ʻದೈಹಿಕ ಸಂಬಂಧʼ ಅಂದ್ರೆ ಲೈಂಗಿಕ ದೌರ್ಜನ್ಯ ಎಂದರ್ಥವಲ್ಲ – ಪೋಕ್ಸೋ ಕೇಸ್‌ ಆರೋಪಿ ಖುಲಾಸೆಗೊಳಿಸಿದ ದೆಹಲಿ ಹೈಕೋರ್ಟ್

Public TV
2 Min Read

ನವದೆಹಲಿ: ಪೋಕ್ಸೊ ಪ್ರಕರಣದಲ್ಲಿ (POCSO case) ಬಂಧಿತನಾಗಿದ್ದ ಆರೋಪಿಯನ್ನು ದೆಹಲಿ ಹೈಕೋರ್ಟ್‌ (Delhi High Court) ಇತ್ತೀಚೆಗೆ ಖುಲಾಸೆಗೊಳಿಸಿದೆ. ಅಲ್ಲದೇ ʻದೈಹಿಕ ಸಂಬಂಧʼ ಅಂದ್ರೆ ಲೈಂಗಿಕ ದೌರ್ಜನ್ಯ ಎಂದರ್ಥವಲ್ಲ ಎಂದು ಕೋರ್ಟ್‌ ಹೇಳಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪ್ರತಿಬಾ ಎಂ ಸಿಂಗ್ ಮತ್ತು ಅಮಿತ್ ಶರ್ಮಾ ಅವರಿದ್ದ ಪೀಠವು, ಸಂತ್ರಸ್ತೆಯ ಹೇಳಿಕೆ ಲೈಂಗಿಕ ಸಂಭೋಗ ಅಥವಾ ಲೈಂಗಿಕ ದೌರ್ಜನ್ಯವನ್ನು ಸೂಚಿಸುತ್ತಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸ್ಫೋಟ – ಮತ್ತಿಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು, ಸಾವಿನ ಸಂಖ್ಯೆ 6ಕ್ಕೇರಿಕೆ!

ಸಂತ್ರಸ್ತೆ ವಾಸ್ತವವಾಗಿ ದೈಹಿಕ ಸಂಬಂಧ ಎಂಬ ಪದಗುಚ್ಛ ಬಳಸಿದ್ದು, ಈ ಪದವನ್ನು ಆಕೆ ಹೇಗೆ ಅರ್ಥೈಸಿದ್ದಾಳೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಪೋಕ್ಸೋ ಕಾಯ್ದೆಯ ಸೆಕ್ಷನ್-3 ಅಥವಾ ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಅಪರಾಧ ಸಾಬೀತಾಗಲು ʻಸಂಬಂಧ ಏರ್ಪಟ್ಟಿತ್ತುʼ ಎಂಬ ಪದ ಬಳಕೆ ಸಾಲದು. ಪೋಕ್ಸೋ ಕಾಯ್ದೆ ಅಡಿಯಲ್ಲಿ ಬಾಲಕಿ ಅಪ್ರಾಪ್ತ ವಯಸ್ಕಳಾಗಿದ್ದರೆ ಒಪ್ಪಿಗೆ ಅಪ್ರಸ್ತುತವಾಗಿದ್ದರೂ ಲೈಂಗಿಕ ದೌರ್ಜನ್ಯ ನಡೆಯದೇ ಇರುವಾಗ ದೈಹಿಕ ಸಂಬಂಧ ಎಂಬ ಪದಗುಚ್ಛವನ್ನು ಲೈಂಗಿಕ ಸಂಭೋಗ ಎಂದು ತನ್ನಿಂತಾನೇ ಪರಿವರ್ತಿಸಲಾಗದು ಎಂದು ಕೋರ್ಟ್‌ ವಿವರಿಸಿದೆ.

