ಬರದ ವಿರುದ್ಧವೇ ತೊಡೆ ತಟ್ಟಿದ ಗ್ರಾಮಸ್ಥರು

Public TV
2 Min Read

– ಜನಪ್ರತಿನಿಧಿ, ಅಧಿಕಾರಿಗಳೇ ನಾಚುವಂತೆ ಮಾಡಿದ್ದಾರೆ ಗ್ರಾಮಸ್ಥರು

ಚಿಕ್ಕಮಗಳೂರು: ಪ್ರಕೃತಿಯ ವೈಚಿತ್ರ್ಯಕ್ಕೆ ಕಾಫಿನಾಡು ಹತ್ತಾರು ವರ್ಷಗಳಿಂದ ಕೊರಗುತ್ತಿದೆ. ಮಲೆನಾಡು, ಅರೆಮಲೆನಾಡು ಹಾಗೂ ಬಯಲುಸೀಮೆ ಮೂರು ಹವಾಮಾನವನ್ನ ಹೊಂದಿರುವ ಕಾಫಿನಾಡಿನ ಕಡೂರು ಶಾಶ್ಚತ ಬರಗಾಲಕ್ಕೆ ತುತ್ತಾದ ತಾಲೂಕು. ಇಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ಹಾಹಾಕಾರ. ಆದರೆ ಕಡೂರಿನ ಪಿಳ್ಳೇನಹಳ್ಳಿ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಶಾಪವಾಗಿದ್ದ ಬರಗಾಲವನ್ನ ತಾವೇ ಮೆಟ್ಟಿ ನಿಂತು, ಗ್ರಾಮವನ್ನ ಹಸಿರಾಗಿಸಿಕೊಂಡಿದ್ದಾರೆ.

ಪಿಳ್ಳೇನಹಳ್ಳಿಯಿಂದ 6 ಕಿ.ಮೀ. ದೂರದಲ್ಲಿರೋ ವೇದಾವತಿ ನದಿಯಿಂದ ತಮ್ಮ ಗ್ರಾಮಕ್ಕೆ ನೀರು ತಂದುಕೊಂಡಿದ್ದಾರೆ. ಊರಿನ ಜನರೇ ಚಂದಾ ಎತ್ತಿ ಒಂದು ಲಕ್ಷಕ್ಕೂ ಅಧಿಕ ಹಣವನ್ನ ಸಂಗ್ರಹಿಸಿಕೊಂಡು ಪೈಪ್ ಹಾಗೂ ಮೋಟರ್‍ಗಳನ್ನ ತಾವೇ ತಂದು ಶ್ರಮದಾನದ ಮೂಲಕ ಆರು ಕಿ.ಮೀ. ಪೈಪ್ ಹಾಕಿಕೊಂಡು ನೀರು ತಂದಿದ್ದಾರೆ. ಹಳ್ಳಿಗರ ಭಗೀರಥ ಪ್ರಯತ್ನದಿಂದ ಇಂದು ಗ್ರಾಮದಲ್ಲಿನ ಕೆರೆಗಳು ತುಂಬಿದ್ದು ಜನ-ಜಾನುವಾರುಗಳಿಗೆ ಕುಡಿಯೋಕೆ ನೀರು ಸಿಗುವಂತಾಗಿದೆ.

ವೇದಾವತಿ ನದಿ ಕೂಡ 12 ವರ್ಷಗಳಿಂದ ಬತ್ತಿದ್ದು, ಈ ವರ್ಷ ಮೈದುಂಬಿ ಹರಿಯುತ್ತಿದೆ. ರಾಜಕಾರಣಿಗಳು, ಅಧಿಕಾರಿಗಳಿಗೆ ಮನವಿ ಮಾಡಿ ಸುಸ್ತಾಗಿದ್ದ ಹಳ್ಳಿಗರು, ತಮ್ಮ ದಾಹವನ್ನ ತಾವೇ ನೀಗಿಸಿಕೊಳ್ಳೋಕೆ ಮುಂದಾಗಿ ಸೈ ಎನ್ನಿಸಿಕೊಂಡಿದ್ದಾರೆ. ಗ್ರಾಮಸ್ಥರೇ ಮುಂದೆ ನಿಂತು ಕೃತಕ ನಾಲೆ ನಿರ್ಮಿಸಿಕೊಂಡು 6 ಕಿ.ಮೀ. ದೂರದಿಂದ ತಮ್ಮ ಊರಿಗೆ ನೀರು ತಂದುಕೊಂಡಿದ್ದಾರೆ. ಅಲ್ಲಿಂದ 15 ಹೆಚ್.ಪಿ. ಸಾಮರ್ಥ್ಯದ ಎರಡು ಮೋಟರ್ ಗಳನ್ನ ಬಳಸಿಕೊಂಡು ಗ್ರಾಮಕ್ಕೆ ನೀರು ಹಾಯಿಸಿಕೊಂಡಿದ್ದಾರೆ.

ಗ್ರಾಮಸ್ಥರು ಹಾಗೂ ಗ್ರಾಮದ ಯುವಕರ ಕೆಲಸಕ್ಕೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಸಹಕರಿಸಿದರೆ ಗ್ರಾಮಕ್ಕೆ ಶಾಶ್ವತ ನೀರಿನ ಮೂಲ ಸಿಗುವುದರಲ್ಲಿ ಅನುಮಾನವಿಲ್ಲ. ಶಾಸಕರು ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಲಹೆ ನೀಡುವುದರ ಜೊತೆ ಈ ಯೋಜನೆಯನ್ನ ಶಾಶ್ವತ ಯೋಜನೆಯನ್ನಾಗಿಸಬೇಕೆಂದು ಸ್ಥಳೀಯರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಈ ಗ್ರಾಮದ ಜನರ ಕೆಲಸ ರಾಜ್ಯಕ್ಕೆ ಮಾದರಿಯಾಗುವಂತದ್ದು. ಶಾಶ್ಚತ ನೀರಾವರಿ ಯೋಜನೆಗೆ ಹತ್ತಾರು ವರ್ಷ ಸಮಯ ಕೇಳುವ ಅಧಿಕಾರಿಗಳು ಹಾಗೂ ರೈತರ ಉದ್ಧಾರವೇ ನಮ್ಮ ಗುರಿ ಅಂತಾ ಮಾರುದ್ಧ ಭಾಷಣ ಬಿಗಿಯೋ ರಾಜಕಾರಣಿಗಳಿಗೂ ಈ ಗ್ರಾಮದ ಜನ ಮಾದರಿಯಾಗಿದ್ದಾರೆ. ರೈತರೇ ಮಾಡಿಕೊಂಡಿರೋ ಈ ಯೋಜನೆಗೂ ಸರ್ಕಾರ ಕಲ್ಲು ಹಾಕದೆ, ಅಭಿವೃದ್ಧಿಪಡಿಸೋ ನಿಟ್ಟಿನಲ್ಲಿ ಯೋಚಿಸಲಿ ಅನ್ನೋದು ಬಯಲುಸೀಮೆಯ ಜನರ ಆಶಯ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *