ಮೋದಿ ಹತ್ಯೆಗೆ ಸಂಚು: ವರವರ ರಾವ್ ಬಂಧನಕ್ಕೆ ದೆಹಲಿ ಹೈಕೋರ್ಟ್ ತಡೆಯಾಜ್ಞೆ

Public TV
1 Min Read

ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರಸಂ ಸಂಸ್ಥಾಪಕ ಮತ್ತು ಕ್ರಾಂತಿಕಾರಿ ಬರಹಗಾರ ವರವರ ರಾವ್ ಅವರನ್ನು ಪುಣೆ ಪೊಲೀಸರು ಬಂಧಿಸಿದ್ದು, ಈಗ ದೆಹಲಿ ಹೈಕೋರ್ಟ್ ಬಂಧನಕ್ಕೆ ತಡೆಯಾಜ್ಞೆ ನೀಡಿದೆ.

ಇಂದು ಹೈದರಾಬಾದ್‍ಗೆ ಬಂದಿದ್ದ ಪುಣೆ ಪೊಲೀಸ್ ತಂಡವು, ಸ್ಥಳೀಯ ಪೊಲೀಸರ ಸಹಾಯ ಪಡೆದು, ನಗರದ ವಿವಿಧೆಡೆ ವರವರ ರಾವ್ ಪತ್ತೆಗಾಗಿ ಶೋಧಕಾರ್ಯ ನಡೆಸಿದ್ದರು. ಚಿಕ್ಕಡ್‍ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಜವಾಹರ್ ನಗರದಲ್ಲಿರುವ ವರವರ ರಾವ್ ಮನೆಗೆ 20ಕ್ಕೂ ಹೆಚ್ಚು ಪುಣೆ ಮಫ್ತಿ ವೇಷದ ಪೊಲೀಸರು ಭೇಟಿ ನೀಡಿದ್ದರು. ಈ ವೇಳೆ ಕೆಲ ಹೊತ್ತು ರಾವ್ ಅವವನ್ನು ವಿಚಾರಣೆಗೆ ಒಳಪಡಿಸಿ ಬಳಿಕ ಬಂಧಿಸಿದ್ದರು.

ವರವರ ರಾವ್ ಹಾಗೂ ಕುಟುಂಬಸ್ಥರ ಮನೆ ಮೇಲೆ ಅಷ್ಟೇ ಅಲ್ಲದೆ ಪತ್ರಕರ್ತರಾದ ಕೆ.ವಿ.ಕುಮಾರನಾಥ್, ಕ್ರಾಂತಿ ತೆಕುಲ, ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕೆ.ಸತ್ಯನಾರಾಯಣ ಅವರ ಮನೆ ಮೇಲೂ ಪೊಲೀಸರು ದಾಳಿ ಮಾಡಿ, ಶೋಧ ನಡೆಸಿದ್ದಾರೆ ಎಂದು ವರದಿಯಾಗಿದೆ.

ಏನಿದು ಪ್ರಕರಣ?
ಪ್ರಧಾನಿ ನರೇಂದ್ರ ಮೋದಿ ಹತ್ಯೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು ಚುರುಕು ಕಾರ್ಯಾಚರಣೆ ನಡೆಸಿದ್ದರು. ಇತ್ತೀಚೆಗೆ ಮಾನವಹಕ್ಕು ಕಾರ್ಯಕರ್ತ ರೋನಾ ಜಾಕೋಬ್ ವಿಲ್ಸನ್ ಅವರ ದೆಹಲಿಯ ಮನೆಯಲ್ಲಿ ಕೆಲವು ಪತ್ರಗಳನ್ನು ವಶಕ್ಕೆ ಪಡೆದಿದ್ದರು. ಆ ಪತ್ರಗಳಲ್ಲಿ ವರವರ ರಾವ್ ಹೆಸರು ಉಲ್ಲೇಖವಾಗಿದೆ. ಅವರನ್ನು ಬಂಧಿಸಲು ಅನುಮತಿ ನೀಡುವಂತೆ ಕೋರ್ಟ್‍ಗೆ ಮನವಿ ಮಾಡಿಕೊಂಡಿದ್ದರು. ಇನ್ನು ರಾವ್ ನಕ್ಸಲ್ ಸಂಘಟನೆಗಳಿಗೆ ಹಾಗೂ ಅವರು ನಡೆಸುತ್ತಿರುವ ದಾಳಿಗೆ ಆರ್ಥಿಕ ನೆರವು ನೀಡುತ್ತಿದ್ದರು ಎನ್ನುವ ಆರೋಪವೂ ಕೇಳಿ ಬಂದಿದೆ.

ವರವರ ರಾವ್ ಬಂಧನಕ್ಕೆ ಖಂಡಿಸಿ ಎಡಪಕ್ಷಗಳ ನಾಯಕರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *