ಸಿಬಿಐ ನಿರ್ದೇಶಕ ಸ್ಥಾನದಿಂದ ಅಲೋಕ್ ವರ್ಮಾ ವಜಾ

Public TV
2 Min Read

ನವದೆಹಲಿ: ಸಿಬಿಐ ನಿರ್ದೇಶಕ ಸ್ಥಾನದಿಂದ ಅಲೋಕ್ ವರ್ಮಾ ಅವರನ್ನು ಉಚ್ಛಾಟಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತಾಧಿಕಾರ ಸಮಿತಿಯ ಮಹತ್ವದ ನಿರ್ಧಾರ ಕೈಗೊಂಡಿದೆ.

ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎ.ಕಿ. ಸಿಕ್ರಿ., ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಇರುವ ಉನ್ನತಾಧಿಕಾರ ಸಮಿತಿ ಗುರುವಾರ ರಾತ್ರಿ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದೆ.

ಅಲೋಕ್ ವರ್ಮಾ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಸಂಬಂಧ ತನಿಖೆ ನಡೆಸಿದ್ದ ಸಿವಿಸಿ ವರದಿಯ ಆಧಾರದ ಮೇಲೆ ವಜಾ ಮಾಡಲಾಗಿದೆ. 2 ಗಂಟೆಗಳ ಚರ್ಚೆಯಲ್ಲಿ ಅಲೋಕ್ ವಜಾಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಕಾರಣಗಳನ್ನು ಕೇಳಿದ್ದಾಗಿಯೂ, ಅವರಿಗೆ ಜಸ್ಟೀಸ್ ಎ.ಕೆ. ಸಿಕ್ರಿ ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿದೆ.

ಅಲೋಕ್ ವರ್ಮಾ ಅವರನ್ನು ದೆಹಲಿ ಅಗ್ನಿಶಾಮಕ ದಳ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಅಲೋಕ್ ವರ್ಮಾ ಮತ್ತು ರಾಕೇಶ್ ಅಸ್ಥಾನ ನಡುವಿನ ವೈಮನಸ್ಸು ಬೀದಿಗೆ ಬಂದ ಹಿನ್ನೆಲೆಯಲ್ಲಿ ಅವರಿಬ್ಬರನ್ನೂ ಕೇಂದ್ರ ಸರ್ಕಾರ ಕಡ್ಡಾಯ ರಜೆ ನೀಡಿ ಕಳುಹಿಸಿತ್ತು.

ಸುಪ್ರೀಂ ಆದೇಶದಿಂದ ಬುಧವಾರ ಮರು ನೇಮಕವಾಗಿದ್ದ ಅಲೋಕ್ ಕುಮಾರ್, ಹಂಗಾಮಿ ಮುಖ್ಯಸ್ಥರಾಗಿದ್ದ ನಾಗೇಶ್ವರ ರಾವ್ ನೇಮಕಾತಿಯನ್ನು ರದ್ದುಗೊಳಿಸಿ, ಆಯಕಟ್ಟಿನ ಸ್ಥಳಕ್ಕೆ ತಮ್ಮ ಆಪ್ತರನ್ನು ನೇಮಿಸಿಕೊಂಡಿದ್ದರು. ಈಗ ಮತ್ತೆ ನಾಗೇಶ್ವರ ರಾವ್ ಹಂಗಾಮಿ ಮುಖ್ಯಸ್ಥರಾಗಿದ್ದಾರೆ. ಇದೇ 31ಕ್ಕೆ ವರ್ಮಾ ಅವರ ಅಧಿಕಾರವಧಿ ಅಂತ್ಯವಾಗಲಿದ್ದು, ಭ್ರಷ್ಟಾಚಾರ ಆರೋಪದಲ್ಲಿ ವಜಾಗೊಂಡ ಮೊದಲಿಗರಾಗಿದ್ದಾರೆ. ಇದನ್ನು ಓದಿ : ಸಿಬಿಐ ಅಧಿಕಾರಿಗಳಿಗೆ ಕಡ್ಡಾಯ ರಜೆ: ಕಿತ್ತಾಟ ಆರಂಭವಾಗಿದ್ದು ಹೇಗೆ? ಇಬ್ಬರ ಮೇಲಿರುವ ಆರೋಪ ಏನು?

