ನ್ಯೂಯಾರ್ಕ್‌ನಲ್ಲಿ ಝೆಲೆನ್ಸ್ಕಿ ಭೇಟಿಯಾದ ಮೋದಿ – ಶಾಂತಿಮಂತ್ರ ಪಠಿಸಿದ ಪ್ರಧಾನಿ

By
2 Min Read

ವಾಷಿಂಗ್ಟನ್‌: ವಿಶ್ವಸಂಸ್ಥೆಯ ಶೃಂಗಸಭೆ (UNGN) ಹಿನ್ನೆಲೆ ಅಮೆರಿಕಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನ್ಯೂಯಾರ್ಕ್‌ನಲ್ಲಿ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಅವರನ್ನ ಭೇಟಿಯಾಗಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಇದು ಮೋದಿ-ಝಲೆನ್ಸ್ಕಿ ನಡುವಿನ 3ನೇ ಭೇಟಿಯಾಗಿದೆ.

ಸದ್ಯ ಶೃಂಗ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಕೂಡ ಉಪಸ್ಥಿತರಿದ್ದು, ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಮಾರ್ಗಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಗುತ್ತಿದೆ. ಇದೇ ವೇಳೆ ಉಕ್ರೇನ್‌ನಲ್ಲಿ (Ukraine) ನಡೆಯುತ್ತಿರುವ ಸಂಘರ್ಷವನ್ನು ಆದಷ್ಟು ಬೇಗನೇ ಇತ್ಯರ್ಥಗೊಳಿಸಲು, ಪ್ರದೇಶದಲ್ಲಿ ಶಾಂತಿ ನೆಲೆಸಲು ಮತ್ತು ಸ್ಥಿರತೆ ಕಾಪಾಡಲು ಮಾಡುತ್ತಿರುವ ಭಾರತದ ಪ್ರಯತ್ನಗಳನ್ನು ಝಲೆನ್ಸ್ಕಿ ಶ್ಲಾಘಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ, ನ್ಯೂಯಾರ್ಕ್‌ನಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿ‌ರ್ ಝಲೆನ್‌ಸ್ಕಿ ಅವರನ್ನು ಭೇಟಿಯಾಗಿದ್ದೇನೆ. ಉಭಯ ದೇಶಗಳ ನಡುವಣ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಳೆದ ತಿಂಗಳ ಉಕ್ರೇನ್ ಭೇಟಿಯ ವೇಳೆ ನಡೆದ ಮಾತುಕತೆಯನ್ನು ಫಲಪ್ರದವಾಗಿ ಜಾರಿಗೊಳಿಸಲು ಬದ್ಧರಾಗಿದ್ದೇವೆ. ಉಕ್ರೇನ್‌ನಲ್ಲಿ ಸಂಘರ್ಷಕ್ಕೆ ಆದಷ್ಟು ಬೇಗನೇ ಪರಿಹಾರ ಕಂಡುಕೊಳ್ಳುವುದು ಮತ್ತು ಶಾಂತಿ ಹಾಗೂ ಸ್ಥಿರತೆಯ ಮರುಸ್ಥಾಪನೆಗೆ ಭಾರತದ ಬೆಂಬಲವನ್ನು ಪುನರುಚ್ಚರಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಉಕ್ರೇನ್ ಸಂಘರ್ಷಕ್ಕೆ ಶಾಶ್ವತ ಮತ್ತು ಶಾಂತಿಯುತ ಪರಿಹಾರಕ್ಕೆ ನೆರವಾಗಲು ಬೇಕಾದ ಎಲ್ಲ ನೆರವು ನೀಡಲು ಭಾರತ ತನ್ನ ಪ್ರಯತ್ನಿಸುತ್ತಿದೆ. ಸಂಘರ್ಷವನ್ನು ಮಾತುಕತೆಯ ಮೂಲಕ ಶಾಂತಿಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಸ್ಪಷ್ಟ, ಸ್ಥಿರ ಮತ್ತು ರಚನಾತ್ಮಕ ನಿಲುವನ್ನು ಭಾರತ ಪುನರುಚ್ಛರಿಸಿದೆ. ಮತ್ತೊಂದೆಡೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಝಲೆನ್‌ಸ್ಕಿ, ಭಾರತ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಈ ವರ್ಷ 3ನೇ ಬಾರಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದೇನೆ. ಉಭಯ ದೇಶಗಳ ನಡುವಣ ಬಾಂಧವ್ಯವನ್ನು ಸಕ್ರಿಯವಾಗಿ ವೃದ್ಧಿಗೊಳಿಸಲಾಗುತ್ತಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಗಟ್ಟಿಗೊಳಿಸಲು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಕಳೆದ ಆಗಸ್ಟ್‌ 23ರಂದು ಪ್ರಧಾನಿ ಮೋದಿ ಉಕ್ರೇನ್‌ಗೆ ಭೇಟಿ ನೀಡಿದ್ದರು. 1992 ರಲ್ಲಿ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ ನಂತರ ಉಕ್ರೇನ್‌ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಅಲ್ಲಿಯೂ ಸಹ ಶಾಂತಿಯುತ ಮಾತುಕತೆ ಮೂಲಕ ಸಂಘರ್ಷ ಬಗೆಹರಿಸುವ ಪ್ರಯತ್ನಗಳ ಬಗ್ಗೆ ಚರ್ಚಿಸಿದ್ದರು.

Share This Article