ಪ್ರಧಾನಿ ಮೋದಿಗೆ ಗಯಾನಾದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ

By
3 Min Read

ಜಾರ್ಜ್‌ಟೌನ್‌: ಗಯಾನಾ (Guyana) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಗೆ (PM Narendra Modi) ಗಯಾನಾ ಸರ್ಕಾರ ಅತ್ಯುನ್ನತ ಗೌರವವಾದ `ದಿ ಆರ್ಡರ್ ಆಫ್ ಎಕ್ಸಲೆನ್ಸ್’ ಪ್ರಶಸ್ತಿ ನೀಡಿ ಗೌರವಿಸಿದೆ.

ಮೂರು ರಾಷ್ಟ್ರಗಳ ಪ್ರವಾಸದಲ್ಲಿರುವ ಮೋದಿ ಬುಧವಾರ (ನ.20) ಗಯಾನಾಕ್ಕೆ ಭೇಟಿ ನೀಡಿದ್ದು, 56 ವರ್ಷಗಳ ಬಳಿಕ ಭಾರತೀಯ ಪ್ರಧಾನಿಯೊಬ್ಬರು ನೀಡಿದ ಮೊದಲ ಭೇಟಿ ಇದಾಗಿದೆ.ಇದನ್ನೂ ಓದಿ: ಪ್ರಧಾನಿ ಮೋದಿಗೆ ನೈಜೀರಿಯಾದ ಎರಡನೇ ಅತ್ಯುನ್ನತ ರಾಷ್ಟ್ರೀಯ ಗೌರವ

ಇಂದು (ನ.21) ಜಾರ್ಜ್‌ಟೌನ್‌ನ (Georgetown) ಸ್ಟೇಟ್ ಹೌಸ್‌ನಲ್ಲಿ ನಡೆಯುತ್ತಿರುವ ಭಾರತ-ಕೆರಕಮ್ (ಕೆರಿಬಿಯನ್ ಸಮುದಾಯ) ಶೃಂಗಸಭೆಯಲ್ಲಿ ಗಯಾನಾದ ಅಧ್ಯಕ್ಷ ಮೊಹಮದ್ ಇರ್ಫಾನ್ ಅಲಿ ಅವರು ಪ್ರಧಾನಿ ಮೋದಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಗಯಾನಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದವರ ಪೈಕಿ ಪ್ರಧಾನಿ ಮೋದಿ ನಾಲ್ಕನೇ ವಿದೇಶಿ ನಾಯಕರಾಗಿದ್ದಾರೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೋದಿ, ಗಯಾನಾಕ್ಕೆ ನೀಡಿದ ಈ ಭೇಟಿಯು ಭಾರತದ ಜೊತೆಗಿನ ಸಂಬಂಧವನ್ನು ಬಲಪಡಿಸುತ್ತದೆ. ಅಧ್ಯಕ್ಷ ಇರ್ಫಾನ್ ಅಲಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದು, ಈ ಪ್ರಶಸ್ತಿ 140 ಕೋಟಿ ಭಾರತೀಯರಿಗೆ ಸಲ್ಲುವ ಗೌರವವಾಗಿದೆ ಎಂದು ತಿಳಿಸಿದರು.

ಅಧ್ಯಕ್ಷ ಇರ್ಫಾನ್ ಅಲಿ ಅವರೊಂದಿಗಿನ ಈ ಸಂಬಂಧ ಭಾರತ ಹಾಗೂ ಗಯಾನಾ ದೇಶವನ್ನು ಎತ್ತರಕ್ಕೆ ಕೊಂಡೊಯ್ಯಲು ಸಹಕಾರಿಯಾಗುತ್ತದೆ. ಭಾರತವು ಗಯಾನಾದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಲು ಸಿದ್ಧವಾಗಿದೆ. ಅಸಂಖ್ಯಾತ ಜಲಪಾತಗಳು ಮತ್ತು ಸರೋವರಗಳಿಂದ ಕೂಡಿರುವ ಗಯಾನಾವನ್ನು `ದಿ ಲ್ಯಾಂಡ್ ಆಫ್ ಮೆನಿ ವಾಟರ್ಸ್’ ಎಂದು ಕರೆಯಲಾಗುತ್ತದೆ. ಗಯಾನಾ ನದಿಗಳು ಇಲ್ಲಿನ ಜನರ ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಹಾಗೆಯೇ ಭಾರತದ ಗಂಗಾ, ಯಮುನಾ ಮತ್ತು ಬ್ರಹ್ಮಪುತ್ರ ನದಿಗಳು ನಮ್ಮ ಪ್ರಾಚೀನ ನಾಗರಿಕತೆಯ ಜನ್ಮಸ್ಥಳವಾಗಿದೆ. ಇದು ಭಾರತ ಮತ್ತು ಗಯಾನಾ ನಡುವೆ ಸಾಮ್ಯತೆಗಳ ಅನೇಕ ಉದಾಹರಣೆಗಳಿವೆ ಎಂದು ತಿಳಿಸಿದರು.