ಅಪ್ರಾಪ್ತ ಸಂತ್ರಸ್ತೆಯು ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಸ್ಪಷ್ಟವಾಗಿ ಹೇಳಿಲ್ಲ. ಇಲ್ಲವೇ ಆಕೆಯ ಹೇಳಿಕೆಯನ್ನು ಬೆಂಬಲಿಸುವಂತಹ ಸಾಕ್ಷ್ಯಗಳೂ ಇಲ್ಲ. ಆಕೆ ಸ್ವಯಂಪ್ರೇರಣೆಯಿಂದ ಮೇಲ್ಮನವಿದಾರರೊಂದಿಗೆ ತೆರಳಿದ್ದಾಳೆ ಎಂಬ ಅಂಶವನ್ನೂ ಪ್ರಶ್ನಿಸಲಾಗಿಲ್ಲ. ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನುವುದನ್ನು ಸಾಕ್ಷ್ಯಗಳ ಮೂಲಕ ಸಾಬೀತುಪಡಿಸಬೇಕೆ ಹೊರತು ಊಹೆಯಿಂದ ಅದನ್ನ ನಿರ್ಣಯಿಸಲಾಗದು. ಅಂತಹ ಪ್ರಕರಣಗಳಲ್ಲಿ, ಶಂಕೆಯ ಲಾಭವು ಆರೋಪಿಯ ಪರವಾಗಿರುತ್ತದೆ ಎಂದು ನ್ಯಾಯಪೀಠ ಹೇಳಿದೆ. ಇದನ್ನೂ ಓದಿ: ಸಾರಿಗೆ ಮುಷ್ಕರ ಕೈಬಿಡುವಂತೆ ಸರ್ಕಾರ ಮನವಿ – ಸಿಎಂ 2,000 ಕೋಟಿ ಬಿಡುಗಡೆ ಮಾಡಿದ್ದಾರೆ: ರಾಮಲಿಂಗಾ ರೆಡ್ಡಿ

ಅಲ್ಲದೇ ಸಂತ್ರಸ್ತೆ ತನ್ನ ಮೇಲೆ ದೈಹಿಕ ಹಲ್ಲೆ ಇಲ್ಲವೇ ತಪ್ಪು ಕೆಲಸ ನಡೆದಿಲ್ಲ ಎಂದು ಹೇಳಿರುವುದನ್ನು ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ದೈಹಿಕ ಗಾಯ ಅಥವಾ ಲೈಂಗಿಕ ದೌರ್ಜನ್ಯ ನಡೆದಿರುವ ಚಿಹ್ನೆಗಳಿಲ್ಲ ಎಂಬುದನ್ನು ಗಮನಿಸಿದ ಕೋರ್ಟ್‌ ವಿಚಾರಣಾ ನ್ಯಾಯಾಲಯ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದಕ್ಕೆ ಯಾವುದೇ ತರ್ಕ ಒದಗಿಸಿಲ್ಲ ಎಂದು ತಿಳಿಸಿತು. ಮೇಲ್ಮನವಿದಾರ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ವಿಚಾರಣಾ ನ್ಯಾಯಾಲಯ ಯಾವ ರೀತಿ ತೀರ್ಮಾನಿಸಿತು ಎಂಬುದು ಅಸ್ಪಷ್ವವಾಗಿದೆ. ಸಂತ್ರಸ್ತೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಳು ಎಂಬ ಅಂಶ ಒಳಪ್ರವೇಶಿಕೆಯ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ತೀರ್ಮಾನಕ್ಕೆ ಕಾರಣವಾಗದು ಎಂದ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿತು. ಇದನ್ನೂ ಓದಿ: ಪಾಕ್‌ ವಿರುದ್ಧ ರೋಚಕ ಜಯ – WTC ಫೈನಲ್‌ಗೆ ದ.ಆಫ್ರಿಕಾ, ಭಾರತಕ್ಕೆ ಗೆಲುವೊಂದೇ ದಾರಿ

Share This Article