ್ರಾಸ್ತ್ರಗಳನ್ನು ತಾನೇ ಉತ್ಪಾದನೆ ಮಾಡುತ್ತಿದೆ ಎಂದು ಹೇಳಿದ್ದಾರೆ.