ಇತ್ತೀಚಿಗಷ್ಟೇ ಪ್ರಧಾನಿ ಮೋದಿಗೆ ನೈಜೀರಿಯಾ ದೇಶ ತನ್ನ ಅತ್ಯುನ್ನತ `ದಿ ಗ್ರ್ಯಾಂಡ್‌ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್’ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಇದೀಗ ಗಯಾನಾ ಸರ್ಕಾರ ಪ್ರಶಸ್ತಿಯನ್ನು ನೀಡಿದ್ದು, ದೇಶವೊಂದು ನೀಡುತ್ತಿರುವ 18ನೇ ಅಂತಾರಾಷ್ಟ್ರೀಯ ಪ್ರಶಸ್ತಿ ಇದಾಗಿದೆ.

ಪ್ರಧಾನಿ ಮೋದಿ ಸ್ವೀಕರಿಸಿದ ಗೌರವಗಳ ಪಟ್ಟಿ:
ಗಯಾನಾ: 2024ರಲ್ಲಿ ದಿ ಆರ್ಡರ್ ಆಫ್ ಎಕ್ಸಲೆನ್ಸ್’
ಡೊಮಿನಿಕಾ: 2024ರಲ್ಲಿ ಡೊಮಿನಿಕಾ ಅವಾರ್ಡ್ ಆಫ್ ಆನರ್
ನೈಜಿರೀಯಾ: 2024ರಲ್ಲಿ ದಿ ಗ್ರ್ಯಾಂಡ್‌ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್’
ರಷ್ಯಾ: 2024ರಲ್ಲಿ ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ಪ್ರಶಸ್ತಿ
ಭೂತಾನ್: 2024ರಲ್ಲಿ ಡ್ರುಕ್ ಗಯಾಲ್ಪೋ ಆದೇಶ
ಫ್ರಾನ್ಸ್: 2023ರಲ್ಲಿ ಲೀಜನ್ ಆಫ್ ಆನರ್ ಗ್ರ್ಯಾಂಡ್‌ ಕ್ರಾಸ್
ಈಜಿಪ್ಟ್: 2023ರಲ್ಲಿ ಆರ್ಡರ್ ಆಫ್ ನೈಲ್
ಪಪುವಾ ನ್ಯೂಗಿನಿಯಾ: 2023ರಲ್ಲಿ ಆರ್ಡರ್ ಆಫ್ ಲೋಗೊಹುವಿನ ಗ್ರ್ಯಾಂಡ್‌ ಕಂಪ್ಯಾನಿಯನ್
ಫಿಜಿ: 2023ರಲ್ಲಿ ಆರ್ಡರ್ ಆಫ್ ಫಿಜಿಯ ಒಡನಾಡಿ
ಪಲಾವ್: 2023ರಲ್ಲಿ ಎಬಾಕಲ್ ಪ್ರಶಸ್ತಿ
ಗ್ರೀಸ್: 2023ರಲ್ಲಿ ಆರ್ಡರ್ ಆಪ್ ಆನರ್
ಯುಎಸ್: 2020 ರಲ್ಲಿ ಲೀಜನ್ ಆಫ್ ಮೆರಿಟ್
ಮಾಲ್ಡೀವ್ಸ್: 2019ರಲ್ಲಿ ನಿಶಾನ್ ಇಝುದ್ದೀನ್ ಆಳ್ವಿಕೆ
ಯುಎಇ: 2019ರಲ್ಲಿ ಆರ್ಡರ್ ಆಫ್ ಜಾಯೆದ್ ಪ್ರಶಸ್ತಿ
ಬಹ್ರೇನ್: 2019ರಲ್ಲಿ ಕಿಂಗ್ ಹಮದ್ ಆರ್ಡರ್ ಆಫ್ ದಿ ರಿನೈಸಾನ್ಸ್
ಪ್ಯಾಲೆಸ್ಟೈನ್: 2018ರಲ್ಲಿ ಪ್ಯಾಲೆಸ್ಟೈನ್ ರಾಜ್ಯದ ಗ್ರ್ಯಾಂಡ್‌ ಕಾಲರ್ ಪ್ರಶಸ್ತಿ
ಅಫ್ಘಾನಿಸ್ತಾನ: 2016ರಲ್ಲಿ ಸ್ಟೇಟ್ ಆರ್ಡರ್ ಆಫ್ ಗಾಜಿ ಅಮೀರ್ ಅಮಾನುಲ್ಲಾ ಖಾನ್ ಪ್ರಶಸ್ತಿ
ಸೌದಿ ಅರೇಬಿಯಾ: 2016ರಲ್ಲಿ ಕಿಂಗ್ ಅಬ್ದುಲ್ ಅಜೀಜ್ ಸಾಶ್.ಇದನ್ನೂ ಓದಿ: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿಕೆ

Share This Article