ʻಗ್ರ್ಯಾಂಡ್ ಪ್ರಿಕ್ಸ್ʼಪ್ರಶಸ್ತಿ ಗೆದ್ದು ಇತಿಹಾಸ ಬರೆದ ನಿರ್ದೇಶಕಿ ಪಾಯಲ್ ಕಪಾಡಿಯಾಗೆ ಮೋದಿ ಅಭಿನಂದನೆ!

Public TV
3 Min Read

– ಜಾಗತಿಕ ವೇದಿಕೆಯಲ್ಲಿ ಭಾರತದ ಪ್ರತಿಭೆ ಬೆಳಗುತ್ತಿದೆ ಎಂದು ಪ್ರಧಾನಿ ಶ್ಲಾಘನೆ

ಪ್ಯಾರಿಸ್‌: ಕಾನ್-2024 ಚಲನಚಿತ್ರೋತ್ಸವದಲ್ಲಿ (77th Cannes Film Festival) ಈ ಬಾರಿ ಭಾರತೀಯರು ಸದ್ದು ಮಾಡುತ್ತಿದ್ದಾರೆ. ಅಂದ ಚೆಂದದ ಉಡುಗೆಗಳನ್ನ ತೊಟ್ಟು ಕೈ ಬೀಸುತ್ತಾ ಗಮನ ಸೆಳೆಯುವುದು ಕಾಮನ್‌ ಆಗಿತ್ತು. ಆದ್ರೆ ಈ ಸಲ ಸೆಲೆಬ್ರಿಟಿಗಳ ಬೆಡಗು ಬಿನ್ನಾಣ ಪ್ರದರ್ಶನವಷ್ಟೇ ಅಲ್ಲ, ಪ್ರತಿಷ್ಠಿತ ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಳ್ಳುವ ಮೂಲಕ ಭಾರತೀಯರು ಪ್ರಶಂಸೆಗೆ ಪಾತ್ರವಾಗುತ್ತಿದ್ದಾರೆ.

ನಿರ್ದೇಶಕಿ ಪಾಯಲ್ ಕಪಾಡಿಯಾ (Payal Kapadia) ಅವರು 77ನೇ ಕಾನ್ ಚಲನಚಿತ್ರೋತ್ಸವದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಮಲಯಾಳಂ ಹಿಂದಿ ಭಾಷೆಯ ʻಆಲ್ ವಿ ಇಮ್ಯಾಜಿನ್ ಆಸ್ ಲೈಟ್ʼ (ALL WE IMAGINE AS LIGHT) ಚಲನ ಚಿತ್ರಕ್ಕಾಗಿ ಅವರು ದೇಶದ ಮೊದಲ ಹಾಗೂ ಚಿತ್ರೋತ್ಸವದ 2ನೇ ಅತ್ಯುನ್ನತ ʻಗ್ರ್ಯಾಂಡ್ ಪ್ರಿಕ್ಸ್ʼ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇದನ್ನೂ ಓದಿ: ಬಾಲಿವುಡ್‌ನಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೇಟ್ ಇದೆ- ಸ್ಫೋಟಕ ಹೇಳಿಕೆ ನೀಡಿದ ಶ್ರೀದೇವಿ ಪುತ್ರಿ

ಕಳೆದ 30 ವರ್ಷಗಳಲ್ಲಿ ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಸಿನಿಮಾ ಇದಾಗಿದ್ದು, ಹೊಸ ಇತಿಹಾಸ ಬರೆದಿದೆ. ಮುಖ್ಯ ಸ್ಪರ್ಧೆಯಲ್ಲಿ ಪ್ರದರ್ಶಿಸಲಾದ ಈ ಚಿತ್ರವನ್ನು ಮಹಿಳೆಯೇ ನಿರ್ದೇಶಿಸಿರುವುದು (Indian Women Filmmaker) ಮತ್ತೊಂದು ವಿಶೇಷವಾಗಿದೆ. ಸಿನಿ ಪ್ರದರ್ಶನವು ಪ್ರೇಕ್ಷಕರಿಂದಲೂ ವ್ಯಾಪಕ ಮೆಚ್ಚುಗೆ ಗಳಿಸಿದೆ. ಪ್ರಶಸ್ತಿ ವೇಳೆ 8 ನಿಮಿಷಗಳ ಕಾಲ ಅಭಿಮಾನಿಗಳು ಚಪ್ಪಾಳೆ ಮಳೆಗರೆದಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ಕಪಾಡಿಯಾಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಪ್ರಧಾನಿ ಮೋದಿ (PM Modi) ಸಹ ಎಕ್ಸ್‌ ಖಾತೆ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಸ್ಮೈಲ್ ಗುರು ರಕ್ಷಿತ್ ಚೊಚ್ಚಲ ಚಿತ್ರಕ್ಕೆ ಅನುರಾಗ್, ಮಿಥುನ್ ಸಾಥ್

ಪಾಯಲ್‌ ಕಪಾಡಿಯಾ ಅವರ ʻಆಲ್ ವಿ ಇಮ್ಯಾಜಿನ್ ಆಸ್ ಲೈಟ್ʼ ಸಿನಿಮಾಗಾಗಿ 77ನೇ ಕಾನ್‌ ಚಲನಚಿತ್ರೋತ್ಸವದಲ್ಲಿ ಗ್ರ್ಯಾಂಡ್ ಪ್ರಿಕ್ಸ್ ಸಿಕ್ಕಿದೆ. ಈ ಐತಿಹಾಸಿಕ ಸಾಧನೆಗಾಗಿ ಭಾರತವೇ ಹೆಮ್ಮೆಪಡುತ್ತದೆ. ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ (FTII) ಹಳೆಯ ವಿದ್ಯಾರ್ಥಿನಿಯೂ ಆಗಿರುವ ಕಪಾಡಿಯ ಅವರ ಗಮನಾರ್ಹ ಪ್ರತಿಭೆಯು ಜಾಗತಿಕ ವೇದಿಕೆಯಲ್ಲಿ ಬೆಳಗುತ್ತಲೇ ಇದೆ. ಇದು ಭಾರತದಲ್ಲಿನ ಶ್ರೀಮಂತ ಸೃಜನಶೀಲತೆಯ ಒಂದು ನೋಟವನ್ನೂ ಸಹ ನೀಡುತ್ತದೆ. ಈ ಪ್ರತಿಷ್ಠಿತ ಪುರಸ್ಕಾರವು ಆಕೆಯ ಅಸಾಧಾರಣ ಕೌಶಲ್ಯಗಳನ್ನು ಗೌರವಿಸುವುದಲ್ಲದೇ ಹೊಸ ಪೀಳಿಗೆಯ ಭಾರತೀಯ ಚಲನಚಿತ್ರ ನಿರ್ಮಾಪಕರನ್ನೂ ಪ್ರೇರೇಪಿಸುತ್ತದೆ ಎಂದು ಎಕ್ಸ್‌ ಖಾತೆಯಲ್ಲಿ ಶ್ಲಾಘಿಸಿದ್ದಾರೆ.

Share This Article