ಟ್ರಿನಿಡಾಡ್‌ನ ಸಾಂಪ್ರದಾಯಿಕ ಸೊಹರಿ ಎಲೆಯಲ್ಲಿ ಭೋಜನ ಸವಿದ ಪ್ರಧಾನಿ ಮೋದಿ

Public TV
2 Min Read

ನವದೆಹಲಿ: ಟ್ರಿನಿಡಾಡ್ ಮತ್ತು ಟೊಬಾಗೋ (Trinidad and Tobago) ದೇಶದ ಪ್ರವಾಸದಲ್ಲಿರುವ ಪ್ರಧಾನಿ ಮೋದಿ (PM Modi) ಅಲ್ಲಿನ ಸಾಂಪ್ರದಾಯಿಕ ಸೊಹರಿ ಎಲೆಯಲ್ಲಿ (Sohari Leaf) ಭೋಜನ ಸವಿದು ಆನಂದಿಸಿದ್ದಾರೆ.

ಸದ್ಯ ಐದು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ, ಘಾನಾ ಬಳಿಕ ಎರಡು ದಿನಗಳ ಕಾಲ ಟ್ರಿನಿಡಾಡ್ ಮತ್ತು ಟೊಬಾಗೋ ದೇಶಕ್ಕೆ ಭೇಟಿ ನೀಡಿದ್ದಾರೆ. ಇದೇ ವೇಳೆ ಟ್ರಿನಿಡಾಡ್ ಮತ್ತು ಟೊಬಾಗೋ ಪ್ರಧಾನಿ ಕಮಲಾ ಪ್ರಸಾದ್-ಬಿಸ್ಸೆಸ್ಸರ್ ಅವರಿಗೆ ಅವರಿಗೆ `ಮಹಾಕುಂಭದ ಜಲ’ ಹಾಗೂ `ರಾಮಮಂದಿರದ ಪ್ರತಿಕೃತಿ’ಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಜೊತೆಗೆ ರಾಮಮಂದಿರ ನಿರ್ಮಾಣ ಹಾಗೂ ದೇವಾಲಯದ ಮಹತ್ವವನ್ನು ಒತ್ತಿ ಹೇಳಿದರು.ಇದನ್ನೂ ಓದಿ: ಟ್ರಿನಿಡಾಡ್ ಪ್ರಧಾನಿಗೆ ಮಹಾಕುಂಭದ ಜಲ, ರಾಮಮಂದಿರದ ಪ್ರತಿಕೃತಿ ಉಡುಗೊರೆಯಾಗಿ ನೀಡಿದ ಮೋದಿ

ಬಳಿಕ ಪ್ರಧಾನಿ ಕಮಲಾ ಪ್ರಸಾದ್-ಬಿಸ್ಸೆಸ್ಸರ್ (Kamla Persad-Bissessar) ಅವರು ಆಯೋಜಿಸಿದ್ದ ಭೋಜನಕೂಟದಲ್ಲಿ ಮೋದಿ ಭಾಗಿಯಾಗಿ ಟ್ರಿನಿಡಾಡ್‌ನ ಸಾಂಪ್ರದಾಯಿಕ ಸೊಹರಿ ಎಲೆಯಲ್ಲಿ ಊಟ ಸವಿದು ಆನಂದಿಸಿದರು. ಈ ಕುರಿತು ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ಸಾಂಸ್ಕೃತಿ ಮಹತ್ವವನ್ನು ಹೊಂದಿದ್ದು, ಭಾರತೀಯರಿಗೆ ಇಷ್ಟವಾಗುತ್ತದೆ. ಇಲ್ಲಿ ಯಾವುದೇ ಹಬ್ಬ, ವಿಶೇಷ ಕಾರ್ಯಕ್ರಮಗಳಲ್ಲಿ ಈ ಎಲ್ಲೆಯಲ್ಲಿ ಊಟ ಬಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇನ್ನೂ ಘಾನಾ ದೇಶಕ್ಕೆ ಭೇಟಿ ನೀಡಿದ ವೇಳೆ ಅಲ್ಲಿನ ಅಧ್ಯಕ್ಷರಿಗೆ ಬೀದರ್‌ನ ಪ್ರಸಿದ್ಧ `ಬಿದ್ರಿವೇರ್ ಹೂದಾನಿ’ ಉಡುಗೊರೆಯಾಗಿ ನೀಡಿದ್ದಾರೆ.

ವಿದೇಶ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಘಾನಾ (Ghana) ಅಧ್ಯಕ್ಷರಿಗೆ ಬೀದರ್‌ನಲ್ಲಿ (Bidar) ಸಿದ್ಧವಾದ `ಬಿದ್ರಿವೇರ್ ಹೂದಾನಿ’ಯನ್ನು ಉಡುಗೊರೆಯಾಗಿ ನೀಡಿದರು. ಮೂವತ್ತು ವರ್ಷಗಳ ಬಳಿಕ ಭಾರತದ ಪ್ರಧಾನಿ ಘಾನಾ ಪ್ರವಾಸ ಕೈಗೊಂಡ ಸವಿನೆನಪಿಗೆ ಭಾರತ ಮತ್ತು ಘಾನಾ ದೇಶಗಳ ಸಾಂಸ್ಕೃತಿಕ ಸಂಬಂಧ ಬೆಸೆಯುವ ಪ್ರತೀಕವಾಗಿ ಈ ಉಡುಗೊರೆ ನೀಡಿದ್ದಾರೆ. ಸುಮಾರು 500 ವರ್ಷಗಳಷ್ಟು ಪ್ರಾಚೀನ ಕರಕುಶಲ ಕಲೆಯಲ್ಲಿ ಅರಳಿದ ಜಿಂಕ್-ತಾಮ್ರ-ಬೆಳ್ಳಿ ಸೊಬಗುಳ್ಳ `ಬಿದ್ರಿವೇರ್ ಹೂದಾನಿ'(ಹೂ ಕುಂಡ) ನೀಡಿ ಭಾರತದ ಪ್ರಾಚೀನತೆ ಜೊತೆಗೆ ಕರ್ನಾಟಕದ ಕೌಶಲ್ಯಸಿರಿಯನ್ನು ಪಸರಿಸಿದರು. ಇಂತಹ ವಿಶಿಷ್ಟ ಕಾಣಿಕೆ ನೀಡಿದ ಪ್ರಧಾನಿ ಮೋದಿ ಘಾನಾ ಅಧ್ಯಕ್ಷ ದಂಪತಿಯನ್ನು ಖುಷಿಪಡಿಸಿದರು.

ಪ್ರಧಾನಿ ಮೋದಿ ಅವರು ಕರ್ನಾಟಕದ ಬೀದರ್‌ನಿಂದ ತರಿಸಿಕೊಂಡಿದ್ದ ಈ ಬಿದ್ರಿವೇರ್ ಹೂದಾನಿ ಕಪ್ಪು ವರ್ಣರಂಜಿತವಾಗಿದ್ದು, ಬೆಳ್ಳಿಯ ಕುಸುರಿ ಕೂಡ ಹೊಂದಿದೆ. ಭಾರತದ ಪ್ರಸಿದ್ಧ ಲೋಹದ ಕರಕುಶಲತೆಯನ್ನು ಪ್ರದರ್ಶಿಸುತ್ತದೆ. ಶತಮಾನಗಳಷ್ಟು ಹಳೆಯದಾದರೂ ವಿಶಿಷ್ಟ ತಾಂತ್ರಿಕತೆ, ಕುಶಲಕರ್ಮಿಗಳ ಆಕರ್ಷಕ ಕೌಶಲ್ಯ ಅಡಕವಾಗಿದೆ. ಸೌಂದರ್ಯ-ಸಮೃದ್ಧಿಯನ್ನು ಸಂಕೇತಿಸುವ ಹೂವಿನ ವಿನ್ಯಾಸದಿಂದ ಕೆತ್ತಲಾಗಿದೆ.ಇದನ್ನೂ ಓದಿ: ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗಲ್ಲ: ಡಿ.ಕೆ.ಶಿವಕುಮಾರ್

Share This Article