ಏನಿದು ಪ್ರಕರಣ?:
ಅಲೋಕ್ ವರ್ಮಾ ಮತ್ತು ಸಿಬಿಐನ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ನಡುವಿನ ಆಂತರಿಕ ಕಲಹ ಉಂಟಾಗಿ, ಇಬ್ಬರ ಜಗಳ ಭಾರೀ ಚರ್ಚೆಗೆ ಕಾರಣವಾಗಿತ್ತು. ಒಬ್ಬರ ಮೇಲೆ ಒಬ್ಬರು ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದರು. ಈ ಇಬ್ಬರು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು. ಇದರಿಂದಾಗಿ ಅವರನ್ನ 2018ರ ಅಕ್ಟೋಬರ್ 23 ರಂದು ಕಡ್ಡಾಯ ರಜೆಯ ಮೇಲೆ ಕೇಂದ್ರ ಸರ್ಕಾರ ಕಳುಹಿಸಿತ್ತು. ಇದನ್ನು ವಿರೋಧಿಸಿ ಅಲೋಕ್ ವರ್ಮಾ ಕಾನೂನು ಹೋರಾಟ ನಡೆಸಿದ್ದರು.

ಪ್ರಕರಣದ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅಲೋಕ್ ವರ್ಮಾ ವಿರುದ್ಧದ ಆರೋಪಗಳ ಕುರಿತು ಕೇಂದ್ರ ಜಾಗೃತ ಆಯೋಗ (ಸಿವಿಸಿ) ನಡೆಸುತ್ತಿರುವ ತನಿಖೆ ಪೂರ್ಣಗೊಳ್ಳಬೇಕು. ಅಲ್ಲಿಯವರೆಗೂ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ನಿರ್ಬಂಧ ಹೇರಿತ್ತು. ಈ ತೀರ್ಪಿನಿಂದಾಗಿ ಅಲೋಕ್ ವರ್ಮಾ 77 ದಿನಗಳ ಬಳಿಕ ಮತ್ತೆ ಸಿಬಿಐ ನಿರ್ದೇಶಕರಾಗಿ ನಿನ್ನೆ ಅಧಿಕಾರ ವಹಿಸಿಕೊಂಡು ಕಚೇರಿಗೆ ಮರಳಿದ್ದರು.

ಅಲೋಕ್ ವರ್ಮಾ ರಜೆಯ ಮೇಲಿದ್ದ ವೇಳೆಯೇ ಮಧ್ಯಂತರ ನಿರ್ದೇಶಕರನ್ನಾಗಿ ಎಂ.ನಾಗೇಶ್ವರ ರಾವ್ ಅವರನ್ನು ನೇಮಿಸಲಾಗಿತ್ತು. ಈ ವೇಳೆ ವರ್ಮಾ ಆಪ್ತರಾದ 10 ಅಧಿಕಾರಿಗಳ ವರ್ಗಾವಣೆ ಆದೇಶಕ್ಕೆ ನಾಗೇಶ್ವರ ರಾವ್ ಸಹಿ ಹಾಕಿದ್ದರು. ಕಾನೂನು ಸಮರದ ಬಳಿಕ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ವರ್ಮಾ ಅವರು ಬಹುತೇಕ ವರ್ಗಾವಣೆಗಳನ್ನು ರದ್ದು ಮಾಡಿದ್ದರು. ಸುಪ್ರೀಂ ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವಂತಿಲ್ಲ ಎಂದು ಸೂಚಿಸಿದ್ದರು ಆದೇಶಗಳನ್ನು ರದ್ದು ಮಾಡಿದ್ದು ಚರ್ಚೆಗೆ ಕಾರಣವಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *